ನಾಳೆಯೇ ಬಿಜೆಪಿ ಶಾಸಕಾಂಗ ಸಭೆ: ಈ ಮೂವರಲ್ಲಿ ಯಾರು ವಿಪಕ್ಷ ನಾಯಕ? ಅವರಬಿಟ್ಟು ಇವರಬಿಟ್ಟು ಮತ್ಯಾರು?
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಕ್ರವಾರ (ನವೆಂಬರ್ 17) ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ನಾಳೆ ಅಂದರೆ ನವೆಂಬರ್ 17ರಂದು ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಹುದ್ದೆಗೆ ಪ್ರಮುಖ ಮೂವರ ಹೆಸರುಗಳು ಕೇಳಿಬರುತ್ತಿವೆ.
ಬೆಂಗಳೂರು (ನವೆಂಬರ್ 16): ಬಿಜೆಪಿಯ(BJP) ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (BY VIjayednra)ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಕ್ರವಾರ (ನವೆಂಬರ್ 17) ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ (Karnataka Opposition leader)ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಈ ಸಭೆಗೆ ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದು, ವಿರೋಧ ಪಕ್ಷದ ನಾಯಕ ಆಯ್ಕೆ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ವಿಪಕ್ಷ ಸ್ಥಾನಕ್ಕೆ ಪ್ರಮುಖವಾಗಿ ಮೂವರ ಹೆಸರುಗಳು ಓಡಾಡುತ್ತಿವೆ.
ಈ ಮೂವರಲ್ಲಿ ಯಾರು ವಿಪಕ್ಷ ನಾಯಕ?
ಇನ್ನು ಈ ಸ್ಥಾನಕ್ಕೆ ಮೂವರ ಹೆಸರುಗಳು ಓಡಾಡುತ್ತಿವೆ. ಶಾಸಕರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರ ಹೆಸರುಗಳು ವಿಪಕ್ಷ ನಾಯಕನ ಹುದ್ದಗೆ ಕೇಳಿಬರುತ್ತಿವೆ. ಈ ಮೊದಲು ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಲಿಂಗಾಯತ ಸಮುದಾಯದ ನಾಯಕನಿಗೆ ನೀಡುವ ಬಗ್ಗೆ ಬಗ್ಗೆ ಚರ್ಚೆಯಾಗಿತ್ತು. ಆದ್ರೆ, ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ವಿರೋಧ ಪಕ್ಷದ ಹುದ್ದೆಯನ್ನು ಒಕ್ಕಲಿಗ ಅಥವಾ ಹಿಂದೂಳಿದ ವರ್ಗದ ನಾಯಕನಿಗೆ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಬಳಿಕ ಕೆಪಿಸಿಸಿಯಲ್ಲಿ ಮಹತ್ವದ ಬದಲಾವಣೆ: ಕಾಂಗ್ರೆಸ್ ಸುಳಿವು
ಒಕ್ಕಲಿಗ ಕೋಟಾದಡಿಯಲ್ಲಿ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ ಹೆಸರು ಮುನ್ನಲೆಗೆ ಬಂದಿವೆ. ಇನ್ನು ಹಿಂದೂಳಿದ ವರ್ಗ ಕೋಟಾದಡಿಯಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿರುವ ಸುನಿಲ್ ಕುಮಾರ್ ಅವರಿಗೆ ನೀಡುವ ಸಾಧ್ಯತೆಗಳಿವೆ. ಇನ್ನು ಹೈಕಮಾಂಡ್ ಅಚ್ಚರಿ ಎಂಬಂತೆ ಈ ಮೂವರು ನಾಯಕರನ್ನು ಹೊರತುಪಡಿಸಿ ಬೇರೆ ನಾಯಕನಿಗೂ ಮಣೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ.
ಕೋಟ ಶ್ರೀನಿವಾಸ ಪೂಜಾರಿ ಮೇಲ್ಮನೆ ವಿಪಕ್ಷ ನಾಯಕ?
ಇನ್ನು ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹೆಸರು ಕೇಳಿಬಂದಿದೆ. ಕಳೆದ ಬಾರಿ ಶ್ರೀನಿವಾಸ ಪೂಜಾರಿ ಅವರೇ ಪರಿಷತ್ ವಿಪಕ್ಷ ನಾಯಕರಾಗಿದ್ದರು.ಈ ಬಾರಿಯೂ ಸಹ ಹೈಕಮಾಂಡ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಇಲ್ಲ ಅಂದ್ರೆ ಎನ್ ರವಿ ಕುಮಾರ್ ಅವರನ್ನು ಮೇಲ್ಮನೆ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಬಹುದು.
ನಾಳೆಯೇ ವಿರೋಧ ಪಕ್ಷದ ನಾಯಕನ ಆಯ್ಕೆ ಅಂತಿಮವಾಗುತ್ತಾ?
ಶಾಸಕಾಂಗ ಸಭೆಯಲ್ಲೇ ವಿಪಕ್ಷ ನಾಯಕರ ಯಾರು ಎನ್ನುವುದು ಅಂತಿಮವಾಗುತ್ತೆ ಅಷ್ಟೇ. ಆದ್ರೆ, ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳು ಕಡಿಮೆ ಇವೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಕೇಂದ್ರದ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ. ಅಲ್ಲದೇ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಆ ವೇಳೆ ಹೈಕಮಾಂಡ್ ನಾಯಕರು ವಿಜಯೇಂದ್ರ ಜೊತೆ ಚರ್ಚಿಸಿ ಅಧಿಕೃತ ಘೋಷಣೆ ಮಾಡಬಹುದು.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಬಿಜೆಪಿಯಲ್ಲಿ ಆರು ತಿಂಗಳ ಬಳಿಕ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಯಾರಿಗೆ ಯಾವೆಲ್ಲಾ ಸ್ಥಾನಮಾನಗಳು ಸಿಗಲಿವೆ ಎನ್ನುವ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ