ಬೆಂಗಳೂರು, (ಜುಲೈ 26): ಕರ್ನಾಟಕದಲ್ಲಿ (Karnataka) ವರುಣ (Rain) ಅಬ್ಬರಿಸಿ ಆರ್ಭಟಿಸುತ್ತಿದ್ದಾನೆ. ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೊಲ, ಗದ್ದೆ, ತೋಟಗಳೆಲ್ಲಾ ಜಲಾಪೋಶನವಾಗಿವೆ. ಇನ್ನು ನಿರಂತರ ಮಳೆಯಿಂದಾಗಿ ಅಮಾಯಕ ಜೀವಗಳು ಬಲಿಯಾಗಿದ್ದು, ಅನೇಕರ ಬದುಕು ಬೀದಿಗೆ ಬಿದ್ದಿದೆ. ಇದೆಲ್ಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ತಂದಿಟ್ಟಿರುವ ಅನಾಹುತಗಳು. ಈ ಅನಾಹುತ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜುಲೈ 31ರಿಂದ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: Karnataka Rains: ಜಿಲ್ಲಾಧಿಕಾರಿಗಳ ಆದೇಶ ಪಾಲಿಸುವಂತೆ ವಿದ್ಯಾರ್ಥಿ, ಪೋಷಕರಿಗೆ ಸಿಎಂ ಮನವಿ
ಈ ಬಗ್ಗೆ ಇಂದು (ಜುಲೈ 26) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಹಲವೆಡೆ ಮಳೆಯಾಗಿ ಡ್ಯಾಂಗಳು ತುಂಬಿ ಹರಿಯುತ್ತಿವೆ. ಆಲಮಟ್ಟಿ, ಕೆಆರ್ಎಸ್, ಕಬಿನಿ, ಹಾರಂಗಿ ಡ್ಯಾಂಗಳಿಗೆ ನೀರು ಬಂದಿದೆ. ಇದರಿಂದ ರಾಜ್ಯದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಜುಲೈ 31ರಿಂದ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ಮಾಹಿತಿ ನೀಡಿದರು.
ಮಳೆಯಿಂದ ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಹಾವೇರಿಯಲ್ಲಿ ಎಲ್ಲ ಕಡೆ ಬಿತ್ತನೆ ಚುರುಕಾಗಿದೆ. ಕೆಲವೇ ದಿನಗಳಲ್ಲಿ ನೂರು ಪರ್ಸೆಂಟ್ ಬಿತ್ತನೆ ಆಗಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಸೋಮವಾರದಿಂದ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ಕೊಡುತ್ತೇನೆ. ಮಳೆ ಹಾನಿಯಾದ ಜನರ ಭಾಗಕ್ಕೂ ಹೋಗುತ್ತೇನೆ ಎಂದರು.
ಇನ್ನು ಮಳೆ ಹಾನಿ ಜಿಲ್ಲೆಗಳಿಗೆ ಭೇಟಿ ನೀಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ 4 ಗಂಟೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು,ಮಳೆ ಹಾನಿ, ಬೆಳೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:06 pm, Wed, 26 July 23