ಬೆಂಗಳೂರು: ಬಿಜೆಪಿ ಶಾಸಕರು ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೇ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿ ಬಿಜೆಪಿ ಶಾಸಕರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕೊವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು.ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ ಎಂದು ಬಿಜೆಪಿ ಶಾಸಕರಿಗೆ ಮನವಿ ಮಾಡಿದ್ದಾರೆ.
ಇತ್ತ ಸಿಎಂ ಯಡಿಯೂರಪ್ಪ ಅವರ ಕುರಿತು ಹೇಳಿಕೆ ನೀಡಿರುವ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ಸರ್ಕಾರ ಬರುವುದಕ್ಕೆ ನನ್ನದೂ ಅಳಿಲು ಸೇವೆ ಇದೆ. ಯಡಿಯೂರಪ್ಪ ಸಿಎಂ ಆಗುವುದಕ್ಕೆ ನನ್ನದೂ ಕೊಡುಗೆ ಇದೆ. ಮೈತ್ರಿ ಸರ್ಕಾರ ಬೇಡವೆಂದು ಬಿಎಸ್‌ವೈಗೆ ಬೆಂಬಲ ಕೊಟ್ಟೆವು. ಇದು ನನ್ನ ಕೊಡುಗೆ ಅಲ್ಲವೇ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ರಾಜೀನಾಮೆ ಹೇಳಿಕೆ ಬಗ್ಗೆ ನಾನು ಏನನ್ನೂ ಮಾತಾಡುವುದಿಲ್ಲ. ಶಾಸಕ ರೇಣುಕಾಚಾರ್ಯ ಅಥವಾ ಇತರರು ಏನಾದರೂ ಹೇಳಲಿ ಬಿಡಿ.. ನಮ್ಮ ಪಕ್ಷದವರ ಪರ, ವಿರೋಧ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಯಾವತ್ತೂ ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ. ಸಚಿವ ಆರ್. ಅಶೋಕ್ ಮತ್ತು ನಾನು ಸ್ನೇಹಿತರು, ಸಹಜವಾಗಿ ಕಿತ್ತಾಡಿಕೊಳ್ಳೋದು ಮಾಮೂಲಿ ಎಂದು ಬೆಂಗಳೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು.ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ
— B.S. Yediyurappa (@BSYBJP) June 7, 2021
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ನನ್ನ ಬಗ್ಗೆ ಆಪಾದನೆ ಮಾಡಬೇಕು ಅಂತಿದೆ, ಹಾಗಾಗಿ ಮಾಡ್ತಾರೆ. ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಬಾರದು. ನಾನು ತಿಹಾರ್ ಜೈಲಿಗೆ ಹೋಗಿ ಬಂದವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಜೈಲಿಗೆ ಹೋಗಿಬಂದ ಬಳಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ನಮ್ಮ ಪಕ್ಷದ ಸದಸ್ಯತ್ವ ಸ್ವೀಕರಿಸುವಂತೆ ಸಲಹೆ ನೀಡುತ್ತೇನೆ. ಇಲ್ಲವೇ ಅವರು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲಿ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹರಿಹಾಯ್ದರು.
ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ
ಇನ್ನುಮುಂದೆ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಬಾರದು. ಸಿಎಂ ಯಡಿಯೂರಪ್ಪರ ಬೆಂಬಲವಾಗಿ ವರಿಷ್ಠರ ಬಳಿ ತೆರಳಲೂ ಹಲವು ಶಾಸಕರು ಸಿದ್ಧರಿದ್ದಾರೆ. ಉಳಿದ ಅವಧಿಗೂ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯಬೇಕು. ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹೇಳಲೇಬೇಕು. ಹೀಗಾಗಿ ನಮಗೆ ಹೈಕಮಾಂಡ್‌ನಿಂದ ಸ್ಪಷ್ಟ ನಿಲುವು ಬರಬೇಕು ಎಂಬ ನಿಲುವನ್ನು ಕಂದಾಯ ಸಚಿವ ಆರ್.ಅಶೋಕ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಳೆದಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ ನಂತರ ಕಂದಾಯ ಸಚಿವ ಆರ್.ಅಶೋಕ್ , ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಮೇಲೆ ಬಿಜೆಪಿ ಹೈಕಮಾಂಡ್‌ಗೆ ಸಂಪೂರ್ಣ ವಿಶ್ವಾಸವಿದೆ. ಸಿಎಂ ಯಡಿಯೂರಪ್ಪರನ್ನು ನಂಬಿಯೇ ಬೇರೆ ಪಕ್ಷದಿಂದ ಬಿಜೆಪಿಗೆ 17 ಶಾಸಕರು ಬಂದಿದ್ದರು. ಅವರಿಗೂ ಸಿಎಂ ಯಡಿಯೂರಪ್ಪರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ
ಸಿಎಂ ಯಡಿಯೂರಪ್ಪ ಜನಪರ ಹೋರಾಟದಿಂದ ಬಂದವರು. ಜನರ ಕಷ್ಟಗಳಿಗೆ ಹೋರಾಟ ಮಾಡಿದವರು. ಅಧಿಕಾರ ಸಿಕ್ಕಾಗ ಹೋರಾಟವನ್ನು ಮುಂದುವರೆಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದರು. ಬಹುಮತ ಇರುವುದು ಇವತ್ತಿಗೂ ಯಡಿಯೂರಪ್ಪ ಅವರ ಹೆಸರಲ್ಲಿ. ಯಡಿಯೂರಪ್ಪ ಹೆಸರು ಕೇಳಿ ಜನ ಅತಿ ಹೆಚ್ಚು ಮತಗಳನ್ನ ನೀಡಿದ್ದಾರೆ. ಬಹುಮತ ಇಲ್ಲದಾಗಲೂ ಸರ್ಕಾರ ರಚನೆ ಮಾಡಿದವರು ಯಡಿಯೂರಪ್ಪ. ಈಗ ಸಿಎಂ ಯಡಿಯೂರಪ್ಪರ ನಾಯಕತ್ವದಲ್ಲಿ ಅಪಸ್ವರ ಎತ್ತಿದವರ ಪಾತ್ರ ಸರ್ಕಾರ ರಚನೆಯಲ್ಲಿ ಏನಿದೆ? ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ
ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ನೈಸರ್ಗಿಕ ಆಪತ್ತು ಎದುರಿಸಿಕೊಂಡು ಬಂದಿದ್ದಾರೆ. ಒಂದು ದಿನವೂ ಕೂಡ ಅವರು ವಿಶ್ರಮಿಸಿಲ್ಲ. ಕೊವಿಡ್ ಕಾಲದಲ್ಲಿ ದಿನಕ್ಕೆ ಐದಾರು ಮೀಟಿಂಗ್ ಮಾಡಿದ್ದಾರೆ. ಇಂಥ ನಾಯಕರ ಬಗ್ಗೆ ಹಗುರವಾಗಿ ಮಾತನಾಡೋದು ಅವರ ಮನಸ್ಸಿಗೆ ನೋವು ತಂದಿರಬಹುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ವಿವಿಯಿಂದ ಕೊವಿಡ್ ರ‍್ಯಾಪಿಡ್ ಡಿಟೆಕ್ಷನ್ ಕಿಟ್ ವಿನ್ಯಾಸ; ಲಸಿಕೆ ಅಭಿವೃದ್ಧಿಪಡಿಸಲು ಅನುದಾನದ ಕೊರತೆ
ಕೊರೊನಾ ಸೋಂಕಿತರಿಗೆ ಕೊಪ್ಪಳ ಗಂಗಾವತಿ ಆಸ್ಪತ್ರೆಯಲ್ಲಿ ಹೇರ್ಕಟ್; ಕ್ಷೌರಿಕನಿಗೆ ವೈದ್ಯರಿಂದ ಸನ್ಮಾನ
Published On - 5:20 pm, Mon, 7 June 21