Karnataka Budget 2021: ಕರ್ನಾಟಕ ಬಜೆಟ್ 2021; ಇಲ್ಲಿದೆ ಸಮಗ್ರ ಮಾಹಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 08, 2021 | 8:45 PM

Karnataka Budget 2021: ಕಳೆದ ವರ್ಷದ ರಾಜ್ಯದ ಸರಾಸರಿ ತಲಾದಾಯದ (ಜಿಎಸ್​ಡಿಪಿ)ಗೆ ಹೋಲಿಸಿದರೆ ಈ ಬಾರಿ ಶೇಕಡಾ 2.6ಕ್ಕೆ ಕುಸಿದಿದೆ. ಕೃಷಿ ವಲಯದಲ್ಲಿ ಶೇಕಡಾ 5 ಏರಿಕೆ ಆಗಿದ್ದು, ಸೇವೆ ಮತ್ತು ಕೈಗಾರಿಕಾ ವಲಯ ಕ್ರಮವಾಗಿ ಶೇಕಡಾ 3 ಮತ್ತು ಶೇಕಡಾ 5ರಷ್ಟು ಕುಸಿತ ಕಂಡಿದೆ.

Karnataka Budget 2021: ಕರ್ನಾಟಕ ಬಜೆಟ್ 2021; ಇಲ್ಲಿದೆ ಸಮಗ್ರ ಮಾಹಿತಿ
ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಬಜೆಟ್ ಮಂಡನೆ ಮಾಡಿದ್ದು, ಈ ಹೊತ್ತಲ್ಲಿ ಕಾಂಗ್ರೆಸ್ ಶಾಸಕರು ಸದನದಿಂದ ಹೊರಗೆ ನಡೆದಿದ್ದಾರೆ. 2021-22ರ ಸಾಲಿನ ಕರ್ನಾಟಕ ಮುಂಗಡಪತ್ರದ ಒಟ್ಟು ಗಾತ್ರ ₹ 2,46,207 ಕೋಟಿ (₹ 2.46 ಲಕ್ಷ ಕೋಟಿ). ರಾಜ್ಯ ಸರ್ಕಾರದ ಒಟ್ಟು ನಿರೀಕ್ಷಿತ ಆದಾಯ ₹ 2,43,734 ಕೋಟಿ (₹ 2.43 ಲಕ್ಷ ಕೋಟಿ). ಒಟ್ಟು ವೆಚ್ಚ ₹ 2,46,207 ಕೋಟಿ (₹ 2.46 ಲಕ್ಷ ಕೋಟಿ). ಬಜೆಟ್​ನ ಒಟ್ಟು ಕೊರತೆ ₹ 15,134 ಕೋಟಿ. ವಿತ್ತೀಯ ಕೊರತೆ ₹ 59,240 ಕೋಟಿ ಆಗುವ ಸಾಧ್ಯತೆಯಿದೆ. ರಾಜ್ಯದ ಒಟ್ಟು ಸಾಲ ₹ 4,57,899 ಆಗುವ ಸಾಧ್ಯತೆಯಿದ್ದು, ಇದು ರಾಜ್ಯದ ಸರಾಸರಿ ತಲಾದಾಯದ (ಜಿಎಸ್​ಡಿಪಿ) ಶೇ 26.9ಕ್ಕೆ ಮುಟ್ಟುತ್ತದೆ.

ಸರ್ಕಾರ ನಿರೀಕ್ಷಿಸಿರುವ ₹ 2.43 ಲಕ್ಷ ಕೋಟಿ ಆದಾಯದಲ್ಲಿ ₹ 1.72 ಲಕ್ಷ ಕೋಟಿ ರಾಜಸ್ವದಿಂದ, ₹ 71,332 ಕೋಟಿ ಸಾರ್ವಜನಿಕ ಸಾಲಗಳಿಂದ ಮತ್ತು ₹ 71,463 ಕೋಟಿ ಬಂಡವಾಳ ಸ್ವೀಕೃತಿಯಿಂದ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಖರ್ಚಿನ ಬಾಬ್ತಿನಲ್ಲಿ ₹ 2.46 ಲಕ್ಷ ಕೋಟಿ ಲೆಕ್ಕಹಾಕಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚವೇ ₹ 1,87,405 ಕೋಟಿಯಿದೆ. ಬಂಡವಾಳ ವೆಚ್ಚಕ್ಕಾಗಿ ಕೇವಲ ₹ 44,237 ಕೋಟಿ ಮೀಸಲಿಡಲಾಗಿದೆ. ಸಾಲ ಮರುಪಾವತಿಗಾಗಿ ₹ 14,565 ಕೋಟಿ ಗುರುತಿಸಲಾಗಿದೆ.

1. ಯಾವುದೇ ತೆರಿಗೆ ಹೆಚ್ಚಿಸದಿರಲು ತೀರ್ಮಾನ
ಪೆಟ್ರೋಲ್ ಮತ್ತು ಡೀಸಲ್ ಗಳ ಮೇಲೆ ವಿಧಿಸುವ ಕರ್ನಾಟಕ ಮಾರಾಟ ತೆರಿಗೆ (KST) ಸೇರಿದಂತೆ ಯಾವುದೇ ತೆರಿಗೆಯನ್ನು 2021-22 ನೇ ಸಾಲಿನಲ್ಲಿ ಹೆಚ್ಚಿಸದಿರಲು ತೀರ್ಮಾನ
ಬಜೆಟ್ ಭಾಷಣದಲ್ಲಿ ಯಡಿಯೂರಪ್ಪ ಅವರು ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ.ಯಾರಿಗೂ ಒಂದು ರೂಪಾಯಿಯೂ ತೆರಿಗೆಯನ್ನು ಹಾಕಿಲ್ಲ. ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲಾಗಿದೆ. ಬಜೆಟ್‌ನಲ್ಲಿ ಎಲ್ಲ ವಲಯ, ಜಿಲ್ಲೆಗಳಿಗೆ ಅನುದಾನ ನೀಡಿದ್ದೇವೆ. ಸಮತೋಲನ ಕಾಪಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ

2.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗೋಶಾಲೆ
ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ ಮಾಡುವುದಾಗಿ ಯಡಿಯೂರಪ್ಪ ಬಜೆಟ್ ಘೋಷಣೆಯಲ್ಲಿ ಹೇಳಿದ್ದಾರೆ. ಅದೇ ವೇಳೆ ದೇಶೀಯ ಪಶುಸಂಪತ್ತಿನ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಕ್ರಮಕೈಗೊಳ್ಳಲಾಗುವುದ. ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಿಗಳ ಅಳವಡಿಕೆ ಉತ್ತೇಜನಕ್ಕೆ ಶಿವಮೊಗ್ಗದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ.

3.ಮಹಿಳೆಯರ ಸುರಕ್ಷೆ ಮತ್ತು ಸಬಲೀಕರಣಕ್ಕಾಗಿ ಕೊಡುಗೆಗಳು
ಮಹಿಳೆಯರಿಗಾಗಿ 37,188 ಕೋಟಿ ರೂ ಅನುದಾನ ಘೋಷಿಸಲಾಗಿದೆ. ಮಹಿಳಾ ದಿನಾಚರಣೆ ಹಿನ್ನೆಲೆ ವಿಶೇಷವಾದ ಯೋಜನೆಗಳನ್ನು ಘೋಷಿಸಿರುವ ಯಡಿಯೂರಪ್ಪ ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್‌ಲೈನ್‌ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಿದ್ದು, 2 ಕೋಟಿ ರೂಪಾಯಿವರೆಗೂ ಸಾಲದ ಮೊತ್ತ ಇರಲಿದೆ. ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ವನಿತಾ ಸಂಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಬಸ್ ಪಾಸ್
ಬಿಎಂಟಿಸಿ ಬಸ್‌ಗಳಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ನೌಕರರಿಗೆ ವನಿತಾ ಸಂಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಬಸ್ ಪಾಸ್ ನೀಡಲಾಗುವುದು. ಮಹಿಳೆಯರ ಸುರಕ್ಷೆಗಾಗಿ ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ 7,500 ಸಿಸಿ ಕ್ಯಾಮರಾಗಳ ಅಳವಡಿಸಲಾಗುವುದು. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು Elevate women entrepreneurship ಯೋಜನೆ ಘೋಷಣೆ.  ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿಯಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು. ಉತ್ಪನ್ನಗಳ ಮಾರಾಟಕ್ಕೆ 1 ವಾರಗಳ ಬೃಹತ್ ಮಾರಾಟ ಮೇಳ ನಡೆಯಲಿದೆ.ಗ್ರಾಮೀಣ ಯುವತಿಯರ ಸಬಲೀಕರಣಕ್ಕೆ ಮೃದು ಕೌಶಲ್ಯ ಮತ್ತು ಸಂವಹನ ಕೌಶಲ್ಯ ತರಬೇತಿ ನೀಡಲಾಗುವುದು.  ಸೇಫ್ ಸಿಟಿ ಯೋಜನೆಯಡಿ ಬೆಂಗಳೂರಕು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮರಾ ಅಳವಡಿಕೆ. ತಂತ್ರಜ್ಞಾನ ಆಧಾರಿತ ಇ- ಬೀಟ್ ಮೂಲಕ ರಾತ್ರಿ ಗಸ್ತು ತೀವ್ರಗೊಳಿಸಲು ಕ್ರಮ.

4. ಜಿಎಸ್​ಡಿಪಿ ಈ ಬಾರಿ ಶೇಕಡಾ 2.6ಕ್ಕೆ ಕುಸಿದಿದೆ

ಕಳೆದ ವರ್ಷದ ರಾಜ್ಯದ ಸರಾಸರಿ ತಲಾದಾಯದ (ಜಿಎಸ್​ಡಿಪಿ)ಗೆ ಹೋಲಿಸಿದರೆ ಈ ಬಾರಿ ಶೇಕಡಾ 2.6ಕ್ಕೆ ಕುಸಿದಿದೆ. ಕೃಷಿ ವಲಯದಲ್ಲಿ ಶೇಕಡಾ 5 ಏರಿಕೆ ಆಗಿದ್ದು, ಸೇವೆ ಮತ್ತು ಕೈಗಾರಿಕಾ ವಲಯ ಕ್ರಮವಾಗಿ ಶೇಕಡಾ 3 ಮತ್ತು ಶೇಕಡಾ 5ರಷ್ಟು ಕುಸಿತ ಕಂಡಿದೆ. ಬಜೆಟ್​ನ ಒಟ್ಟು ಕೊರತೆ ₹ 15,134 ಕೋಟಿ. ವಿತ್ತೀಯ ಕೊರತೆ ₹ 59,240 ಕೋಟಿ ಆಗುವ ಸಾಧ್ಯತೆಯಿದೆ. ರಾಜ್ಯದ ಒಟ್ಟು ಸಾಲ ₹ 4,57,899 ಆಗುವ ಸಾಧ್ಯತೆಯಿದ್ದು, ಇದು ರಾಜ್ಯದ ಸರಾಸರಿ ತಲಾದಾಯದ (ಜಿಎಸ್​ಡಿಪಿ) ಶೇ 26.9ಕ್ಕೆ ಮುಟ್ಟುತ್ತದೆ

5. ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ 5,372 ಕೋಟಿ ಖರ್ಚು.
ಸರ್ಕಾರದ ಯೋಜನೆಗಳಿಂದ 63 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಅನುಕೂಲವಾಗಿದೆ. 9 ಕೋಟಿಗಿಂತಲೂ ಹೆಚ್ಚು RT-PCR ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಸಾಧ್ಯತೆ ಇದ್ದು , ಜನರು ಅಂತರ ಕಾಪಾಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

6. ಕೃಷಿ ಮತ್ತು ಪೂರಕ ಚಟುವಟಿಕೆಗೆ ₹ 31,028 ಕೋಟಿ ಅನುದಾನ
ಸಾವಯವ ಕೃಷಿ ಉತ್ತೇಜನಕ್ಕೆ ₹ 500 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುವುದು. ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ ಪಾರ್ಕ್ ಸ್ಥಾಪನೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಶೇ 50ಕ್ಕೆ ಹೆಚ್ಚಳ.ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್​ಗಳಿಗೆ ನೀಡುತ್ತಿದ್ದ ಸಹಾಯಧನ ಇನ್ನು ಮುಂದೆ ದೊಡ್ಡ ಟ್ರ್ಯಾಕ್ಟರ್​ಗಳಿಗೂ ಅಂದರೆ 25-45 PTO HP ಟ್ಯಾಕ್ಟರ್‌ಗಳಿಗೂ ಸಿಗಲಿದೆ. ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಸಾವಯವ ಮತ್ತು ಸಿರಿಧಾನ್ಯಗಳ ವೈಜ್ಞಾನಿಕ ಮಾರಾಟಕ್ಕೆ ಅವಕಾಶ. ಮುಂದಿನ 5 ವರ್ಷಗಳಲ್ಲಿ ₹ 75 ಕೋಟಿ ವೆಚ್ಚದಲ್ಲಿ ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ. ಇದಕ್ಕಾಗಿ 2021-12ನೇ ಸಾಲಿನಲ್ಲಿ ₹ 10 ಕೋಟಿ ಅನುದಾನ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಆಹಾರ ಸಂಸ್ಕರಣೆ ಹಾಗೂ ಕೊಯ್ಲೋತ್ತರ ನಿರ್ವಹಣಾ ಘಟಕಗಳಿಗೆ ನೀಡುವ ಶೇ 35ರಷ್ಟು ಸಹಾಯಧನವನ್ನು ಶೇ 50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಶೇ 15ರಷ್ಟು ಹೆಚ್ಚುವರಿ ಸಹಾಯಧನ. ₹ 50 ಕೋಟಿ ಅನುದಾನವನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಅಡಮಾನ ಸಾಲಕ್ಕೆ ಶೇ 4ರ ಬಡ್ಡಿ ಸಹಾಯಧನ
ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS), ಟಿಎಪಿಸಿಎಂಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ 25ರಷ್ಟು ಸಹಾಯಧನ ವಿತರಣೆ. ಇದಕ್ಕಾಗಿ ₹ 25 ಕೋಟಿ ಅನುದಾನ ಮೀಸಲಿಡಲಾಗಿದೆ.ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS) ಟಿಎಪಿಸಿಎಂಎಸ್​ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ 11ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರ್ಕಾರದಿಂದ ಶೇ 4ರ ಬಡ್ಡಿ ಸಹಾಯಧನ. ಇದಕ್ಕಾಗಿ ₹ 5 ಕೋಟಿ ಅನುದಾನ. ₹ 198 ಕೋಟಿ ವೆಚ್ಚದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಗರಿಷ್ಠ ₹ 10 ಲಕ್ಷದವರೆಗೆ ಶೇ 25ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ .

ನೀರಾವರಿ ಯೋಜನೆಗಳಿಗೆ ಬದ್ಧತೆ
ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಕ್ರಮ. ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳ ಜಿಲ್ಲೆ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ. ಬೇಡ್ತಿ-ವರದಾ ನದಿ ಜೋಡಣೆಯಡಿ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು National Perspective Plan ಅಡಿಯಲ್ಲಿ ಸಿದ್ಧಪಡಿಸಲು NWDAಗೆ ಮನವಿ. ತಾಂತ್ರಿಕ ಸಾಧ್ಯಾಸಾಧ್ಯತೆಗನುಗುಣವಾಗಿ ಯೋಜನೆಗಳನ್ನು ರೂಪಿಸಲು ಕ್ರಮ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ. ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ (DRIP) ಯೋಜನೆಯಡಿ ₹ 1500 ಕೋಟಿ ಮೊತ್ತದಲ್ಲಿ ರಾಜ್ಯದ ಆಣೆಕಟ್ಟುಗಳ ಪುನಶ್ವೇತನ ಮತ್ತು ಅಭಿವೃದ್ಧಿಗೆ ಪ್ರಸ್ತಾವನೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ. ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ನಿರ್ವಹಣೆಗಾಗಿ ಕಾರ್ಯನೀತಿ ಜಾರಿ.

7. ಶಿಕ್ಷಣ ಮತ್ತು ಕೌಶಲಭಿವೃದ್ದಿ
ಆಯ್ದ 50 ಕರ್ನಾಟಕ ಪಬ್ಲಿಕ್ ಶಾಲೆಗಳ ಸರ್ವತೋಮುಕ ಅಭಿವೃದ್ಧಿಗೆ 100 ಕೋಟಿ ರೂ ಅನುದಾನ.ಎರಡು ವರ್ಷಗಳಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಶಾಲಾ ಶೌಚಾಲಯಗಳ ಉನ್ನತೀಕರಣ ಮತ್ತು ನೀರಿನ ಸೌಲಭ್ಯ ಒದಗಿಸಲು ಕ್ರಮ. ಪಂಚಾಯತ್ ರಾಜ್ ಸಂಸ್ಥೆಗಳ ಮುಖಾಂತರ ನಿರ್ವಹಣೆ. ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ ಅನುದಾನ. ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ವಿಸ್ತರಣೆ. ಡಿಜಿಟಲ್ ಕಲಿಕೆಗೆ ಅನುವಾಗುವಂತೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ 50 ಕೋಟಿ ರೂ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಂಗಳ ಅಭಿವೃದ್ಧಿ. ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೊಸದಾಗಿ 23 ಅಲ್ಪಾವಧಿ ಹಾಗೂ 11 ದೀರ್ಘಾವಧಿ ವೃತ್ತಿಪರ ಕೋರ್ಸು ಪ್ರಾರಂಭ. ಸಾವಿರ ಗ್ರಾಮೀಣ ಯುವತಿಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಮೃದು ಕೌಶಲ್ಯ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿ ನೀಡಲು ಕ್ರಮ.

8. ಆರೋಗ್ಯವಲಯಕ್ಕೆ ಏನೇನು ಸಿಕ್ಕಿದೆ?
ರಾಜ್ಯದ 19 ಜಿಲ್ಲಾ ಅಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯದ ಹಾಗೂ 100 ತಾಲ್ಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕಗಳನ್ನು 60 ಕೋಟಿ ರೂ ವೆಚ್ಚದಲ್ಲಿ ಕಾರ್ಯಗತಗೊಳಿಸಲು ಕ್ರಮ. ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆ್ಯಂಟಿ ಮೈಕ್ರೊಬಿಯಲ್ ರೆಸಿಸ್ಟೆನ್ಸ್ ಘಟಕ ಪ್ರಾರಂಭ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಟ್ಟು 2.5 ಕೋಟಿ ರೂಗಳ ವೆಚ್ಚದಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆ. ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವುದನ್ನು ಉತ್ತೇಜಿಸಲು 10 ಕೋಟಿ ರೂ ವೆಚ್ಚದಲ್ಲಿ ಚಿಗುರು ಕಾರ್ಯಕ್ರಮಕ್ಕೆ ಚಾಲನೆ

ಟೆಲಿ-ಐಸಿಯು ಬಲಪಡಿಸಲು2 ಕೋಟಿ ರೂ ಅನುದಾನ
ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಪ್ರಾರಂಭ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ. ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚಲು 1 ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಹೊಸ ಸುಸಜ್ಜಿತ ಸಂಚಾರಿ ಪ್ರಯೋಗಾಲಯ ಪ್ರಾರಂಭ.

ದಾವಣಗೆರೆಯಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ 50 ಹಾಸಿಗೆ
ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಪ್ರಾರಂಭಿಸಲು ಕ್ರಮ. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾರಂಭ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಡಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ. ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನು 75 ಕೋಟಿ ರೂ.ಗಳ ವೆಚ್ಚದಲ್ಲಿ ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ನಿಗದಿ. ಬುದ್ಧಿಮಾಂದ್ಯರ ಆರೈಕೆ ಮಾಡಲು ಅನುವಾಗುವಂತೆ ಶೇ.75 ಕ್ಕಿಂತ ಹೆಚ್ಚಿನ ಮನೋವೈಕಲ್ಯತೆ ಹೊಂದಿದವರಿಗೆ ನೀಡುವ ಮಾಸಾಶನ 2000 ರೂ.ಗಳಿಗೆ ಹೆಚ್ಚಳ.

9. ಯಾವ ಸಮುದಾಯಕ್ಕೆ ಏನು?
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. 2021-22ನೇ ಸಾಲಿನ ಆಯವ್ಯಯದಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (SCSP/TSP)ಗಳಡಿ ಒಟ್ಟಾರೆ 26,005 ಕೋಟಿ ರೂ. ಹಂಚಿಕೆ.ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಕೋಟಿ ರೂ. ವೆಚ್ಚದಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭ. ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವಿಭಾಗದಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆಯೆಂದು ಉನ್ನತೀಕರಿಸಲು ಕ್ರಮ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ. 4ರಷ್ಟು ಬಡ್ಡಿ ಸಹಾಯಧನ ಯೋಜನೆ. ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ಪುನರ್ವಸತಿಗೆ, ಸಂಘಗಳನ್ನು ರಚಿಸಿ, ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳಿಗೆ ಶೇ.75ರಷ್ಟು ಸಹಾಯಧನ.

ನಿಪ್ಪಾಣಿಯಲ್ಲಿ ಕೊಲ್ಲಾಪುರಿ ಪಾದರಕ್ಷೆಗಳ ಮತ್ತು ಚಿತ್ರದುರ್ಗದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಭ. ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ `ವಾಲ್ಮೀಕಿ ಆಶ್ರಮ ಶಾಲೆ” ಎಂದು ಮರು ನಾಮಕರಣ. ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದ್ದ ಹಾಸನ ನಗರದ ಎ.ಕೆ, ಬೋರ್ಡಿಂಗ್ ಹೋಮ್ ಸ್ಥಳದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಾಣ, ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ. ಅನುದಾನ. ಒಕ್ಕಲಿಗ ಸಮುದಾಯದ ಹೊಸ ನಿಗಮ ಸ್ಥಾಪನೆ; 500 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮಗಳ ಅನುಷ್ಠಾನ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗಳಿಗೆ 50 ಕೋಟಿ ರೂ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 150 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ

10. ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆ
ಜಲಧಾರೆ ಯೋಜನೆಯಡಿ 6201 ಕೋಟಿ ರೂ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ.  ಜಲ ಜೀವನ್ ಮಿಷನ್ ಯೋಜನೆಯೊಂದಿಗೆ ಒಗ್ಗೂಡಿಸಿ ರೂಪಿಸಿರುವ ಮನೆ ಮನೆಗೆ ಗಂಗೆ ಯೋಜನೆಯಡಿ 2021-22ನೇ ಸಾಲಿನಲ್ಲಿ 4, 316 ಕೋಟಿ ರೂ ವೆಚ್ಚದಲ್ಲಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಒದಗಿಸಲು ಕ್ರಮ. ಹಳ್ಳಿಗಳಿಗೆ ಬಲ್ಕ್ ನೀರು ಸರಬರಾಜು ಮಾಡಲು 25,740 ಕೋಟಿ ರೂ ವೆಚ್ಚದ ಯೋಜನೆ. ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ಮಂಡಳಿಯಿಂದ 900 ಕೋಟಿ ರೂಗಳ ವೆಚ್ಚದಲ್ಲಿ ಹೊಸದಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಯೋಜನೆಗಳ ಅನುಷ್ಠಾನ.

ಐದು ಮಹಾನಗರ ಪಾಲಿಕೆಗಳಲ್ಲಿ 11 ಕೋಟಿ ರೂಗಳ ವೆಚ್ಚದಲ್ಲಿ ದಿನಕ್ಕೆ ಕನಿಷ್ಠ 10 ಟನ್ ಸಾಮರ್ಥ್ಯದ ಮಟೀರಿಯಲ್ ರಿಕವರಿ ಸೌಲಭ್ಯಗಳ ಅಭಿವೃದ್ಧಿ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ 100 ಕೋಟಿ ರೂಗಳ ವೆಚ್ಚದಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಗ್ರಾಮಬಂಧ ಸೇತುವೆ ಯೋಜನೆ ಅನುಷ್ಠಾನ.  ಪೀಣ್ಯ ಕೈಗಾರಿಕಾ ಟೌನ್ ಶಿಪ್ ಸ್ಥಾಪನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಶಿರಸಿಯಲ್ಲಿ ಏಳು ಕೋಟಿ ರೂ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ. 2021 -22ರಲ್ಲಿ ಎರಡು ಕೋಟಿ ರೂ ಅನುದಾನ. ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡುವ ಉದ್ದೇಶಕ್ಕಾಗಿ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 52 ,529 ಕೋಟಿ ರೂ ಅನುದಾನ.

ಇದನ್ನೂ ಓದಿ:  Karnataka Budget 2021: ಕೈಗೆಟುಕುವ ದರದ ಫ್ಲ್ಯಾಟ್ ಖರೀದಿಗೆ 70 ಸಾವಿರದಿಂದ 90 ಸಾವಿರ ರೂ. ಉಳಿತಾಯ

 

Published On - 8:38 pm, Mon, 8 March 21