Karnataka Tourism: ಕರ್ನಾಟಕ ಪ್ರವಾಸೋದ್ಯಮ ಉತ್ತೇಜನಕ್ಕೆ ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

|

Updated on: Jul 10, 2024 | 10:42 AM

ನೆರೆಯ ಕೇರಳ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳು ಮತ್ತು ಕರಾವಳಿ ಪ್ರದೇಶವಿದೆ. ಆದರೂ ಕೇರಳದಷ್ಟು ಮಟ್ಟಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರವಾಸ ಉದ್ಯಮ ಉತ್ತೇಜನಕ್ಕೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನೀಡಿರುವ ಸೂಚನೆಗಳಿಗೆ ಸಂಬಂಧಿಸಿದ ವಿವರ ಇಲ್ಲಿದೆ.

Karnataka Tourism: ಕರ್ನಾಟಕ ಪ್ರವಾಸೋದ್ಯಮ ಉತ್ತೇಜನಕ್ಕೆ ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Image Credit source: PTI
Follow us on

ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ 320 ಕಿ.ಮೀ ಕರಾವಳಿ ತೀರವಿದ್ದರೂ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೂಕ್ತ ಸೌಲಭ್ಯಗಳಿಲ್ಲದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಸಿಎಂ, ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ನಿರ್ಧರಿಸಿದ್ದು, ಈ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಬೇಕು. ಪ್ರವಾಸಿ ತಾಣಗಳ ಸಂರಕ್ಷಣೆಗೆ ಜಿಲ್ಲಾವಾರು ಕ್ರಿಯಾ ಯೋಜನೆ ಮೂರು ತಿಂಗಳೊಳಗೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಕಡಿಮೆಯಾಗಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾದರೆ ಮಾತ್ರ ಹೂಡಿಕೆದಾರರು ಮುಂದೆ ಬರುತ್ತಾರೆ. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶವಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯರ ಸಹಕಾರದೊಂದಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು. ಸಿಆರ್‌ಝಡ್ ಕಾಯ್ದೆಯಿಂದಾಗಿ ಅಭಿವೃದ್ಧಿಯಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

‘ಕೇರಳದಷ್ಟೂ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗಲಿಲ್ಲ’

ಪ್ರವಾಸೋದ್ಯಮವು ಅನೇಕ ರಾಜ್ಯಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ, ಆದರೆ ಕರ್ನಾಟಕವು ನೆರೆಯ ಕೇರಳದಷ್ಟು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಕರಾವಳಿಯಲ್ಲಿ ವೈದ್ಯಕೀಯ ಕಾಲೇಜುಗಳು, ಬಂದರುಗಳು ಮತ್ತು ದೇವಾಲಯಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಿವೆ. ಆದರೆ ಒಂದೇ ಒಂದು ಪಂಚತಾರಾ ಹೋಟೆಲ್ ಇಲ್ಲ. ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಪ್ರತ್ಯೇಕ ಯೋಜನೆ ಸಿದ್ಧಪಡಿಸಬೇಕಿದೆ. ಕರಾವಳಿ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಿಸುವ ಅಗತ್ಯವಿದೆ. ತೆರಿಗೆ ವಸೂಲಿ ಮಾಡಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರಾವಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅರಸಿ ಮುಂಬೈ ಮತ್ತು ಮಧ್ಯಪ್ರಾಚ್ಯಕ್ಕೆ ಹೋಗುವ ಪರಿಸ್ಥಿತಿ ಬದಲಾಗಬೇಕಿದೆ. ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಿಂದ ಮಾತ್ರವಲ್ಲದೆ ಸರ್ಕಾರದಿಂದಲೂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧ; ಪಾರ್ಕಿಂಗ್ ಬಗ್ಗೆ ಇಲ್ಲಿದೆ ವಿವರ

ರಾಜ್ಯದಲ್ಲಿ 25,000 ಸ್ಮಾರಕಗಳಿದ್ದು, 23,000 ಕಡೆಗಣಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯಿದೆ 2015 ಸರಿಯಾಗಿ ಅನುಷ್ಠಾನಗೊಂಡರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಜಿಲ್ಲೆಗಳಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಸಚಿವ ಎಚ್​ಕೆ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೂರು ತಿಂಗಳಲ್ಲಿ ಯೋಜನೆ ಸಿದ್ಧಪಡಿಸಲು ಜಿಲ್ಲೆಗಳ ಸಾಹಿತಿಗಳು ಹಾಗೂ ಕಲಾವಿದರ ನೆರವು ಪಡೆಯುವಂತೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ