ಬೆಂಗಳೂರು: ಇಂದು ರಾಜ್ಯದಲ್ಲಿ 2 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಚುನಾವಣಾ ಮತ ಎಣಿಕೆ ನಡೆಯುತ್ತಿದೆ. ಸದ್ಯದ ಟ್ರೆಂಡ್ ಪ್ರಕಾರ ಮಸ್ಕಿ ಮತ್ತು ಬಸವಕಲ್ಯಾಣ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನೆಡೆಯಲ್ಲೇ ಇದೆ. ಅದರಲ್ಲೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು, ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಕೂಡ ಅದನ್ನೀಗ ಒಪ್ಪಿಕೊಂಡಂತಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ಆದರೆ ಸಚಿವ ಸ್ಥಾನ ಸಿಗದೆ ಇರುವುದರಿಂದ ಬೇಸರಗೊಂಡು 2019ರಲ್ಲಿ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅಂದು ಪ್ರತಾಪ್ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಅವರೇ ಸ್ಪರ್ಧಿಸಿದ್ದರು ಹಾಗೂ ಕಾಂಗ್ರೆಸ್ನಿಂದ ಬಸನಗೌಡ ತುರುವಿಹಾಳ ಕಣಕ್ಕಿಳಿದಿದ್ದರು. ಒಟ್ಟಾರೆ ಇಲ್ಲಿ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಿರೀಕ್ಷೆಯಂತೆ ಇಂದು ಮೊದಲ ಸುತ್ತಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು.
ಇದೀಗ ಮಸ್ಕಿ ಉಪಚುನಾವಣೆಯ 9 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡ ಹೊತ್ತಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ 29, 325 ಮತಗಳಿಂದ ಮುಂದಿದ್ದಾರೆ. ಹಾಗೇ ಬಿಜೆಪಿಯ ಪ್ರತಾಪ್ಗೌಡ ಪಾಟೀಲ್ 19014 ಮತ ಪಡೆದಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಸುಮಾರು 10,311 ಮತಗಳಿಂದ ಮುಂಚೂಣಿಯಲ್ಲಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಈಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಹೊರನಡೆದ ಪ್ರತಾಪ್ ಗೌಡ ಪಾಟೀಲ್
ಇನ್ನು ಮಸ್ಕಿಯಲ್ಲಿ ತಮ್ಮ ಸೋಲನ್ನು ಈಗಾಗಲೇ ಪ್ರತಾಪ್ಗೌಡ ಪಾಟೀಲ್ ಒಪ್ಪಿಕೊಂಡಿದ್ದಾರೆ. ಮತ ಎಣಿಕೆ ಕೇಂದ್ರದಿಂದ ಹೊರನಡೆದ ಅವರು ನಂತರ ಟಿವಿ 9 ಕನ್ನಡ ಸುದ್ದಿವಾಹಿನಿಯೊಂದಿಗೆ ಮಾತನಾಡಿ, ನಾನು ಸೋಲಾಗಲ್ಲ ಎಂದುಕೊಂಡಿದ್ದೆ. ಆದರೆ ಜನರು ಹೊಸಬರನ್ನು ಬಯಸಿದ್ದಾರೆ. ಇವತ್ತು ವಿಶ್ವಾಸ ದ್ರೋಹ ಆಗಿದೆ. ಅಭಿವೃದ್ಧಿ, ಒಳ್ಳೆಯತನ ತಮಗೆ ಮುಖ್ಯವಲ್ಲ ಎಂದು ಜನರು ತೋರಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಮಸ್ಕಿಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದ ಬಿಜೆಪಿ ಅಲ್ಲಿನ ಹೊಣೆಗಾರಿಕೆಯನ್ನು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರರಿಗೆ ವಹಿಸಿತ್ತು. ಅಲ್ಲದೆ, ಈ ಹಿಂದೆ ಕಾಂಗ್ರೆಸ್ನಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರಿಂದ ಖಂಡಿತ ಈ ಬಾರಿಯೂ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವೂ ಆ ಪಕ್ಷಕ್ಕೆ ಇತ್ತು. ಆದರೆ ಇಲ್ಲಿ ಜನರು ವ್ಯಕ್ತಿಯನ್ನು ನೋಡದೆ, ಪಕ್ಷವನ್ನು ನೋಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
karnataka By Election counting uderway in Maski assembly constituency and congress may win
Published On - 11:58 am, Sun, 2 May 21