
ಬೆಂಗಳೂರು, (ಅಕ್ಟೋಬರ್ 29): ಕೊನೆಗೂ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು (ಅಕ್ಟೋಬರ 29) ನಡೆದ ಸಚಿವ ಸಂಪುಟದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ ಬರೋಬ್ಬರಿ ಎಂಟು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಸರ್ಕಾರಕ್ಕೆ 70:30 ರಂತೆ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ, 80:20 ರಂತೆ ದರ ಏರಿಕೆ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದ್ರೆ, ಅಂತಿಮವಾಗಿ 90:10ರಂತೆ ದರ ಏರಿಸಲಾಗಿದೆ.
ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್‌ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಮಂಡಳಿಗಳ ಪಾಲಾಗಿದೆ.
ಇನ್ನು ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದೆ. ಆದ್ರೆ, ಸಂಪುಟ ಟಿಕೆಟ್ ದರ ಏರಿಕೆಯನ್ನು ಸಾರಿಗೆ ಇಲಾಖೆಗೆ ಬಿಟ್ಟಿದ್ದು, ಇಲಾಖೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿದ್ದು, ನವೆಂಬರ್ 5 ರಂದು ಸಾರಿಗೆ ದರ ಹೆಚ್ಚಳ ತೀರ್ಮಾನವಾಗಲಿದೆ.
10 ರೂ. ಏರಿಸಬೇಕೆಂಬ ಬೇಡಿಕೆ ಇತ್ತು. ಒಕ್ಕೂಟಗಳ ಸ್ವಾಯತ್ತತೆ ಮೊಟಕು ಮಾಡಬಾರದು. ಆದರೂ ನಾವು 8 ರೂ.ಗೆ ಇಳಿಸಿ ನಿರ್ಧಾರ ಮಾಡಿದ್ದು, 7 ರೂ. ರೈತರಿಗೆ ನೀಡುತ್ತೇವೆ. ಇನ್ನುಳಿದ 1 ರೂ. ಒಕ್ಕೂಟಕ್ಕೆ ನೀಡುತ್ತೇವೆ. ಸರ್ವಾನುಮತದಿಂದ ನಾವು ನಿರ್ಧಾರ ಮಾಡಿದ್ದೇವೆ. ಇದರೊಂದಿಗೆ ಪ್ರತಿ ಲೀಟರ್ ಹಾಲಿಗೆ 35ರೂ. ರೈತರಿಗೆ ಸಿಗುತ್ತಿತ್ತು. ಈಗ ಸರ್ಕಾರದ 5 ರೂ. ಸಹಾಯಧನ ಸೇರಿ 42 ರೂ. ಸಿಗಲಿದೆ. ಬರಗಾಲದ ಮಧ್ಯೆ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
Published On - 4:21 pm, Thu, 29 October 26