Karnataka Budget 2021: ಕೈಗೆಟುಕುವ ದರದ ಫ್ಲ್ಯಾಟ್ ಖರೀದಿಗೆ 70 ಸಾವಿರದಿಂದ 90 ಸಾವಿರ ರೂ. ಉಳಿತಾಯ
ಕರ್ನಾಟಕ ಬಜೆಟ್ 2021ರಲ್ಲಿ ಕೈಗೆಟುಕುವ ದರದ ಫ್ಲ್ಯಾಟ್ ಖರೀದಿಗೆ ರೂ. 70 ಸಾವಿರದಿಂದ ರೂ. 90 ಸಾವಿರದ ತನಕ ಉಳಿತಾಯ ಮಾಡುವ ಅವಕಾಶ ನೀಡಲಾಗಿದೆ. ಮುದ್ರಾಂಕ ಶುಲ್ಕವನ್ನು ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಸಲಾಗಿದೆ.
ಬೆಂಗಳೂರು: ಕೈಗೆಟುಕುವ ದರದ ಫ್ಲ್ಯಾಟ್ಗಳ ಖರೀದಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಬಜೆಟ್ 2021ರಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡುವ ಪ್ರಸ್ತಾಪವನ್ನು ಇಟ್ಟಿದ್ದಾರೆ. 35 ಲಕ್ಷದಿಂದ 45 ಲಕ್ಷ ರೂಪಾಯಿ ತನಕದ ಅಪಾರ್ಟ್ಮೆಂಟ್ಗಳ ಮುದ್ರಾಂಕ ಶುಲ್ಕವನ್ನು ಈಗಿರುವ ಶೇಕಡಾ 5ರಿಂದ ಶೇಕಡಾ 3ಕ್ಕೆ ಇಳಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಮೂಲಕವಾಗಿ ಮುದ್ರಾಂಕ ಶುಲ್ಕದಲ್ಲಿ ಖರೀದಿದಾರರಿಗೆ 70 ಸಾವಿರ ರೂಪಾಯಿಯಿಂದ 90 ಸಾವಿರ ರೂಪಾಯಿ ತನಕ ಉಳಿತಾಯ ಆಗುತ್ತದೆ.
ಭಾರತದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಕೋವಿಡ್- 19 ಕಾರಣಕ್ಕೆ ರಿಯಲ್ ಎಸ್ಟೇಟ್ ವಲಯಕ್ಕೆ ಪೆಟ್ಟು ಬಿದ್ದಿದೆ. ಇನ್ನು ಅಪಾರ್ಟ್ಮೆಂಟ್ಗಳ ಮಾರಾಟ ಕುಸಿದಿದ್ದು, ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಬಜೆಟ್ನಲ್ಲಿ ಪರಿಹಾರ ಒದಗಿಸಬೇಕು ಎಂದು ರಿಯಲ್ ಎಸ್ಟೇಟ್ ಕಂಪೆನಿಗಳು ಮನವಿ ಮಾಡಿಕೊಂಡಿದ್ದವು.
ಕೋವಿಡ್ 19ನಿಂದಾಗಿ ಹೌಸಿಂಗ್ ವಲಯ ನಿಧಾನಗತಿಯಲ್ಲಿದೆ. ಇನ್ನು ಮಾರಾಟ ಕೂಡ ಹಿಂಜರಿತ ಅನುಭವಿಸುತ್ತಿದ್ದು, ಮಾರದೆ ಉಳಿದು ಹೋದ ವಸತಿ ಸಮುಚ್ಚಯಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಮುದ್ರಾಂಕ ಮತ್ತು ನೋಂದಣಿ ಮೂಲಕದ ಆದಾಯದ ನಿರೀಕ್ಷೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳದೆ ರೂ. 12,655 ಕೋಟಿಯಲ್ಲೇ ಉಳಿಸಿಕೊಳ್ಳಲಾಗಿದೆ. ಅಂದಹಾಗೆ ಕಳೆದ ವರ್ಷ ಎರಡು ಸಲ ಅಬಕಾರಿ ಸುಂಕವನ್ನು ಏರಿಸಿದ ಮೇಲೆ ಅದರಲ್ಲಿ ಕೂಡ ಯಾವುದೇ ಬದಲಾವಣೆ ಮಾಡದೆ ಯಡಿಯೂರಪ್ಪ ಹಾಗೇ ಉಳಿಸಿದ್ದಾರೆ.
ಅಬಕಾರಿಯಿಂದ ಬರುವ ಆದಾಯದ ಗುರಿಯನ್ನು ಕಳೆದ ವರ್ಷ ಇರಿಸಿಕೊಂಡಿದ್ದ 22,700 ಕೋಟಿ ರೂ.ನಿಂದ 2021-22ರ ಹಣಕಾಸು ವರ್ಷಕ್ಕೆ 24,580 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಫೆಬ್ರವರಿ ಕೊನೆ ಹೊತ್ತಿಗೆ ರಾಜ್ಯಕ್ಕೆ ಅಬಕಾರಿ ಆದಾಯ 20,900 ಕೋಟಿ ರೂಪಾಯಿ ಬಂದಿದೆ. “2020- 2ರಲ್ಲಿ ಕೋವಿಡ್- 19 ಪರಿಣಾಮವಾಗಿ ಸಾರ್ವಜನಿಕರಿಗೆ ಹೇಳಲಾಗದಷ್ಟು ಸಮಸ್ಯೆ ಆಗಿದೆ. ಜನರ ಮೇಲೆ ನಾನಿನ್ನು ಹೆಚ್ಚುವರಿ ಹೊರೆ ಹೊರೆಸುವುದಿಲ್ಲ,” ಎಂದು ಪೆಟ್ರೋಲ್- ಡೀಸೆಲ್ ಮೇಲೆ ರಾಜ್ಯ ಸರ್ಕಾರದಿಂದ ಯಾವುದೇ ತೆರಿಗೆ ಹೆಚ್ಚಿಸದೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್ ಬೆಲೆ
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಹೀಗಿದೆ