ಆಷಾಢ ಮಾಸದ 3ನೇ ಶುಕ್ರವಾರ: ಮಹಿಷಾಸುರ ಮರ್ದಿನಿ ತಾಯಿ ಚಾಮುಂಡಿ ದರ್ಶನಕ್ಕೆ ಭಕ್ತ ಸಾಗರ
Mysuru Chamundi Betta: ಇಂದು ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಮೈಸೂರು: ಮೋಡ ಮುಸುಕಿದ ವಾತಾವರಣ, ಅಷಾಢದ(Ashada Masam) ತಣ್ಣನೆ ಗಾಳಿ ನಡುವೆ ಬೆಳಗ್ಗೆನೆ ಎಂದು ಸ್ನಾನ ಮಾಡಿ ಮೈ ನಡುಗುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಇಂದು(ಜುಲೈ 07) ಮೈಸೂರಿನ ಚಾಮುಂಡಿಬೆಟ್ಟಕ್ಕೆ(Mysuru Chamundi Betta) ಆಗಮಿಸಿದ್ದಾರೆ. ಇಂದು ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಮೈಸೂರು ನಗರದಿಂದ ಸುಮಾರು 13 ಕಿಮೀ ದೂರದಲ್ಲಿರುವ ಚಾಮುಂಡಿ ಬೆಟ್ಟದ ತುದಿಯಲ್ಲಿ ನೆಲೆಸಿರುವ ಚಾಮುಂಡೇಶ್ವರಿಗೆ ಅಷಾಢ ಮಾಸ ತುಂಬಾ ವಿಶೇಷವಾದ ತಿಂಗಳು. ಅದರಲ್ಲೂ ಅಷಾಢ ಮಾಸದಲ್ಲಿ ಬರುವ ಒಂದು ಶುಕ್ರವಾರದಂದು ತಾಯಿಯ ಜಯಂತಿ ಬರುವುದರಿಂದ ಅಷಾಢದ ಪ್ರತಿ ಶುಕ್ರವಾರವೂ ಭಕ್ತರಿಗೆ ವಿಶೇಷ ದಿನ. ಈ ಹಿನ್ನೆಲೆ ತಾಯಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ಚಾಮುಂಡಿಬೆಟ್ಟದಲ್ಲಿ ಹಬ್ಬದ ಸಂಭ್ರಮ ಇರುತ್ತೆ. ವಿಶೇಷ ಪೂಜೆಗಳು ಜರುಗುತ್ತವೆ.
ಇದನ್ನೂ ಓದಿ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ: ಗಂಡಸರಿಗೂ ಬಸ್ ಫ್ರೀ
ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ
ಮೂರನೇ ಆಷಾಢ ಶುಕ್ರವಾರ ಹಿನ್ನೆಲೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮಾಡಲಾಗುತ್ತಿದೆ. ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ತಾಯಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆ ನಂತರ ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 5.30 ರಿಂದ ಭಕ್ತರಿಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಆಷಾಢ ಮಾಸದ ಮೂರನೇ ವಾರವೂ ಪಾಸ್ ವ್ಯವಸ್ಥೆಗೆ ಬ್ರೇಕ್
ಇನ್ನು ಆಷಾಢ ಮಾಸದ ಮೂರನೇ ವಾರವೂ ಪಾಸ್ ವ್ಯವಸ್ಥೆಗೆ ಬ್ರೇಕ್ ಬಿದ್ದಿದೆ. ₹300 ಹಾಗೂ 50 ರೂ. ಟಿಕೆಟ್ ಪಡೆದ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ₹50 ಟಿಕೆಟ್ ಸಾಲಿನಲ್ಲಿ ನೇರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಬೆಳಗ್ಗೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಭಕ್ತರಿಗೆ ದಾಸೋಹ ಪ್ರಸಾದ ವಿತರಣೆಗೆ ವ್ಯವಸ್ಥೆ ಆಗಿದೆ.
ಮೈಸೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ