ಬೆಂಗಳೂರು, ನವೆಂಬರ್ 9: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meet) ಗುರುವಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ‘ಕೃಷಿ ಭಾಗ್ಯ (Krushi Bhagya)‘ ಯೋಜನೆ ಮತ್ತೆ ಪ್ರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸಂಪುಟ ಸಭೆಯ ಬಳಿಕ ಸಚಿವ ಹೆಚ್‌ಕೆ ಪಾಟೀಲ್ (HK Patil) ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನಡಿ 24 ಜಿಲ್ಲೆಗಳ 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದರು.
ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ 5 ತಾಲೂಕಿನಲ್ಲಿ ಜಾರಿಗೆ ಒಪ್ಪಿಗೆ ನೀಡಲಾಗಿದೆ. 2025-26ನೇ ಸಾಲಿನ ವರೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳ್ಳಲಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಒಟ್ಟು ಮೊತ್ತ 38 ಕೋಟಿ ರೂಪಾಯಿ ಆಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಗೆ ವಿಮಾ ಕಂಪನಿ ನಿಗದಿ ಮಾಡಲಾಗಿದೆ. ಕ್ಲಸ್ಟರ್‌ವಾರು ವಿಮಾ ಸಂಸ್ಥೆಗಳ ನಿಗದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
10 ಕ್ಲಸ್ಟರ್‌ಗಳಲ್ಲಿ ರಿಲಯನ್ಸ್ ಜನರಲ್ ಇನ್ಶುರೆನ್ಸ್, ಬಜಾಜ್ ಅಲಿಯನ್ಸ್, SBI ಜನರಲ್ ಇನ್ಶುರೆನ್ಸ್, ಯುನಿವರ್ಸಲ್ ಸೊಂಪೊ ಜನರಲ್ ಇನ್ಶುರೆನ್ಸ್, ಫ್ಯೂಚರ್ ಇನ್ಶುರೆನ್ಸ್ ಕಂಪನಿ ನಿಗದಿಗೊಳಿಸಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪಾಟೀಲ್ ತಿಳಿಸಿದರು.
ಡಾ. ನಾಗಮಣಿ ಕಡ್ಡಾಯ ನಿವೃತ್ತಿ ನಿರ್ಧಾರಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಡಾ. ನಾಗಮಣಿ ಸಿಕ್ಕಿಬಿದ್ದಿದ್ದರು.
ಈ ಮಧ್ಯೆ, ಲೋಕಾಯುಕ್ತ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ಲೆಕ್ಕಾಧೀಕ್ಷಕರ ನೇಮಕ, ರಾಜ್ಯಪಾಲರ ಸಚಿವಾಲಯಕ್ಕೆ ಸರ್ಜನ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಡಾ.ನವೀನ್ ಕುಮಾರ್ ನೇಮಕಗೊಳಿಸಿ ನೇಮಕಗೊಳಿಸಿ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಇಲ್ಲ: ಸಂಪುಟದಲ್ಲಿ ನಡೆಯದ ಚರ್ಚೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Thu, 9 November 23