ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರ ಸಂಬಂಧ ಸೆ.26ರಂದು ಬೆಂಗಳೂರು ಬಂದ್ ಮಾಡಿ ರೈತರು ಹಾಗೂ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಇನ್ನು ಮತ್ತೊಂದೆಡೆ ದೆಹಲಿಯ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ CWRC ಆದೇಶ ನೀಡಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು ಪ್ರತಿಭಟನೆ ಮುಂದುವರೆಸಿದ್ದಾರೆ. ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಮುಂದುವರೆಯಲಿದೆ. ಇದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ನಾವು ಯಾವುದೇ ಎಂ.ಪಿ ನೋಡಿ ಮತ ಹಾಕೋದ ಬೇಕಿಲ್ಲ. ನಾವು ಮೋದಿನಾ ನೋಡಿ ಮತ ಹಾಕಬೇಕು. ಹಿಂದೂಗಳೆ ಹೆದರಬೇಡಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹಾವೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾಳೆ ಈದ್ ಮಿಲಾದ್ ಹಬ್ಬ ಹಿನ್ನೆಲೆ ಬೆಂಗಳೂರು ನಗರದಲ್ಲಿ ಮಾರ್ಗ ಬದಲಾವಣೆ ಮಾಡಿ ನಗರ ಸಂಚಾರಿ ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ನೃಪತುಂಗ, ಅಂಬೇಡ್ಕರ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕಿಂಕೋ ಜಂಕ್ಷನ್, ಬಾಪೂಜಿನಗರ, ಮಾರ್ಕೆಟ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದೆ.
ಈದ್ ಮಿಲಾದ್; ಗಮನಿಸಿ – ಬೆಂಗಳೂರಿನ ಈ ರಸ್ತೆಗಳಲ್ಲಿ ಗುರುವಾರ ಸಂಚಾರ ನಿರ್ಬಂಧವಿದೆ
ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬಿಡುಗಡೆ ಆಗಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ್ದ ಅಮೃತ್ ಪಾಲ್, ಸೆ.25ರಂದು ಅಮೃತ್ ಪಾಲ್ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಆದೇಶ ಪ್ರತಿ ಇಂದು ಜೈಲಿಗೆ ತಲುಪಿದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ.
ಚಾಮರಾಜನಗರ ಕೆಡಿಪಿ ಸಭೆಯಲ್ಲಿ ಆಕ್ಸಿಜನ್ ದುರಂತ ಪ್ರತಿಧ್ವನಿಸಿದ್ದು, ಮೃತರ ಕುಟುಂಬಗಳಿಗೆ ಖಾಯಂ ಉದ್ಯೋಗಕ್ಕೆ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆಕ್ಸಿಜನ್ ದುರಂತದಲ್ಲಿ 32 ಕೊರೊನಾ ರೋಗಿಗಳು ಮೃತಪಟ್ಟಿದ್ದರು.
ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು, ಇಲ್ಲದಿದ್ದರೆ ಸಮಸ್ಯೆ ಎಂದು ಚಾಮರಾಜನಗರದಲ್ಲಿ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ 4 ಗ್ಯಾರಂಟಿ ಜಾರಿ, ಜನವರಿಯಲ್ಲಿ 5ನೇ ಗ್ಯಾರಂಟಿ ಜಾರಿ ಮಾಡಲಾಗುವುದು. ಜನರಿಗೆ ಗ್ಯಾರಂಟಿ ತಲುಪಿಸುವ ಕೆಲಸ ಮಾಡಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.
ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಚಾಮರಾಜನಗರ ಡಿಸಿ ಕಚೇರಿಯಲ್ಲಿ ರೈತ ಮುಖಂಡರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ. ಅದೇ ರೀತಿಯಾಗಿ ಕಬ್ಬಿನ ಬಾಕಿ, ಪಂಪ್ಸೆಟ್ಗೆ 10 ಗಂಟೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಲಾಗಿದೆ.
ಕನಕ ಸಂಕೀರ್ಣ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡಿದ್ದೇನೆ ಎಂದು ಚಾಮರಾಜನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇವತ್ತು ನಾನು ಬರುವುದನ್ನು ತಿಳಿದು ಶಂಕುಸ್ಥಾಪನೆ ಮಾಡಿಸಿದ್ದಾರೆ. ಕನಕ ಸಂಕೀರ್ಣ ನಿರ್ಮಾಣಕ್ಕೆ 4 ಕೋಟಿ ರೂ. ಖರ್ಚಾಗಲಿದೆ. ಉಳಿದ ಹಣ ಕೊಡುತ್ತೇನೆ, ಹಾಗಂತ ಎಲ್ಲಾ ಹಣ ಕೊಡಲು ಆಗಲ್ಲ. ನೀವು ಸ್ವಲ್ಪ ಹಣ ಹಾಕಿ ಕಟ್ಟಡದ ಕಾಮಗಾರಿ ಮುಗಿಸಿ. ನಾನೇ ಮುಖ್ಯಮಂತ್ರಿಯಾಗಿ ಬಂದು ಕಟ್ಟಡ ಉದ್ಘಾಟನೆ ಮಾಡ್ತೇನೆ ಎಂದಿದ್ದಾರೆ.
ನಮ್ಮಲ್ಲಿ ನೀರು ಹಂಚಿಕೆ ಹೇಗೆ ಆಗಬೇಕು ಅಂತ ನಿರ್ಧಾರ ಆಗಬೇಕು. ಪ್ರಧಾನಮಂತ್ರಿ ಇದರಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಎರಡೂ ಪಕ್ಷಗಳು ಒಟ್ಟಾಗಿ ಸೇರಿವೆ. ನೀರು ಬಿಡದಂತೆ ಹೋರಾಟ ಮಾಡಬೇಕಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ನವರು ಯಾರ ಜತೆ ಹೋಗಿದ್ದಾರೆ. ಜೆಡಿಎಸ್ ಅಂದರೆ ಜಾತ್ಯತೀತ ಅಂತಾರೆ, ಈಗ ಆ ಪರಿಸ್ಥಿತಿ ಇದೆಯಾ? ಮೊದಲು ಜಾತ್ಯತೀತ ಪದವನ್ನು ಜೆಡಿಎಸ್ ತೆಗೆದುಹಾಕಬೇಕು. ಜಾತ್ಯತೀತ ಅಂದರೆ ಅದರ ಅರ್ಥವೇನು ಅಂತ ಜೆಡಿಎಸ್ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿಯ ಬಿ ಟೀಮ್ ಆಗಿದ್ದರೆ 5 ವರ್ಷ ಸಿಎಂ ಆಗಿರುತ್ತಿದೆ: ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ನಮ್ಮಲ್ಲಿ ನೀರು ಹಂಚಿಕೆ ಹೇಗೆ ಆಗಬೇಕು ಅಂತ ನಿರ್ಧಾರ ಆಗಬೇಕು. ಪ್ರಧಾನಮಂತ್ರಿ ಇದರಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಎರಡೂ ಪಕ್ಷಗಳು ಒಟ್ಟಾಗಿ ಸೇರಿವೆ. ನೀರು ಬಿಡದಂತೆ ಹೋರಾಟ ಮಾಡಬೇಕಿದೆ. ನಮ್ಮ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕನ್ನಡ ಜಾಗೃತಿ ವೇದಿಕೆ ನೇತೃತ್ವದಲ್ಲಿ ಅತ್ತಿಬೆಲೆ ಟೋಲ್ನಿಂದ ತಮಿಳುನಾಡು ಗಡಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ನಿಂದ ಪ್ರತಿಭಟನೆ ನಡೆಯುತ್ತಿದೆ. ಮೈತ್ರಿ ಬಳಿಕ ಮೊದಲ ಬಾರಿಗೆ ಬಿಎಸ್ ಯಡಿಯೂರಪ್ಪರನ್ನು ಹೆಚ್ಡಿ ಕುಮಾರಸ್ವಾಮಿ ಭೇಟಿಯಾಗಿದ್ದಾರೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಸದಾನಂದಗೌಡ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ನ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ HD ದೇವೇಗೌಡ ಹಾಗೂ HD ಕುಮಾರಸ್ವಾಮಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಾನು ಅಲ್ಪಸಂಖ್ಯಾತರೇ ಅಲ್ಲ, ಎಲ್ಲ ಸಮುದಾಯಗಳ ರಕ್ಷಣೆ ಮಾಡುತ್ತೇವೆ. ಬಿಜೆಪಿ ಬಿ ಟೀಮ್ ಅಂತ ಹೇಳ್ತಾ ಇದ್ದಾರೆ ಮಹಾ ನಾಯಕರು. 2018 ರಲ್ಲಿ ಸಿದ್ದರಾಮಯ್ಯ, ಖರ್ಗೆ,ಡಿಕೆಶಿ, ಪರಮೇಶ್ವರ್ ಇದ್ರು. ನಮ್ಮ ಪಕ್ಷಕ್ಕೆ ನನ್ನ ಮಗನಿಗೆ ಸಿಎಂ ಸ್ಥಾನ ಬೇಡ ಅಂತ ದೇವೇಗೌಡರು ಹೇಳಿದ್ರು. ಕಾಂಗ್ರೆಸ್ ಕೇಂದ್ರ ನಾಯಕರು ಇಲ್ಲ ಕುಮಾರಸ್ವಾಮಿ ಸಿಎಂ ಆಗಬೇಕು ಅಂದ್ರು. ಅವತ್ತೆ ಮಧ್ಯಾಹ್ನ 2 ಗಂಟೆಗೆ ಅಮಿಶ್ ಶಾ ಕಾಲ್ ಮಾಡಿದ್ರು. ಅವತ್ತೆ ನಾನು ಒಪ್ಪಿದ್ರೆ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ.
ಆಪರೇಷನ್ ಹಸ್ತ ನಮಗೆ ಅವಶ್ಯಕತೆ ಇಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. JDS-ಬಿಜೆಪಿ ಮೈತ್ರಿ ಬೆನ್ನಲ್ಲೇ ಹಲವರು ಕಾಂಗ್ರೆಸ್ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಅನೇಕರು ಒಲವು ತೋರಿಸುತ್ತಿದ್ದಾರೆ. ಮೂವರು ಮಾಜಿ ಶಾಸಕರು ಪಕ್ಷ ಸೇರುತ್ತೇನೆ ಅಂತ ಹೇಳಿದ್ದಾರೆ. ಮೈತ್ರಿ ವಿರೋಧಿಸಿ ಬಿಜೆಪಿ, ಜೆಡಿಎಸ್ನಿಂದ ಹೊರ ಬರುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಕಾಂಗ್ರೆಸ್ಗೆ ಸೇರುವ ಆಸೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಮಾಡಿದ್ದಾರೆ. ಸ್ಥಳೀಯ ಚುನಾವಣೆ, ಕಾರ್ಪೊರೇಷನ್ ಚುನಾವಣೆ ಸಮೀಪಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ಚುನಾವಣಾಧಿಕಾರಿ ಅಡ್ಡಗಟ್ಟಿ ಬ್ಯಾಲೆಟ್ ಪೆಪರ್, ಲ್ಯಾಪ್‌ಟಾಪ್ ಕಳ್ಳತನ ಮಾಡಲಾಗಿದೆ. ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಉತ್ಪಾದಕ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಚುನಾವಣೆಗೆ ಹೋಗ್ತಿದ್ದ ಉಮೇಶ್, ಉಷಾ ಎಂಬ ಅಧಿಕಾರಿಗಳಿಗೆ ಮಾರಕಾಸ್ತ್ರ ತೋರಿ ಕಳ್ಳತನ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರಿಂದ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ ಎಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಹೆಚ್.ಡಿ.ದೇವೇಗೌಡ ಹೇಳಿದರು. ರಾಹುಲ್ ಗಾಂಧಿ ಬಾಯಿಂದ JDS ಬಿ ಟೀಂ ಅಂತ ಹೇಳಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನ್ ಮಾಡಿದ್ರು ಗೊತ್ತಿಲ್ವಾ? 10 ವರ್ಷಗಳಲ್ಲಿ ಮೊದಲ ಬಾರಿ ನಾನು ಮೈತ್ರಿ ಬಗ್ಗೆ ಮಾತನಾಡಿದ್ದೇನೆ. ಕಾಂಗ್ರೆಸ್ ಮೋಸ ಮಾಡಿರುವ 100 ಉದಾಹರಣೆಗಳನ್ನು ಕೊಡುವೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್ಡಿಡಿ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಆವರಣದಲ್ಲಿ ಕಾವೇರಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ನಳಿನ್ ಕುಮಾರ್ ಕಟೀಲು, ಗೋವಿಂದ ಕಾರಜೋಳ, ಸದಾನಂದಗೌಡ, ಅಶ್ವತ್ಥನಾರಾಯಣ, ಮುನಿರತ್ನ ಸೇರಿ ಹಲವರು ಭಾಗಿಯಾಗಿದ್ದಾರೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ಡಿ ದೇವೆಗೌಡರು ಸುದ್ದಿಗೊಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಹೆಚ್ಡಿಡಿ, ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನ ಭೇಟಿ ಆಗುವ ಮೊದಲು ಹೋಂ ಮಿನಿಸ್ಟರ್ ಬಳಿ ನಾನು ಚರ್ಚೆ ಮಾಡಿದ್ದೇನೆ. ಕದ್ದು ಮುಚ್ಚಿ ಮಾತನಾಡುವ ಅಗತ್ಯ ಇಲ್ಲ. ಕರ್ನಾಟಕ ಪರಿಸ್ಥಿತಿ ಏನಿದೆ ಅಂತ ಶಾ ಅವರತ್ರ ಎಲ್ಲಾ ವಿಚಾರ ಮಾತಾಡಿದ್ದೇನೆ. ಇದನ್ನು ಮೊದಲು ಸರಿ ಮಾಡಿ ನಂತರ ಕುಮಾರಸ್ವಾಮಿ ಅವರು ಬಂದು ಮಾತಾಡ್ತಾರೆ ಎಂದೆ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಟ್ಟಿಲ್ಲ. ಇವತ್ತು ಯಾಕೆ ಹೀಗಾಯ್ತು, ಯಾರು ಇದಕ್ಕೆ ಕಾರಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದದ್ದು ಯಾರು? ಎಂದು ಕಾಂಗ್ರೆಸ್ ವಿರುದ್ಧ ಹೆಚ್ಡಿಡಿ ವಾಗ್ದಾಳಿ ನಡೆಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನಕ್ಕೆ ಸಿಎಂ ಸಿದ್ದರಾಮಯ್ಯ ಮರು ನಾಮಕರಣ ಮಾಡಿದರು. ರಾಷ್ಟಪತಿ ಭವನ ಇನ್ಮುಂದೆ ತಪೋಭವನ ಎಂದು ಕರೆಯಬೇಕು ಎಂದು ವೇದಿಕೆ ಮೇಲೆಯೆ ಮರು ನಾಮಕರಣ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಲ್ಲವೂ ಹೋಯ್ತು ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತು ಕಾವೇರಿ ಹೋಯ್ತು. ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯ್ತು, ರ್ಥಿಕತೆ ಹೋಯ್ತು, ರಾಜ್ಯದಲ್ಲಿ ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು. ಮಹದಾಯಿ ಹೋಯ್ತು, ಭದ್ರಾ ಮೇಲ್ದಂಡೆ ಹೋಯ್ತು ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ @INCKarnataka ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!
✖️ ಕಾಂಗ್ರೆಸ್ ಬಂತು ಕಾವೇರಿ ಹೋಯ್ತು..!
✖️ ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯ್ತು..!
✖️ ಕಾಂಗ್ರೆಸ್ ಬಂತು ಆರ್ಥಿಕತೆ ಹೋಯ್ತು..!
✖️ ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!
✖️ ಕಾಂಗ್ರೆಸ್ ಬಂತು ಮಹದಾಯಿ ಹೋಯ್ತು..!
✖️ ಕಾಂಗ್ರೆಸ್ ಬಂತು…
— BJP Karnataka (@BJP4Karnataka) September 27, 2023
ಕಾವೇರಿ ನೀರು ವಿಚಾರವಾಗಿ ತಮಿಳುನಾಡು ಜೊತೆ ಸಿಎಂ ಮಾತಾಡಲಿ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು. ತಮಿಳುನಾಡು ಸಿಎಂ ಸ್ಟಾಲಿನ್ಗೂ ಸಿದ್ದರಾಮಯ್ಯಗೂ ಸಂಬಂಧ ಚೆನ್ನಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಇಬ್ಬರೂ ತಮಿಳುನಾಡಿಗೆ ಹೋಗಿ ಸಿಎಂ ಸ್ಟಾಲಿನ್ ಜೊತೆ ಮಾತಾಡಿ ರಾಜ್ಯದ ಜನರ ಕಷ್ಟದ ಬಗ್ಗೆ ವಿವರಿಸಿ. ಇದರಿಂದ ನಿಮಗೆ ತಾನೇ ರಾಜಕೀಯ ಲಾಭ ಆಗೋದು. ನೀವು ಯಾಕೆ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬಾರದು? ನೀವು ನಮ್ಮನ್ನು ರಾಜಕಾರಣ ಮಾಡುತ್ತಿದ್ದೀರಿ ಎನ್ನುವುದು ತಪ್ಪುತ್ತದೆ. ನಿಮ್ಮ ಅವರ ನಡುವಿನ ಸಂಬಂಧ ಹೇಗಿದೆ ಅಂತಾ ನನಗೆ ಗೊತ್ತು. ಸಿಎಂ ಸ್ಟಾಲಿನ್ ಜೊತೆ ಸಿದ್ದರಾಮಯ್ಯ, ಡಿಕೆ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ನೀವು ಮಾತಾಡಿದರೆ ತಮಿಳುನಾಡಿನವರು ಯಾವುದೇ ಬೇಡಿಕೆ ಇಡಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಕೆಲ ಪಠ್ಯ ಕೈ ಬಿಟ್ಟಿದ್ದ ಕಾಂಗ್ರೆಸ್ ಸರ್ಕಾರ ಈಗ ಮುಂದಿನ ವರ್ಷದಿಂದ ಹೊಸ ಪಠ್ಯಪುಸ್ತಕ ರಚನೆ ಮಾಡೋದಕ್ಕೆ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪರಿಷ್ಕರಣೆ ರದ್ದು ಮಾಡಿದ್ದ ಸರ್ಕಾರ, ಈಗ ಇಡೀ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದೆ. 1-10 ನೇ ತರಗತಿಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ ಸಂಬಂಧ ಶಿವನಸಮುದ್ರ ಜಲಪಾತದ ಎದುರು ಮಳವಳ್ಳಿಯ ಡಾ ರಾಜ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ಡಾ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ, CWRC ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಟೆಕ್ ಪ್ಯೂಷನ್ ಸನ್ ರೈಸ್ ಶೃಂಗಸಭೆ-2023 ಹಿನ್ನೆಲೆ ಇಂದು ಐಟಿ ಕಂಪನಿಗಳ ಜೊತೆ ಸಚಿವ ಡಾ.ಜಿ.ಪರಮೇಶ್ವರ್ ಸಭೆ ನಡೆಸಲಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಶೃಂಗಸಭೆ ನಡೆಯಲಿದ್ದು ಟ್ರಾಫಿಕ್ ನಿಯಂತ್ರಣ, ಉದ್ಯೋಗಿಗಳ ಸುರಕ್ಷತೆ
ಪ್ರಮುಖವಾಗಿ ಮಹಿಳಾ ಉದ್ಯೋಗಿಗಳ ಸುರಕ್ಷತೆ, ಅಭಿವೃದ್ಧಿ, ಸಮುದಾಯ ಕೇಂದ್ರಿತ ಪೊಲೀಸಿಂಗ್ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಭಾಗಿಯಾಗಲಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರ ಬಳಿಯ ಬೆಳ್ಳೂರು ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ KSRTC ಬಸ್ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಬೆಂಗಳೂರು ಮೂಲದವರು.
ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. CWRC ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸದ್ಯ ನಮ್ಮ ಬಳಿ ನೀರು ಇಲ್ಲ, ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕಾವೇರಿ ನೀರು ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದರು.
ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಐಟಿಬಿಟಿಗೆ ಸೇರಿದ ಕೆಲ ಖಾಸಗಿ ಕಂಪನಿಗಳ ಮೇಲೆ ಐಟಿ ದಾಳಿ ನಡೆಸಿದೆ. ಬಾಗಮನೆ ಟೆಕ್ಪಾರ್ಕ್ನ ಕೆಲ ಖಾಸಗಿ ಕಂಪನಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆ ಸಿ.ವಿ.ರಾಮನ್ ನಗರ, ಹುಳಿಮಾವು ಸೇರಿ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಯುತ್ತಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಬೈಕ್ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟಬಂಡೆ ಗ್ರಾಮದ ಈಶ್ವರಪ್ಪ(36), ನಾಗರಾಜು(42) ಮೃತ ದುರ್ದೈವಿಗಳು. ಘಟನೆಯಲ್ಲಿ ಚಿಕ್ಕತಿಮ್ಮನಹಟ್ಟಿ ಗ್ರಾಮದ ದರ್ಶನ್(28) ಎಂಬಾತನಿಗೆ ಗಾಯಗಳಾಗಿವೆ. ಗೌರಸಂದ್ರ ಮಾರಮ್ಮ ಜಾತ್ರೆ ಮುಗಿಸಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೆ, ತುಮಕೂರಿನಲ್ಲಿ ಜೆಡಿಎಸ್ನ ಮತ್ತೊಂದು ವಿಕೆಟ್ ಪತನಗೊಂಡಿದೆ. ಅಲ್ಪಸಂಖ್ಯಾತರ ಮುಖಂಡ ಹಾಗೂ ಮಾಜಿ ಶಾಸಕ ಶಫೀ ಅಹಮದ್ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ. ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ರಾಜ್ಯಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತೆನೆ ಇಳಿಸಿ ಕೈ ಹಿಡಿಯಲು ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಜೆಆರ್ಎಸ್ ಜಲಾಶಯದ ಗರಿಷ್ಠಮಟ್ಟ 124.80 ಅಡಿ ಇದೆ. ಇಂದಿನ ಮಟ್ಟ 97.00 ಅಡಿ. ಒಳಹರಿವು 7451 ಕ್ಯೂಸೆಕ್. ಹೊರಹರಿವು 5691 ಕ್ಯೂಸೆಕ್. ಕಾವೇರಿ ನದಿಗೆ 3575 ಕ್ಯೂಸೆಕ್. ಟಿಎಂಸಿ ಲೆಕ್ಕದಲ್ಲಿ 49.452. ಇಂದಿನ ಟಿಎಂಸಿ 20.548 ಇದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಉಡುವಳ್ಳಿ ಬಳಿಯ ನವೋದಯ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ನಿನ್ನೆ ಬೆಳಗ್ಗೆ ಉಪಾಹಾರ ಸೇವಿಸಿದ್ದ ವಿದ್ಯಾರ್ಥಿಗಳು ನಿನ್ನೆ ಸಂಜೆ 8ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. 8 ವಿದ್ಯಾರ್ಥಿಗಳಿಗೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ಸಿಎಂ ಸಿದ್ದರಾಮಯ್ಯ ಅಳಿಸಿ ಹಾಕಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ 12 ಬಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯ ಇಂದು ಚಾಮರಾಜನಗರಕ್ಕೆ ಮತ್ತೆ ಭೇಟಿ ನೀಡಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ತಾರೆ ಎಂಬ ಮೂಢನಂಬಿಕೆ ತೊಡೆದು ಹಾಕಿದ್ದಾರೆ. ವೀರೇಂದ್ರ ಪಾಟೀಲ್ 1991 ರಲ್ಲಿ ಚಾಮರಾಜನಗರಕ್ಜೆ ಬಂದು ಹೋಗಿದ್ದೆ ಕೊನೆ. ಆಗಿನಿಂದ ಚಾಮರಾಜನಗಕ್ಕೆ ಈ ಕಳಂಕ ಅಂಟಿಕೊಂಡಿತ್ತು. ಈ ಮೌಢ್ಯಕ್ಕೆ ಬೆದರಿದ ಎಸ್. ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಇತ್ತ ಕಾಲಿಟ್ಟಿರಲಿಲ್ಲ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಪ್ರತಿಭಟನೆ ನಡೆಸಲು ಬಿಜೆಪಿ, ಜೆಡಿಎಸ್ ಮುಂದಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಸೇರಿದಂತೆ 2 ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.
ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ. ನಿನ್ನೆ ಧರಣಿನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೋರಾಟವನ್ನು ಹತ್ತಿಕ್ಕುವ ಪೊಲೀಸ್ ನಡೆ ಖಂಡಿಸಿ ಇಂದು ಪ್ರತಿಭಟನೆ ನಡೆಯಲಿದೆ.
Published On - 8:04 am, Wed, 27 September 23