ಕರ್ನಾಟಕ ಬಜೆಟ್ 2021: ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ, ಸಿಎಂ ಯಡಿಯೂರಪ್ಪ ಮುಂದಿವೆ ಸಾಕಷ್ಟು ಸವಾಲುಗಳು

|

Updated on: Mar 08, 2021 | 7:36 AM

ಕರ್ನಾಟಕ ಬಜೆಟ್ 2021: ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ವಿಧಾನಸೌದದಲ್ಲಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ.

ಕರ್ನಾಟಕ ಬಜೆಟ್ 2021: ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ, ಸಿಎಂ ಯಡಿಯೂರಪ್ಪ ಮುಂದಿವೆ ಸಾಕಷ್ಟು ಸವಾಲುಗಳು
ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ವಿಧಾನಸೌದದಲ್ಲಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ಆದಾಯದ ಕೊರತೆ ಇದ್ದರೂ ಸಹ ಪ್ರಸಕ್ತ ವರ್ಷದಲ್ಲಿ ಈ ಬಾರಿಯ ಬಜೆಟ್​​ ಗಾತ್ರ ₹2.40 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ, ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸದಿರುವ ಅನಿವಾರ್ಯತೆ ಬಿಎಸ್​ವೈ ಸರ್ಕಾರದ ಮುಂದಿದೆ. ಹೀಗಾಗಿ ಈ ಬಜೆಟ್​ನಲ್ಲಿ ತೆರಿಗೆ ಹೊರೆ ಕಡಿಮೆ ಮಾಡುವ ಸಾಧ್ಯತೆ ಇದೆ.

ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆ ಯಥಾಸ್ಥಿತಿ ಇರುವ ಸಾಧ್ಯತೆಗಳಿದ್ದು, ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ನಿರೀಕ್ಷೆಗಳಿವೆ. ಇತರ ತೆರಿಗೆ ಮೂಲಗಳಾದ ಮೋಟಾರು ವಾಹನ ತೆರಿಗೆ, ನೋಂದಣಿ, ಮುದ್ರಾಂಕ ಶುಲ್ಕ ಹೆಚ್ಚಳ ಮಾಡಬಹುದು. ಎಲ್ಲಾ ಉತ್ಪನ್ನಗಳು ಜಿಎಸ್​​ಟಿ ವ್ಯಾಪ್ತಿಗೆ ಬರುವುದರಿಂದ ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವಂತಹ ಅವಕಾಶ ಇಲ್ಲ.

ಇಲಾಖೆಗಳ ಅನುದಾನ ಕಡಿತ ಸಾಧ್ಯತೆ
ಕೆಲವು ಇಲಾಖೆಗಳ ಅನುದಾನ ಕಡಿತದ ಬಗ್ಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುನ್ಸೂಚನೆ ಸೂಚನೆ ನೀಡಲಾಗಿದೆ. ಅದರಂತೆ ಕೆಲವು ಇಲಾಖೆಗಳ ಅನುದಾನ ಕಡಿತವಾಗಬಹುದು. ಇನ್ನು ಕೆಲ ಇಲಾಖೆಗಳ ಅನುದಾನ ಶೇ.15-30ರಷ್ಟು ಕಡಿತವಾಗಬಹುದು. ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಸಕ್ಕರೆ ಇಲಾಖೆಗಳ ಅನುದಾನಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಅದರ‌ ಜೊತೆಗೆ ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ, ಮುಜರಾಯಿ, ಪೌರಾಡಳಿತ, ಗಣಿ & ಭೂ ವಿಜ್ಞಾನ ಇಲಾಖೆ, ಆಹಾರ & ನಾಗರಿಕ ಪೂರೈಕೆ ಇಲಾಖೆ ಅನುದಾನಕ್ಕೂ ಕತ್ತರಿ ಬಿಳಬಹುದು ಎನ್ನಲಾಗಿದೆ.

ಯೋಜನೆಗಳನ್ನು ಸಮೀಕರಿಸಿ ಅನಗತ್ಯ ವೆಚ್ಚಕ್ಕೆ ಕಡಿವಾಣ
ಕೇಂದ್ರದ ಮಾದರಿಯಲ್ಲಿ, ರಾಜ್ಯದ ಯೋಜನೆಗಳನ್ನು ಸಮೀಕರಿಸಲು ತೀರ್ಮಾನ ಮಾಡಲಾಗಿದ್ದು, ಈಗಾಗಲೇ ರಾಜ್ಯ ಯೋಜನಾ ಮಂಡಳಿಯಿಂದ 1,745 ರಾಜ್ಯ ಯೋಜನೆಗಳನ್ನ ಸಮೀಕರಿಸಲು ಶಿಫಾರಸು ಮಾಡಲಾಗಿದೆ.

2020-21ನೇ ಸಾಲಿನ ಬಜೆಟ್​ನಲ್ಲಿ ಯೋಜನೆ ಘೋಷಣೆ
2020-21ನೇ ಸಾಲಿನ ಬಜೆಟ್​ನಲ್ಲಿ 1,863 ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ 1 ಕೋಟಿಗೂ ಹೆಚ್ಚು ಅನುದಾನಿತ 368 ಯೋಜನೆಗಳು, 1-10 ಕೋಟಿ ರೂ. ಅನುದಾನಿತ 616 ಯೋಜನೆಗಳು, 10-100 ಕೋಟಿ ರೂ. ಅನುದಾನಿತ 612 ಯೋಜನೆಗಳು, 100 ಕೋಟಿ ‌ಮೇಲ್ಪಟ್ಟ ಅನುದಾನಿತ 267 ಯೋಜನೆಗಳಿವೆ. ₹1 ಕೋಟಿಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳ ಜತೆ ವಿಲೀನಗೊಳಿಸಲು ಸಿಎಂ ಒಪ್ಪಿಗೆ ನೀಡಿದ್ದಾರೆ.

ಬಜೆಟ್​ನಲ್ಲಿ ತೆರಿಗೆಯೇತರ ಆದಾಯಕ್ಕೆ ಹೆಚ್ಚಿನ ಆದ್ಯತೆ
ಕೇಂದ್ರದಂತೆ ರಾಜ್ಯ ಸರ್ಕಾರ ಖಾಸಗಿ ಪಾಲುದಾರಿಕೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸಾಧ್ಯತೆ ಇದೆ. ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರದ‌‌‌ ಮೇಲೆ ಹೊರೆ ಕಡಿಮೆಗೊಳಿಸಿ, ಹೆಚ್ಚು ಆದಾಯ ಕ್ರೋಡೀಕರಣ ಮಾಡುವ ಚಿಂತನೆ ಇದೆ. ಹೀಗಾಗಿ ಈ ಬಾರಿ ಪಿಪಿಪಿ ಮಾದರಿಯಡಿ ಯೋಜನೆ ಘೋಷಿಸುವ ಸಾಧ್ಯತೆ ಇದೆ.

ಸಾಲದ ಮೊರೆ ಹೋಗಲು ನಿರ್ಧರಿಸಿರುವ ರಾಜ್ಯ ಸರ್ಕಾರ
ಕೇಂದ್ರ ಸರ್ಕಾರ ಸಾಲ ಪಡೆಯುವ ಮಿತಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಾಲ ಪಡೆಯುವ ಆಯ್ಕೆ ಬಳಸಲು ಸಿಎಂ ನಿರ್ಧಾರ ಮಾಡಿದ್ದಾರೆ. ಆದಾಯ ಮೂಲ ಸೀಮಿತವಾಗಿರುವುದರಿಂದ ಸಾಲದ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಸಾಲದ‌ ಮಿತಿ ಏರಿಕೆ ಮಾಡಿದೆ. ಶೇ.3ರಿಂದ ಶೇ.5ಕ್ಕೆ ಸಾಲದ‌ ಮಿತಿಯನ್ನು ಏರಿಕೆ ಮಾಡಿದೆ. ಅದರಂತೆ ಹೆಚ್ಚಿನ ಸಾಲ ಪಡೆಯಲು ಸಿಎಂ ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಮಾರ್ಚ್ 8ರ ಮಧ್ಯಾಹ್ನ 12ಕ್ಕೆ ಮಂಡಿಸಲಿದ್ದಾರೆ ಯಡಿಯೂರಪ್ಪ