
ಬೆಂಗಳೂರು, ಸೆಪ್ಟೆಂಬರ್ 21: ಜಾತಿಗಣತಿ (Caste Census) ಜ್ವಾಲ ಧಗಧಗಿಸ್ತಿದೆ. ನಾಳೆಯಿಂದ ರಾಜ್ಯಾದ್ಯಂತ ಜಾತಿಗಣತಿ ಶುರುವಾಗ್ತಿದೆ. ಈ ಮಧ್ಯೆ ಗೊಂದಲದ ಗೂಡಾಗಿರುವ ಕೈಪಿಡಿಯಲ್ಲಿ ಹಲವು ಅಂಶಗಳಿಗೆ ಕೊಕ್ ನೀಡಲಾಗಿದೆ. ಕ್ರಿಶ್ಚಿಯನ್ ಧರ್ಮದ (Christian) ಅಡಿಯಲ್ಲಿ ಇದ್ದ 33 ಉಪ ಜಾತಿಗಳು ಡ್ರಾಪ್ಡೌನ್ನಿಂದ ತೆಗೆಯುತ್ತಿದ್ದೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ನಾಳೆಯಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದೆ. ಸ್ವ ಇಚ್ಛೆಯಿಂದ ಜಾತಿ, ಧರ್ಮ ಉಲ್ಲೇಖ ಮಾಡಲು ಅವಕಾಶ ಇದೆ. ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಒಟ್ಟು 33 ಉಪ ಜಾತಿಗಳನ್ನು ಡ್ರಾಪ್ಡೌನ್ನಿಂದ ತೆಗೆಯುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಕ್ರಿಶ್ಚಿಯನ್ ಜೊತೆ ಒಕ್ಕಲಿಗ ಕಾಲಂ ತೆಗೆಯದಿದ್ರೆ ಬೃಹತ್ ಹೋರಾಟ: ಒಕ್ಕಲಿಗರ ಒಕ್ಕೊರಲ ನಿರ್ಧಾರ
ಹಿಂದಿನ ಸಮೀಕ್ಷೆಯಲ್ಲಿ ಏನಿತ್ತೋ ಅದನ್ನೇ ಅಳವಡಿಸಿಕೊಂಡಿದ್ದೇವೆ. ಜಾತಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗೂ ಆಹ್ವಾನಿಸಿದ್ದೆವು. ಬಹಳಷ್ಟು ಜನ ಜಾತಿ ಬಿಟ್ಟುಹೋಗಿದೆ ಅಂತ ಲಿಖಿತವಾಗಿ ನೀಡಿದ್ದರು. ಪತ್ರಿಕಾ ಪ್ರಕಟಣೆ ಬಳಿಕ 148 ಜಾತಿಗಳನ್ನು ನಾವು ಸೇರ್ಪಡೆ ಮಾಡಿದ್ದು, 1413 ಜಾತಿಗಳು ಮೊದಲೇ ಇತ್ತು. 1561 ಜಾತಿಗಳನ್ನು ಈಗ ನಾವು ಪಟ್ಟಿ ಮಾಡಿದ್ದೇವೆ. ಈ ವಿಷಯದಲ್ಲಿ ಗೊಂದಲ ಆಗಿದ್ದಕ್ಕೆ ಸರ್ಕಾರದಲ್ಲೂ ಚರ್ಚೆ ಆಗಿದೆ. ಸಚಿವರ ತಂಡ ಕೂಡ ಅವರ ಗೊಂದಲದ ಬಗ್ಗೆ ಚರ್ಚೆ ಮಾಡಿದರು ಎಂದು ಹೇಳಿದರು.
ನಮ್ಮ ಆಯೋಗ ಯಾವುದೇ ಹೊಸ ಜಾತಿ ಕ್ರಿಯೇಟ್ ಮಾಡಿಲ್ಲ. ಪಟ್ಟಿಯಲ್ಲಿ ಇರುವ ಹೆಸರು ಕಾಂತರಾಜು ಸಮೀಕ್ಷೆ ಪಟ್ಟಿಯಲ್ಲೂ ಇತ್ತು. ಕಾಂತರಾಜು ಸಮೀಕ್ಷೆ ಮಾಡುವಾಗಲೇ ಜಾತಿಗಳು ದಾಖಲಾಗಿದ್ದು, ಅದೇ ಹೆಸರಲ್ಲಿ ಸಾವಿರಾರು ಜನ ಸಮೀಕ್ಷೆಗೆ ಮಾಹಿತಿ ಒದಗಿಸಿದ್ದಾರೆ ಎಂದರು.
ಸರ್ವೆಗೆ ಆಧಾರ್ ನಂಬರ್ ಕಡ್ಡಾಯ ಮಾಡಿದ್ದೇವೆ. ಪ್ರತಿ ಮನೆಯ ಮುಖ್ಯಸ್ಥರಿಂದ ಆಧಾರ್ ದೃಢೀಕರಣ ಮಾಡುತ್ತೇವೆ. ಪಡಿತರ ಚೀಟಿಯಲ್ಲಿ ದಾಖಲಾದ ಆಧಾರ್ ನಂಬರ್ ಕೂಡ ಸಿಗುತ್ತೆ. ಸಮೀಕ್ಷೆಗೆ ವಿವಿಧ ಇಲಾಖೆಗಳಿಂದ ಸಹಕಾರ ಸಿಕ್ಕಿದೆ. ಎಲ್ಲ ಮನೆಗಳನ್ನೂ ಮ್ಯಾಪ್ ಮಾಡಿ ಸಿಸ್ಟಮ್ನಲ್ಲಿ ಅಪ್ಲೋಡ್ ಆಗಿದೆ. 2 ಕೋಟಿಗಿಂತ ಹೆಚ್ಚು ಮನೆಗಳು ದಾಖಲಾಗಿವೆ. ಜಿಯೋ ಟ್ಯಾಗ್ ಮೂಲಕ ಒಂದೊಂದು ಬ್ಲಾಕ್ ಮಾಡಿಕೊಂಡಿದ್ದೇವೆ. 130ರಿಂದ 140 ಮನೆಗಳು ಒಂದೊಂದು ಬ್ಲಾಕ್ನಲ್ಲಿ ಬರುತ್ತದೆ. ಅತ್ಯಾಧುನಿಕ ಆ್ಯಪ್ನಿಂದ ಸರ್ವೆ ಆಗುತ್ತದೆ. ಮೊಬೈಲ್ನಲ್ಲಿ ನಮ್ಮ ಸಿಸ್ಟಮ್ನಿಂದ ಪ್ರಶ್ನೆಗಳು ಲೋಡ್ ಆಗುತ್ತದೆ. 60 ಪ್ರಶ್ನೆ ಇರುತ್ತದೆ, ಹ್ಯಾಂಡ್ ಬಿಲ್ ರೀತಿ ಜನರಿಗೆ ತಲುಪಿಸಿದ್ದೇವೆ. ಎಲ್ಲ ಜನರಿಗೆ ಏನೇನು ಪ್ರಶ್ನೆ ಬರುತ್ತದೆ ಎಂಬ ತಿಳಿವಳಿಕೆ ನೀಡಿದ್ದೇವೆ ಎಂದು ತಿಳಿಸಿದರು.
ನಮಗೆ ಬೇಕಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಮಾಹಿತಿ. ಸಮೀಕ್ಷೆ ಸಂದರ್ಭದಲ್ಲಿ ಪ್ರಥಮವಾಗಿ ಕುಟುಂಬದ ಧರ್ಮ ಕೇಳುತ್ತೇವೆ. ಧರ್ಮ ನಮೂದಿಸಿದ ನಂತರ ಜಾತಿ, ಉಪಜಾತಿ ಬಗ್ಗೆ ಕೇಳುತ್ತೇವೆ. ಜಾತಿ, ಉಪಜಾತಿ ಬೇರೆ ಹೆಸರಲ್ಲಿ ಪ್ರಚಲಿತ ಇದೆಯಾ ಅಂತ ಕೇಳುತ್ತೇವೆ. ಇದಕ್ಕಿಂತ ಮೊದಲು ಯಾವ ಕೆಟಗರಿಯಲ್ಲಿ ಬರುತ್ತಾರೆಂದು ಕೇಳುತ್ತೇವೆ. SC, ST, ಹಿಂದುಳಿದ ವರ್ಗ ಮತ್ತು ಇತರೆ ಕೆಟಗರಿ ಮಾಡಿಕೊಂಡಿದ್ದೇವೆ. ಜಾತಿಯನ್ನು ನಾವು ಡ್ರಾಪ್ಡೌನ್ಗೆ ಹಾಕಿದ್ದು ಸಮೀಕ್ಷೆಗಾಗಿ ಮಾತ್ರ, ಇದು ಯಾವುದೇ ಪ್ರಮಾಣಪತ್ರಕ್ಕೆ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ 45 ದಿನ ಮುಂದೂಡಲು ನಿರ್ಮಲಾನಂದನಾಥಶ್ರೀ ಆಗ್ರಹ: ಕೊಟ್ಟ ಕಾರಣ ಇಲ್ಲಿದೆ
ಈ ಜಾತಿಗಳ ಪಟ್ಟಿಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಜಾತಿಗಳ ಡ್ರಾಪ್ ಡೌನ್ ನಮ್ಮ ಗಣತಿದಾರರ ಅನುಕೂಲಕ್ಕೆ ಮಾತ್ರ. ಜಾತಿಗಳ ಪಟ್ಟಿಯಿಂದ ಬೇರೆ ಯಾರಿಗೂ ಉಪಯೋಗ ಇಲ್ಲ. ಶೀಘ್ರದಲ್ಲಿ ಐಡೆಂಟಿಫೈ ಮಾಡುವುದಕ್ಕೆ ಮಾತ್ರ ಅನುಕೂಲ ಆಗಿದ್ದು, ಜಾತಿಗಳ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
ಇನ್ನು ಜಾತಿ ನಮೂದಿಸುವ ವಿಚಾರದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆ ಜಾತಿ ಕಾಲಂ ನಿಷ್ಕ್ರಿಯಗೊಳಿಸಲಾಗಿದ್ದು, ಧರ್ಮ, ಜಾತಿ, ಉಪಜಾತಿ ನಮೂದು ಜನರ ಆಯ್ಕೆಗೆ ಬಿಡಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಜಾತಿ ನಮೂದಿಸಲು ಅವಕಾಶ ನೀಡಲಾಗಿದೆ. ಯಾರು ಬೇಕಾದರೂ ಉಪ ಜಾತಿಯನ್ನು ಇತರೆ ಕಾಲಂನಲ್ಲಿ ಬರೆಸಬಹುದು. ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಅಂದರೆ ಬರೆಸುತ್ತೀನಿ ಅಂದರೆ ಇತರೆ ಕಾಲಂನಲ್ಲಿ ಬರೆಯಬಹುದು. ಆದರೆ ಡ್ರಾಪ್ಡೌನ್ನಲ್ಲಿ ಮಾತ್ರ ಇರುವುದಿಲ್ಲ ಎಂದು ಮಧುಸೂದನ್ ನಾಯ್ಕ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:18 pm, Sun, 21 September 25