Karnataka Budget 2023-24 Live News Updates: ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ, ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ (Karnataka Budget 2023)ಮಂಡನೆ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ( Siddaramaiah) ನವರು 14ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆದ್ರೆ, ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ, ಹೊಸ ಸರ್ಕಾರದ ಪೂರಕ ಬಜೆಟ್ ಆಗಿರಲಿದೆ. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನ ನೀಡಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ರಾಜ್ಯದ ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಗರಿಗೆದರಿವೆ. 13 ಬಾರಿ ಬಜೆಟ್ ಮಂಡಿಸಿ ಇದೀಗ 14ನೇ ಬಾರಿ ದಾಖಲೆಯ ಬಜೆಟ್ ಮಂಡಿಸುತ್ತಿರುವ ಲೆಕ್ಕರಾಮಯ್ಯರ ಮೇಲೆ ರಾಜ್ಯದ ಜನರ ಚಿತ್ತ ನೆಟ್ಟಿದೆ. ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ರಾಜ್ಯದ ಜನರ ನಿರೀಕ್ಷೆಯನ್ನ ಹೆಚ್ಚಿಸಿದ್ದು. ಬಜೆಟ್‌ನಲ್ಲಿ ಏನೆಲ್ಲ ಭಾಗ್ಯಗಳು ಸಿಗಲಿದೆ ಎಂದು ನಾಡಿನ ಆರುವರೆ ಕೋಟಿ ಜನರು ಎದುರು ನೋಡುತ್ತಿದ್ದಾರೆ. ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ನ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಕರ್ನಾಟಕ ಬಜೆಟ್ ಕುರಿತ ಮಾಹಿತಿ ಇಂಗ್ಲಿಷ್ನಲ್ಲಿ
2024ರ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ನಾಯಕರ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದ್ದಾರೆ. ಈ ವೇಳೆ ಪರಾಜಿತ ಅಭ್ಯರ್ಥಿಗಳ ಅಹವಾಲು ಸ್ವೀಕರಿಸಿದರು. ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳಲ್ಲಿ ಪರಿಗಣಿಸಿ ಪರಾಜಿತ ಅಭ್ಯರ್ಥಿಗಳ ಅಭಿಪ್ರಾಯ ಪರಿಗಣಿಸಿ ಎಂದು ಕೆಲವರು ಮನವಿ ಸಲ್ಲಿಸಿದರು.
ಎಸಿಎಸ್ ಎಲ್.ಕೆ.ಅತೀಕ್ ನೇತೃತ್ವದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ವಿವರಣೆ ನೀಡಿದರು. ಪ್ರತಿ ಬಾರಿ ಬಜೆಟ್ ಮಂಡನೆ ನಂತರ ರಾಜ್ಯಪಾಲರಿಗೆ ವಿವರ ಸಲ್ಲಿಕೆ ಮಾಡಲಾಗುತ್ತದೆ.
ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಸರಿಪಡಿಸಲಾಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎರಡು ಬಸ್ಸುಗಳ ನಡುವೆ ಡಿಕ್ಕಿಯಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್ನಲ್ಲಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಸುಮಾರು 25 ಕಿಮೀ ವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು.
ಆನೇಕಲ್: ಬ್ರೇಕ್ ಫೇಲ್ ಆದ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಬನ್ನೇರುಘಟ್ಟ ಬೇಗಿಹಳ್ಳಿ ಗೇಟ್ನಲ್ಲಿ ನಡೆದಿದೆ. ಬೆಂಗಳೂರಿನಿಂದ ಜಿಗಣಿ ಕಡೆ ಹೋಗುತ್ತಿದ್ದ ಲಾರಿಯ ಬ್ರೇಕ್ ಫೈಲ್ ಆಗಿ ಮನೆಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಮನೆ ಛಿದ್ರಛಿದ್ರವಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಹೇಮಲತಾ ಹಾಗೂ ಯಲ್ಲಪ್ಪಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಜಿಗಣಿಯ ವಿಜಯ ಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ಬಜೆಟ್ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಅಲ್ಲದೆ, ಎಟಿಎಂ ಸರ್ಕಾರ, ಸಾಲರಾಮಯ್ಯ ಎಂದು ಹ್ಯಾಶ್ ಟ್ಯಾಗ್ ಹಾಕಿ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸುಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರು, ಭರವಸೆ ಈಡೇರಿಸಲು ಬೆಲೆ ಏರಿಕೆಯ ಹೊರೆ ಹೊರಿಸಿದ್ದಾರೆ. ಬಡವರ ಕಲ್ಯಾಣವೆಂದು ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಬಡವನ ಬಾಳಿಗೆ ಕೊಳ್ಳಿ ಇಟ್ಟಿದ್ದಾರೆ ಎಂದರು. ಬೆಲೆ ಏರಿಕೆ ಗ್ಯಾರಂಟಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ದಿನಗಳಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ ಅಂತ ಹರಿಹಾಯ್ದಿದ್ದಾರೆ.
ವಿತ್ತೀಯ ಸ್ಥಿತಿಯಲ್ಲಿ 2 ಮಾನದಂಡ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾಲ GDPಯ ಶೇ.25ರೊಳಗೆ ಇರಬೇಕು, ನಮ್ಮ ಸಾಲ ಶೇ.23ರಷ್ಟಿದೆ. ಐದು ಗ್ಯಾರಂಟಿ ಜಾರಿಯಿಂದಾಗಿ ಆದಾಯ ಹೆಚ್ಚುವರಿ ಮಾಡಲು ಆಗಿಲ್ಲ. 2021-22ರಲ್ಲಿ ಬಿಜೆಪಿ ಸರ್ಕಾರ 14 ಸಾವಿರ ಕೋಟಿ ರೆವಿನ್ಯೂ ಡಿಫಿಸಿಟ್ ಇತ್ತು. 2023-24ನೇ ಸಾಲಿನಲ್ಲಿ 12,523 ಕೋಟಿ ರೆವಿನ್ಯೂ ಡಿಫಿಸಿಟ್ ಇದೆ. ಬಿಜೆಪಿ ಸರ್ಕಾರಕ್ಕಿಂತ ಸುಮಾರು 2 ಸಾವಿರ ಕೋಟಿ ಡಿಫಿಸಿಟ್ ಕಡಿಮೆ ಇದೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮದು 85,818 ಕೋಟಿ ರೂ. ಸಾಲ ಇದೆ ಎಂದರು.
ಎಲ್ಲಿ ಕೂಡ ನಾವು ಸಾಮಾನ್ಯ ಜನರ ಮೇಲೆ ಹೊರೆ ಹಾಕಿಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜನಸಾಮಾನ್ಯರಿಗೆ ತೆರಿಗೆ ಹಾಕಿಲ್ಲ, ಜಿಎಸ್‌ಟಿ ದರ ಹೆಚ್ಚಿಸಿಲ್ಲ. ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿಲ್ಲ. ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಮಾತ್ರ ಹೆಚ್ಚಳ ಮಾಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ರಿವೈಸ್ ಆಗಿರಲಿಲ್ಲ, ಅದೊಂದು ಮಾಡಿದ್ದೇವೆ. ಗೈಡೆನ್ಸ್ ವ್ಯಾಲ್ಯೂ ಹೆಚ್ಚಳದಿಂದ 6 ಸಾವಿರ ಕೋಟಿ ಬರಬಹುದು ಎಂದರು.
ಗುಜರಾತ್ ಹೈಕೋರ್ಟ್ನಿಂದ ರಾಹುಲ್ ಅರ್ಜಿ ವಜಾ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ದೊಡ್ಡ ಅವಮಾನ ಎಂದರು. ಲೋಕಸಭಾ ಚುನಾವಣೆಯಲ್ಲಿ 7 ಲಕ್ಷ ಲೀಡ್ನಲ್ಲಿ ಗೆದ್ದಿದ್ದಾರೆ. ಗಾಂಧಿ ಕುಟುಂಬ ದೇಶಕ್ಕೆ ತ್ಯಾಗ ಮಾಡಿದೆ. ನಮ್ಮ ರಾಜ್ಯದಲ್ಲಿ ಭಾಷಣ ಮಾಡಿದ್ದಕ್ಕೆ ರಾಹುಲ್ ವಿರುದ್ಧ ಕೇಸ್ ಹಾಕಲಾಗಿದೆ. ಇದು ಬಿಜೆಪಿಯ ಕುತಂತ್ರ ಎಂದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಈ ಮೂಲಕ ರಾಹುಲ್ ದೇಶ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದನ್ನು ಸಹಿಸದೇ ಲೋಕಸಭೆ ಸದಸ್ಯತ್ವದಿಂದ ವಜಾ ಮಾಡಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದರು.
ಪ್ರಣಾಳಿಕೆ ಭರವಸೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೆವೆ. ಬೊಮ್ಮಾಯಿ ಮಂಡಿಸಿದ್ದ ಬಜೆಟ್ಗೆ ಒಂದು ರೂಪ ಕೊಟ್ಟಿದ್ದೇವೆ. ಬ್ರಾಂಡ್ ಬೆಂಗಳೂರು ಹೆಸರು ಉಳಿಸುವ ಕೆಲಸ ಮಾಡುತ್ತೇವೆ. ನಮಗೆ ಸಂಪನ್ಮೂಲಗಳ ಕ್ರೋಢೀಕರಣ ಗೊತ್ತಿದೆ ಎಂದರು.
ರಾಜ್ಯ ಸರ್ಕಾರದ ಬಜೆಟ್ ಕುರಿತು ವಿಪಕ್ಷ ಬಿಜೆಪಿ ಟ್ವೀಟ್ ಮಾಡಿದ್ದು, ಇದು ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್ ಎಂದು ಜರಿದಿದೆ. ಅಲ್ಲದೆ, ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಇದಾಗಿದ್ದು, ಕರ್ನಾಟಕ ಇತಿಹಾಸದಲ್ಲೇ ಈಗ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ ಅನುತ್ಪಾದಕ ವಲಯಕ್ಕೆ ಮೀಸಲು ಎಂದು ಹೇಳಿದೆ. ಆದಾಯ ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ ಕೇವಲ ಸಾಲದ ಹೊರೆಯನ್ನು ಹೇರಿಕೆ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ, ಎಟಿಎಂ ಸರ್ಕಾರದ ಸಾಲರಾಮಯ್ಯ ಎಂದೂ ಹೇಳಿದೆ.
ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ. ಬಜೆಟ್ನಲ್ಲೂ 5 ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಿದ್ದೇವೆ. ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ನೋಡಿಕೊಂಡಿದ್ದೇವೆ. 1.30 ಕೋಟಿ ಕುಟುಂಬದ ಯಜಮಾನಿಗೆ ‘ಗೃಹಲಕ್ಷ್ಮೀ’ ಹಣ ನೀಡುತ್ತೇವೆ. ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ಆಗಸ್ಟ್ನಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. ಆಗಸ್ಟ್ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುವುದು ಎಂದರು.
ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದ್ದು, ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
ಜಲಸಂಪನ್ಮೂಲ ಇಲಾಖೆಗೆ 1 ಲಕ್ಷ ಕೋಟಿ ಹಣ ಮೀಸಲಿಡಲಾಗಿದ್ದು, 10 ನೀರಾವರಿ ಯೋಜನೆ ಪೂರ್ಣಗೊಳಿಸಲು 940 ಕೋಟಿ ಮೀಸಲಿಡಲಾಗಿದೆ. ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅನುದಾನ ಘೋಷಿಸಲಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲಿಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ ಮಾಡಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಇಡದ್ದ ಎಪಿಎಂಸಿ ಕಾಯ್ದೆ ವಾಪಸ್ಗೆ ನಿರ್ಧಾರ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲಾಗಿದ್ದು, ‘ಕಾಯದ ನಿಧಿ’ ಯೋಜನೆಯ ಅನುದಾನವನ್ನು 10,000 ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ವಿಧಾನಭೆ: ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಅನುದಾನ ಘೋಷಣೆ ಮಾಡಲಾಗಿದೆ. ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ಸ್ಟಾರ್ಟಪ್, ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಬೆಂಗಳೂರು: ಕಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಅನುದಾನ ನೀಡಲಾಗಿದ್ದು, ರಾಯಚೂರಿನ ಕಲ್ಮಲಾ ಜಂಕ್ಷನ್ನಿಂದ ಸಿಂಧನೂರಿನವರೆಗೆ ಹೈಬ್ರಿಡ್ ಆನ್ಯೂಟಿ ಮಾದರಿಯ ರಸ್ತೆ ನಿರ್ಮಾಣಕ್ಕೆ 1696 ಕೋಟಿ ವೆಚ್ಚದಲ್ಲಿ 78 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜೊತೆಗೆ 4,083 ಕೋಟಿ ವೆಚ್ಚದಲ್ಲಿ ಅಂತರ್ ಜಿಲ್ಲಾ ಸಂಪರ್ಕ ಕಲ್ಪಿಸಲು 2400 ಕಿ.ಮೀ ಜಿಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ನಿರ್ಧರಿಸಲಾಗಿದೆ.
ಬೆಂಗಳೂರು: ಮಕ್ಕಳಲ್ಲಿನ ಕಲಿಕಾ ದೋಷಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, 80 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಲಾಗಿದೆ. ಮರುಸಿಂಚನ ಯೋಜನೆಯಡಿ ಪ್ರೌಢಹಂತದ ಪರೀಕ್ಷೆಗೆ ಸಜ್ಜುಗೊಳಿಸಲು ಮಕ್ಕಳಿಗೆ ವಿಶೇಷ ತರಬೇತಿ ಜೊತೆಗೆ ಮಾಧ್ಯಮಿಕ, ಪದವಿ ಪೂರ್ವ ಕಾಲೇಜುಗಳಲ್ಲಿ ಲ್ಯಾಬ್ ಆರಂಭ ಮಾಡಲಾಗುವುದು. ಇನ್ನು 2 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯಗಳ ಸ್ಥಾಪನೆಗೆ ಅಸ್ತು ಎನ್ನಲಾಗಿದೆ. ಮತ್ತು ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ 4 ಲ್ಯಾಬ್ಗಳ ಸ್ಥಾಪನೆ ಮಾಡಲಾಗುವುದು.
ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀಡುವ ಊಟದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ವಾರದಲ್ಲಿ 2 ಬಾರಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಬಿಸಿಯೂಟ ಯೋಜನೆಗೆ 280 ಕೋಟಿ ನೀಡಲು ನಿರ್ಧರಿಸಲಾಗಿದ್ದು, ಈ ಯೋಜನೆ ಇದೀಗ 9 ಮತ್ತು 10ನೇ ತರಗತಿಗೂ ವಿಸ್ತರಣೆಯಾಗಲಿದೆ.
ಬೆಂಗಳೂರು: ಸಿದ್ದರಾಮಯ್ಯನವರ 14 ನೇ ಬಜೆಟ್‌ನಲ್ಲಿ ಯಾವ ಯಾವ ಇಲಾಖೆಗೆ ಎಷ್ಷೇಷ್ಟು ಅನುದಾನ ನೋಡುವುದಾದರೆ ‘ಶಿಕ್ಷಣ ಇಲಾಖೆ 37,000 ಕೋಟಿ ಅನುದಾನ ಮೀಸಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 24,000 ಕೋಟಿ, ಇಂಧನ ಇಲಾಖೆ 22,000 ಕೋಟಿ, ನೀರಾವರಿ ಇಲಾಖೆ 19,000 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್ ಇಲಾಖೆ 18,000 ಕೋಟಿ, ಒಳಾಡಳಿತ & ಸಾರಿಗೆ ಇಲಾಖೆ 16,000 ಕೋಟಿ, ಕಂದಾಯ ಇಲಾಖೆ 16,000 ಕೋಟಿ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ 14,000 ಕೋಟಿ, ಸಮಾಜ ಕಲ್ಯಾಣ ಇಲಾಖೆ 11,000 ಕೋಟಿ ಮೀಸಲು, ಲೋಕೋಪಯೋಗಿ ಇಲಾಖೆ 10,000 ಕೋಟಿ, ಕೃಷಿ & ತೋಟಗಾರಿಕೆ ಇಲಾಖೆ 5,800 ಕೋಟಿ ಸೇರಿ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ 3,024 ಕೋಟಿ ಮೀಸಲಿಡಲಾಗಿದೆ.
ಬೆಂಗಳೂರು: ಪುನೀತ್ ರಾಜಕುಮಾರ್ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಸರ್ಕಾರ 6 ಕೋಟಿ ರೂಪಾಯಿ ಮೀಸಲಿಟ್ಟಿದೆ. ಹಠಾತ್ ಹೃದಯಾಘಾತ ತಪ್ಪಿಸಲು ಆಸ್ಪತ್ರೆಗಳಲ್ಲಿ ಎಇಡಿ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಅನುಮೋದನೆ ನೀಡಿದೆ. ಜೊತೆಗೆ ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅಸ್ತು ಹೇಳಲಾಗಿದೆ. ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಗ್ಯಾರಂಟಿಗಳ ಜಾರಿಗೆ ಶೇ. 26ರಷ್ಟು ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರ ಸರ್ಕಾರದಿಂದ ಶೇಕಡಾ 4ರಷ್ಟು ಅನುದಾನದ ನಿರೀಕ್ಷೆಯಿದ್ದು, ಶೇಕಡ.50ರಷ್ಟು ತೆರಿಗೆ ಆದಾಯದಿಂದ ಹಣ ಹೊಂದಿಸಲು ನಿರ್ಧಾರ ಮಾಡಲಾಗಿದೆ ಎಂದರು.
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ, ಅಬಕಾರಿ ಇಲಾಖೆಯಿಂದ 36,000 ಕೋಟಿ, ನೋಂದಣಿ & ಮುದ್ರಾಂಕ ಇಲಾಖೆಯಿಂದ 25,000 ಕೋಟಿ ಸೇರಿ ಒಟ್ಟು 1,62,000 ಕೋಟಿ ತೆರಿಗೆ ಸಂಗ್ರಹದ ಗುರಿಯನ್ನ ಸರ್ಕಾರ ಹೊಂದಿದೆ.
ಬೆಂಗಳೂರು: ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲು ಇಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಲಾಗಿದ್ದು, ಕೊಪ್ಪಳ, ಕಾರವಾರ ಕೊಡುಗು ಜಿಲ್ಲಾಸ್ಪತ್ರೆಯ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಮೈಸೂರು ಮತ್ತು ಕಲಬುರ್ಗಿಯಲ್ಲಿ 30 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ಸ ಸೆಂಟರ್ ತೆರೆಯಲಾಗುವುದು.
ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಬೆಂಗಳೂರಿಗೆ ಬರೊಬ್ಬರಿ 45 ಸಾವಿರ ಕೋಟಿ ರೂ. ಅನುದಾನ. ಬೆಂಗಳೂರು ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು & ದುರಸ್ತಿಗೆ ಅನುದಾನ, ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ 45 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ.
ಬೆಂಗಳೂರು: ಹಿಂದಿನ ಸರ್ಕಾರದ ನೀರಾವರಿ ಯೋಜನೆಯನ್ನ ಕೈ ಬಿಡಲು ಸರ್ಕಾರ ನಿರ್ಧಾರ ಮಾಡಿದೆ. 19 ಕೆರೆ ತುಂಬಿಸು ಯೋಜನೆಗೆ ಬರೊಬ್ಬರಿ 770 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಯಾದಗಿರಿ ಸೇರಿ 15 ಜಿಲ್ಲೆಯ 99 ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಜಾರಿ ಮಾಡಲಾಗಿದ್ದು, ಎತ್ತಿನ ಹೊಳೆ ಯೋಜನೆಗೆ ಪರಿಷ್ಕೃತ ಮೊತ್ತ 22,252 ಕೋಟಿ ಮೀಸಲಿಡಲಾಗಿದೆ. ಇನ್ನು ಮೇಕೆದಾಟು ಯೋಜನೆಗೆ ಭೂಸ್ವಾಧಿನ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಮಿತಿಯನ್ನ 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದ್ದು, ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ನೀಡಲಾಗುವುದು.
ಬೆಂಗಳೂರು: 14ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯನವರು ‘ತೆಂಗು, ಅಡಕೆ, ದ್ರಾಕ್ಷಿ, ದಾಳಿಂಬೆ ಬೆಳೆ ಸಂಸ್ಕರಣೆಗೆ 10 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ, ಚಿಕ್ಕಮಗಳೂರು ಕಾಫಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ. ಅನುಗ್ರಹ ಯೋಜನೆ ಮರು ಜಾರಿ ಮಾಡಿ ‘ಕುರಿ ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು.
ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ.14ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಈ ಮೂಲಕ ದಾಖಲೆ ಬರೆಯಲಿದ್ದಾರೆ.
ಬೆಂಗಳೂರು: ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ, ಎದೆ ಎತ್ತಿ ಉತ್ತರಿಸಿ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೇಳಿದರು. ‘ಯಾವ ಭರವಸೆಗಳನ್ನೂ ಈಡೇರಿಸದ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ. ವಿಪಕ್ಷಗಳಿಗೆ ತಕ್ಕ ಉತ್ತರ ಕೊಡಿ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. 14ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಮಾಡಲಿದ್ದಾರೆ. ಇನ್ನು ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆ ಈಡೇರಿಸುವ ಸಾಧ್ಯತೆಯಿದೆ.
ಬೆಂಗಳೂರು: ಈಗಾಗಲೇ 3 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ, ಈ ವರ್ಷವೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ಇದೇ ವೇಳೆ ಪ್ರತಿಪಕ್ಷಗಳೇ ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಜನತೆಯೇ ನನ್ನ ಪಾಲಿನ ಜನಾರ್ಧನರು, ಕೆಲವೇ ಹೊತ್ತಿನಲ್ಲಿ ನನ್ನ 14ನೇ ಬಜೆಟ್ ಮಂಡಿಸಲಿದ್ದೇನೆ ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ,
ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ.ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ…
— Siddaramaiah (@siddaramaiah) July 7, 2023
ಬೆಂಗಳೂರು: ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ಹೆಚ್ಚು ಅನುದಾನ ನೀಡಲು ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದರು. ಜೊತೆಗೆ ಅನುದಾನ ವಿಚಾರವಾಗಿ 8 ತಿಂಗಳು ಶಾಸಕರು ಸಹಕಾರ ನೀಡಬೇಕು ಎಂದು ಸಿಎಂ ಕಿವಿಮಾತು ಹೇಳಿದರು.
ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚುನಾವಣಾ ವೆಚ್ಚದ ಮಾಹಿತಿ ನೀಡುವಂತೆ ಸಿಎಲ್ಪಿ ಶಾಸಕರಿಗೆ ಸೂಚನೆ ನೀಡಿದೆ. ಎಐಸಿಸಿಗೆ ಚುನಾವಣಾ ವೆಚ್ಚದ ಕುರಿತು ಮಾಹಿತಿ ನೀಡಬೇಕಿದೆ. ಈ ಹಿನ್ನಲೆ 15 ದಿನದೊಳಗೆ ತಮ್ಮ ವೆಚ್ಚದ ಮಾಹಿತಿ ನೀಡುವಂತೆ ತಿಳಿಸಿದೆ.
ಬೆಂಗಳೂರು: ಕುಮಾರಸ್ವಾಮಿ ಒಬ್ಬ ಸೀರಿಯಸ್ ಪೊಲಿಟೀಷಿಯನ್ ಅಲ್ಲ ಎಂದು ವಿಧಾನಸೌಧದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ. ಸುಮ್ನೆ ಅದನ್ನ ಬಿಡ್ತೀನಿ, ಇದನ್ನ ಬಿಡ್ತೀನಿ ಅಂತಾರೆ, ಯಾವ ವಿಚಾರವನ್ನು ಅವರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಬಜೆಟ್ ಮಂಡಿಸಲಿದ್ದಾರೆಂದು ವಿಧಾನಸೌಧದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ರಾಜ್ಯದ ಜನರಿಗೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದ್ದು, ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದರು.
ಬೆಂಗಳೂರು: ಬಜೆಟ್ಗೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ಮಾಡಲಾಗುತ್ತಿದೆ. ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದು, ಗ್ಯಾರಂಟಿಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಲು ಕಿವಿಮಾತು ಹೇಳಿದ್ದಾರೆ.
ಬಜೆಟ್ ಮಂಡನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್ಪಿ ಸಭೆ ಆರಂಭವಾಗಿದ್ದು, ಬಜೆಟ್ ಹಾಗೂ ಸದನದಲ್ಲಿ ಹೇಗೆಲ್ಲ ಮಾತನಾಡಬೇಕು ಎನ್ನುವುದರ ಬಗ್ಗೆ ಶಾಸಕರು, ಸಚಿವರಿಗೆ ಸಿಎಂ ಸಲಹೆ ನೀಡುತ್ತಿದ್ದಾರೆ.
ಬೆಂಗಳೂರು: ಇಂದು ಬಜೆಟ್ ಮಂಡನೆ ಹಿನ್ನಲೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದಿಂದ ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಹೊಸ ಮೈಸೂರು ಪಂಚೆ, ಶಲ್ಯ ಧರಿಸಿ ತೆರಳಿದ್ದಾರೆ.
ಬೆಂಗಳೂರು: ಇಂದು ಬಜೆಟ್ ಮಂಡನೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಬಜೆಟ್ಗೂ ಮುನ್ನ ಬೆಳಿಗ್ಗೆ 9.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಕಡ್ಡಾಯವಾಗಿ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈಗಾಗಲೇ ಸಭೆಗೆ ಶಾಸಕರು, ಸಚಿವರು ಆಗಮಿಸುತ್ತಿದ್ದಾರೆ.
ಬೆಂಗಳೂರು: ಇಂದು 12 ಗಂಟೆಗೆ ಸಿಎಂ ಸಿದ್ದರಾಮಯ್ಯ 14ನೇ ಬಜೆಟ್ ಮಂಡಸಲಿದ್ದು, ಈ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ದೂರದೃಷ್ಟಿ ಆಲೋಚನೆಗಳನ್ನು ಕ್ರೂಢೀಕರಿಸಿ, ಮಹತ್ವದ ಬಜೆಟ್ ಮಂಡಿಸಲು ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಜೆಟ್ ಮಂಡನೆಗೆ ಅಂತಿಮ ರೂಪ ಕೊಟ್ಟಿದ್ದಾರೆ. ಮುಖ್ಯವಾಗಿ ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸುವ ಸಾಧ್ಯತೆಯಿದೆ.
ಬೆಂಗಳೂರು: ಇಂದು(ಜು.7) ಸಿಎಂ ಸಿದ್ದರಾಮಯ್ಯನವರು 12 ಗಂಟೆಗೆ 14ನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಹೆಚ್ಚು ಅನುದಾನ ಸಿಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ನಗರದ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದ್ದು, ಟ್ರಾಫಿಕ್ ಸಮಸ್ಯೆ, ಕಸದ ವಿಲೇವಾರಿ ಸಮಸ್ಯೆ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಆಗುವ ಅವಾಂತರಗಳು, ಬೃಹತ್ ನೀರುಗಾಲುವೆ ಸಮಸ್ಯೆಗಳು, ಎಲಿವೇಟಡ್ ಕಾರಿಡಾರ್, ಟೆಕ್‌ಪಾರ್ಕ್, ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಕನಸು, ರಾಜಕಾಲುವೆ ಅಭಿವೃದ್ಧಿ ಸೇರಿದಂತೆ ಅನೇಕ ನಿರೀಕ್ಷೆಗಳಿವೆ.
ಬೆಂಗಳೂರು: ಇಂದು(ಜು.7) 12 ಗಂಟೆಗೆ ಸಿಎಂ ಸಿದ್ದರಾಮಯ್ಯ 14ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಜಾರಿ ಜೊತೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಬಜೆಟ್ ಇದಾಗಿದೆ. ಹಿಂದಿನ ಸರ್ಕಾರ 3.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿತ್ತು. ಈ ಬಾರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಗಾತ್ರ ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಗ್ಯಾರಂಟಿ ಜಾರಿ ಜೊತೆ ಇನ್ನೇಷ್ಟು ಭಾಗ್ಯ ಸಿಗಲಿದೆ ಕಾದು ನೋಡಬೇಕು.
Published On - 8:12 am, Fri, 7 July 23