ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಒಂದು ಲಕ್ಷ ರೂ ಪರಿಹಾರ ನೀಡಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಜೊತೆಗೆ, ಇದು BPL ಪಡಿತರದಾರರಿಗೆ ಮಾತ್ರ ಅನ್ವಯವಾಗಲಿದೆ. BPL ಪಡಿತರದಾರ ಕುಟುಂಬದ ವಯಸ್ಕರು ಮೃತಪಟ್ಟಿದ್ದರೆ ಒಬ್ಬರಿಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಕೋವಿಡ್ ಸೊಂಕಿನಿಂದ ದುಡಿಯುವ ವ್ಯಕ್ತಿಗಳು ಮೃತ ಪಟ್ಟು ಅನೇಕ ಕುಟುಂಬಗಳು ಕಷ್ಟ ಪಡ್ತಾ ಇದ್ದಾರೆ. ಇದನ್ನು ಮನಗಂಡು ದುಡಿಯುವ ವ್ಯಕ್ತಿ ಮೃತ ಪಟ್ಟರೇ ಒಂದು ಕುಟುಂಬಕ್ಕೆ ಒಬ್ಬರಂತೆ ಒಂದು ಲಕ್ಷ ರೂ ನೀಡಲಾಗುತ್ತದೆ. ಬಿಪಿಎಲ್ ಕುಟುಂಬಗಳ ವಯಸ್ಕರು ಮೃತ ಪಟ್ಟಿದ್ರೆ ಒಂದು ಕುಟುಂಬಕ್ಕೆ ಒಬ್ಬರಂತೆ 1 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಸುಮಾರು 250-300 ಕೋಟಿ ರೂ. ಖರ್ಚಾಗುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಹಣಕಾಸು ನೆರವನ್ನು ನಾವು ನೀಡುತ್ತಿದ್ದೇವೆ. ಹಣಕಾಸಿನ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಈಗ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಕೊಡ್ತಾ ಇದ್ದೇವೆ. ಅಂದ್ರೆ ಇದರ ಅರ್ಥ ಹಣಕಾಸಿನ ಪರಿಸ್ಥಿತಿ ಇರೋದರಲ್ಲಿಯೇ ಉತ್ತಮವಾಗಿದೆ ಎಂಬುದು ತಿಳಿದುಬರುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಆರ್ಥಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
(karnataka CM BS Yediyurappa PC on Lockdown Relief Fund)
Published On - 1:05 pm, Mon, 14 June 21