
ಬೆಂಗಳೂರು, ನವೆಂಬರ್ 14: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ನಿಧಾನವಾಗಿ ಕುಸಿಯುತ್ತಿದೆ. ಅದರಲ್ಲೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿರುವುದು ಆತಂಕ ಮೂಡಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17.46 ಟಿಎಂಸಿ ನೀರಿನ ಸಂಗ್ರಹವಿದ್ದ ಕಬಿನಿಯಲ್ಲಿ ಈ ಬಾರಿ ಕೇವಲ 12.14 ಟಿಎಂಸಿ ನೀರು ಮಾತ್ರ ಇದೆ. ಒಳಹರಿವು ಕೂಡ ಕಡಿಮೆಯಾಗಿದ್ದು, ಜಲಾಶಯಕ್ಕೆ ಇಂದು ಕೇವಲ 254 ಕ್ಯುಸೆಕ್ ನೀರು ಹರಿದುಬರುತ್ತಿದೆ. ಬೆಂಗಳೂರಿಗೂ ಕುಡಿಯುವ ನೀರು ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸ್ಥಿತಿ ಇದೀಗ ಗಮನ ಸೆಳೆಯುತ್ತಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 70.93 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಯಾಗಿದ್ದು, ಪ್ರಸ್ತುತ 12.14 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಜೀವಂತ ನೀರಿನ ಸಂಗ್ರಹ ಕೇವಲ 2.33 ಟಿಎಂಸಿಯಷ್ಟಿದೆ. ಜಲಾಶಯಕ್ಕೆ 254 ಕ್ಯುಸೆಕ್ ಒಳಹರಿವಿದ್ದು, ಕಬಿನಿ ನದಿಗೆ 600 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಬಲದಂಡೆ ನಾಲೆಗೆ 750 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಒಟ್ಟು ಹೊರಹರಿವು 1,350 ಕ್ಯುಸೆಕ್ ಇದೆ. ಎಡದಂಡೆ ನಾಲೆಗೆ ನೀರು ಬಿಡುಗಡೆ ಮಾಡುತ್ತಿಲ್ಲ. ಜಲಾಶಯ ವ್ಯಾಪ್ತಿಯಲ್ಲಿ ಇಂದು ಮಳೆಯಾಗಿಲ್ಲ.
ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 97.96 ಅಡಿಯಷ್ಟಿದೆ. ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ. ಸದ್ಯ ಜಲಾಶಯದಲ್ಲಿ 21.252 ಟಿಎಂಸಿ ನೀರಿದೆ. ಜೀವಂತ ನೀರಿನ ಸಂಗ್ರಹ 12.873 ಟಿಎಂಸಿಯಷ್ಟಿದೆ. ಒಳಹರಿವು 892 ಕ್ಯುಸೆಕ್ ಇದ್ದರೆ, ಕಾಲುವೆ ಮತ್ತು ಕುಡಿಯುವ ನೀರು ಸೇರಿದಂತೆ ಒಟ್ಟು 1,295 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಮತ್ತು ಕೆಆರ್ಎಸ್ ಎರಡೂ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಲಭ್ಯತೆ ಅವಲಂಬಿತವಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ 1,606.219 ಅಡಿಯಷ್ಟಿದೆ. ಗರಿಷ್ಠ ಮಟ್ಟ 1,633 ಅಡಿಗಳಾಗಿದ್ದು, ಪ್ರಸ್ತುತ 30.706 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಆದರೆ ಕಾಲುವೆಗಳ ಮೂಲಕ 8,619 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಒಳಹರಿವು ಇಲ್ಲದಿದ್ದರೂ ಹೊರಹರಿವು ಮುಂದುವರಿದಿರುವುದು ನೀರಿನ ಸಂಗ್ರಹದ ಮೇಲೆ ಒತ್ತಡ ಹೆಚ್ಚಿಸಿದೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 513.87 ಮೀಟರ್ ಇದೆ. ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, 1,317 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಇನ್ನು ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಆಗಿದ್ದು, ಪ್ರಸ್ತುತ 489.19 ಮೀಟರ್ ನೀರಿನ ಮಟ್ಟವಿದೆ. ಒಳಹರಿವು 51 ಕ್ಯುಸೆಕ್ ಇದ್ದರೆ, ಹೊರಹರಿವು 843 ಕ್ಯುಸೆಕ್ ಇದೆ.
ಒಟ್ಟಿನಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳ ನೀರಿನ ಸಂಗ್ರಹದ ಇಳಿಕೆ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ