ಕರ್ನಾಟಕ ಬಜೆಟ್ 2021: ಮಾರ್ಚ್ 8ರ ಮಧ್ಯಾಹ್ನ 12ಕ್ಕೆ ಮಂಡಿಸಲಿದ್ದಾರೆ ಯಡಿಯೂರಪ್ಪ
ಕರ್ನಾಟಕ ಬಜೆಟ್ 2021 ಅನ್ನು ಮಾರ್ಚ್ 8ನೇ ತಾರೀಕಿನ ಸೋಮವಾರದಂದು ಮಧ್ಯಾಹ್ನ 12ಕ್ಕೆ ಹಣಕಾಸು ಸಚಿವರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರು ಮಂಡನೆ ಮಾಡಲಿದ್ದಾರೆ.
ಕೊರೊನಾದಿಂದ ಜರ್ಝರಿತವಾಗಿರುವ ಕರ್ನಾಟಕದ ಬಜೆಟ್ 2021 ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್ 8, 2021ರ ಸೋಮವಾರದಂದು ಮಧ್ಯಾಹ್ನ 12ಕ್ಕೆ ಮಂಡಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ 2021-22ನೇ ಸಾಲಿನ ಆಯವ್ಯಯ ಅನುಮೋದಿಸಲು ಸಚಿವ ಸಂಪುಟದ ವಿಶೇಷ ಸಭೆಯು ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಬಜೆಟ್ಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದಲೂ ಅಧಿಕೃತವಾಗಿ ಟ್ವೀಟ್ ಮಾಡಲಾಗಿದೆ.
‘ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಮಧ್ಯಾಹ್ನ 12 ಗಂಟೆಗೆ 2021- 22ನೇ ಸಾಲಿನ ರಾಜ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ’ ಎಂದು ತಿಳಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ, ಸಣ್ಣ ಕೈಗಾರಿಕೆ ವಲಯಗಳಿಗೆ ಯಡಿಯೂರಪ್ಪ ಅವರು ಯಾವ ಘೋಷಣೆ ಮಾಡಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ. ಉಳಿದಂತೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸಬಹುದಾ ಎಂಬ ಬಗ್ಗೆಯೂ ನಿರೀಕ್ಷೆ ಇದೆ.
ಈ ಬಾರಿ ಯಡಿಯೂರಪ್ಪ ಅವರು ಜನರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ಸರ್ಕಾರದ ಆದಾಯವನ್ನೂ ತಂದುಕೊಳ್ಳಬೇಕಿದೆ. ಆದ್ದರಿಂದ ಸಹಜವಾಗಿಯೇ ವಿತ್ತೀಯ ಕೊರತೆ ಹೆಚ್ಚೇ ಆಗುತ್ತದೆ (ಆದಾಯಕ್ಕಿಂತ ವೆಚ್ಚದ ಪ್ರಮಾಣ ಹೆಚ್ಚು). ಸರ್ಕಾರದ ಹೂಡಿಕೆಗಳ ಹಿಂತೆಗೆತ ಹಾಗೂ ಆಸ್ತಿಗಳ ಮಾರಾಟ ಅಥವಾ ಷೇರಿನ ಪ್ರಮಾಣದ ಮಾರಾಟದ ಮೂಲಕ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು ಎನ್ನುತ್ತಾರೆ ವಿಶ್ಲೇಷಕರು.
ಹೋಟೆಲ್- ಆತಿಥ್ಯ, ಮನರಂಜನೆ, ರಿಯಲ್ ಎಸ್ಟೇಟ್, ಪ್ರವಾಸೋದ್ಯಮ, ಕಿರು ಸಾಲ (ಮೈಕ್ರೋಫೈನಾನ್ಸ್) ಕ್ಷೇತ್ರಗಳಿಗೆ ಉತ್ತೇಜನ ನೀಡುವಂಥ ಯೋಜನೆಗಳನ್ನು ಯಡಿಯೂರಪ್ಪನವರು ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಬಾರಿ ಅನಗತ್ಯವಾದ ಖರ್ಚಿನ ಶೀರ್ಷಿಕೆಗಳನ್ನು (ಹೆಡ್) ಕಡಿಮೆ ಮಾಡಿ, ದುಂದುವೆಚ್ಚ ಕಡಿಮೆ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ರಾಜ್ಯ ಸರ್ಕಾರಿ ನೌಕರರಿಗಾಗಿ ದೇಶಕ್ಕೆ ಮಾದರಿ ಆಗುವಂಥ ಆರೋಗ್ಯ ಯೋಜನೆಯನ್ನು ಘೋಷಿಸುವ ಬಗ್ಗೆಯೂ ಮಾತಿದೆ. ಒಟ್ಟಿನಲ್ಲಿ ಈ ಬಾರಿಯ ಬಜೆಟ್ ಯಡಿಯೂರಪ್ಪ ಅವರಿಗೆ ಹಗ್ಗದ ಮೇಲಿನ ನಡಿಗೆ ಆಗಲಿದೆ. ಆದರೆ ಅವರೇ ಹೇಳಿಕೊಂಡಿರುವಂತೆ ಇದು ‘ಕರ್ನಾಟಕ ವಿಕಾಸಪತ್ರ’ ಆಗಬಹುದಾ ಅನ್ನೋದನ್ನು ಕಾದು ನೋಡಬೇಕಿದೆ.
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ @BSYBJP ರವರು ನಾಳೆ ಮಧ್ಯಾಹ್ನ 12 ಗಂಟೆಗೆ 2021-22ನೇ ಸಾಲಿನ ರಾಜ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ.
CM Shri B.S.Yediyurappa will present the State Budget for the financial year 2021-22 at 12 noon on Monday, March 08th, 2021#KarnatakaVikasaPatra2021 pic.twitter.com/wm0ZkPutBj
— CM of Karnataka (@CMofKarnataka) March 7, 2021
ಇದನ್ನೂ ಓದಿ: Karnataka Budget 2021: ಜನ ಸಾಮಾನ್ಯರಿಗೂ ಗೊತ್ತಿರಬೇಕಾದ ಬಜೆಟ್ ಪಾರಿಭಾಷಿಕ ಪದಗಳು
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಕೊರೊನಾ ಕಾಲದಲ್ಲಿ ಯಡಿಯೂರಪ್ಪ ಅರ್ಥಶಾಸ್ತ್ರ ಹೇಗಿರಲಿದೆ?