ಹಿರಿಯ ಡಿಡಿಪಿಐ ಹುದ್ದೆಗಳು ಖಾಲಿ-ಖಾಲಿ: ಶಿಕ್ಷಣ ಇಲಾಖೆಯ ಆಡಳಿತಕ್ಕೆ ಭಾರಿ ಹಿನ್ನಡೆ, ಶಿಕ್ಷಣದ ಮೇಲೂ ಪರಿಣಾಮದ ಆತಂಕ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿರಿಯ ಡಿಡಿಪಿಐಗಳ ಹುದ್ದೆಗಳು ಖಾಲಿ ಇರುವ ಬಗ್ಗೆ ವರದಿಯಾಗಿದ್ದು, ಇದು ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಸವಾಲುಗಳನ್ನು ಮುನ್ನೆಲೆಗೆ ತಂದಿದೆ. ಶಿಕ್ಷಕರ ನೇಮಕಾತಿ, ಶಿಸ್ತು ಕ್ರಮ, ಖಾಸಗಿ ಶಾಲೆಗಳ ಮಾನ್ಯತೆ, ಅನುದಾನದ ಬಳಕೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಜವಾಬ್ದಾರಿಯನ್ನು ನಿಭಾಯಿಸುವ ಈ ಹುದ್ದೆಗಳಲ್ಲಿ ಕಾಯಂ ಅಧಿಕಾರಿಗಳಿಲ್ಲದಿದ್ದರೆ ಏನೆಲ್ಲ ಸಮಸ್ಯೆಗಳಾಗಬಹುದು? ಇದು ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರಬಹುದು? ಇಲ್ಲಿದೆ ಸಮಗ್ರ ಮಾಹಿತಿ.

ಹಿರಿಯ ಡಿಡಿಪಿಐ ಹುದ್ದೆಗಳು ಖಾಲಿ-ಖಾಲಿ: ಶಿಕ್ಷಣ ಇಲಾಖೆಯ ಆಡಳಿತಕ್ಕೆ ಭಾರಿ ಹಿನ್ನಡೆ, ಶಿಕ್ಷಣದ ಮೇಲೂ ಪರಿಣಾಮದ ಆತಂಕ

Updated on: Nov 19, 2026 | 12:05 PM

ಮುಖ್ಯಾಂಶಗಳು

  • ಬಹುತೇಕ ಜಿಲ್ಲೆಗಳಲ್ಲಿ ಹಿರಿಯ ಡಿಡಿಪಿಐ ಹುದ್ದೆಗಳು ಖಾಲಿ
  • ಶಿಕ್ಷಕರ ನೇಮಕಾತಿ, ಶಿಸ್ತು ಕ್ರಮಗಳಿಗೂ ಆಡಳಿತಾತ್ಮಕ ತೊಡಕು
  • ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೂ ಹಿನ್ನಡೆಯ ಆತಂಕ

ಬೆಂಗಳೂರು, ನವೆಂಬರ್ 19: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಿರಿಯ ಶ್ರೇಣಿಯ ಉಪನಿರ್ದೇಶಕರ (ಡಿಡಿಪಿಐ-ಆಡಳಿತ) ಹುದ್ದೆಗಳು ಖಾಲಿ ಇರುವುದರಿಂದ ಜಿಲ್ಲಾ ಮಟ್ಟದ ಶೈಕ್ಷಣಿಕ ಆಡಳಿತದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿರಿಯ ಡಿಡಿಪಿಐಗಳೇ ಇಲ್ಲ ಎಂದು ವರದಿಯಾಗಿರುವ ಬೆನ್ನಲ್ಲೇ, ಇದರ ಪರಿಣಾಮಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಇದು ಕೇವಲ ಅಧಿಕಾರಿಗಳ ಹುದ್ದೆ ಖಾಲಿ ಇರುವ ಆಡಳಿತಾತ್ಮಕ ಸಮಸ್ಯೆಯಲ್ಲ; ಶಿಕ್ಷಕರ ನೇಮಕಾತಿ, ಶಿಸ್ತು ಕ್ರಮ, ಖಾಸಗಿ ಶಾಲೆಗಳ ಮಾನ್ಯತೆ, ಅನುದಾನದ ಬಳಕೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಂತಹ ಪ್ರಮುಖ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದಾದ ವಿಚಾರವಾಗಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಡಿಡಿಪಿಐ ಹುದ್ದೆಯ ಮಹತ್ವ ಏನು?

ಜಿಲ್ಲಾ ಮಟ್ಟದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ನಿಭಾಯಿಸುವ ಪ್ರಮುಖ ಹುದ್ದೆಯೇ ಉಪನಿರ್ದೇಶಕರು (ಆಡಳಿತ). ಈ ಹುದ್ದೆಯಲ್ಲಿ ಕಾಯಂ ಅಧಿಕಾರಿ ಇಲ್ಲದೆ ಪ್ರಭಾರ ಅಧಿಕಾರಿಗಳ ಮೂಲಕ ಕಾರ್ಯನಿರ್ವಹಿಸಿದರೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ನಿಧಾನವಾಗುವ ಜೊತೆಗೆ ಕೆಲವು ಪ್ರಮುಖ ಆಡಳಿತಾತ್ಮಕ ಕ್ರಮಗಳಲ್ಲೂ ತೊಡಕು ಉಂಟಾಗುವ ಸಾಧ್ಯತೆಯಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

Loading...

ಡಿಡಿಪಿಐ ಹುದ್ದೆ ಖಾಲಿ ಇದ್ದರೆ ಏನೇನು ಸಮಸ್ಯೆಗಳಾಗುತ್ತವೆ?

ಶಿಕ್ಷಕರ ನೇಮಕಾತಿ, ಶಿಸ್ತು ಕ್ರಮಗಳಿಗೂ ಡಿಡಿಪಿಐ ಸಹಿ ಮುಖ್ಯ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಉಪನಿರ್ದೇಶಕರು (ಆಡಳಿತ) ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ. ನೇಮಕಾತಿ ಆದೇಶಗಳಿಗೆ ಅವರ ಸಹಿ ಅತ್ಯಗತ್ಯ. ಹೀಗಾಗಿ ಈ ಹುದ್ದೆ ಖಾಲಿಯಾಗಿದ್ದರೆ ಅಥವಾ ಪ್ರಭಾರ ಅಧಿಕಾರಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ, ನೇಮಕಾತಿ ಪ್ರಕ್ರಿಯೆ ಹಾಗೂ ಆದೇಶಗಳ ಕಾನೂನುಬದ್ಧತೆಯ ವಿಚಾರದಲ್ಲಿ ತೊಡಕುಗಳು ಎದುರಾಗುವ ಸಾಧ್ಯತೆಯಿದೆ.

ಶಿಕ್ಷಕರ ವಿರುದ್ಧದ ಶಿಸ್ತು ಕ್ರಮಗಳಿಗೂ ಅಡ್ಡಿ

ಇದೇ ರೀತಿ ಶಿಕ್ಷಕರ ವಿರುದ್ಧದ ಶಿಸ್ತು ಕ್ರಮಗಳಲ್ಲೂ ಡಿಡಿಪಿಐ ಪ್ರಮುಖ ಅಧಿಕಾರಿಯಾಗಿರುತ್ತಾರೆ. ಇಲಾಖಾ ವಿಚಾರಣೆಗಳನ್ನು ಅಂತಿಮಗೊಳಿಸುವ ಅಧಿಕಾರ ಇವರಿಗಿರುತ್ತದೆ. ಆದರೆ ಪ್ರಭಾರ ಉಪನಿರ್ದೇಶಕರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮತಿ ಇಲ್ಲದೆ ಶಿಸ್ತು ಕ್ರಮ ಕೈಗೊಳ್ಳುವುದು ಅಥವಾ ವಿಚಾರಣೆಯನ್ನು ಅಂತಿಮಗೊಳಿಸುವುದು ಸಾಧ್ಯವಿಲ್ಲ ಎಂಬುದು ಇಲಾಖೆಯ ಮೂಲಗಳು ನೀಡಿರುವ ಮಾಹಿತಿ. ಇದರಿಂದ ಶಿಕ್ಷಕರ ವಿರುದ್ಧದ ವಿಚಾರಣೆಗಳು ವಿಳಂಬವಾಗುವ ಸಾಧ್ಯತೆ ಇದೆ.

ಖಾಸಗಿ ಶಾಲೆಗಳ ಅನುಮತಿ, ಮಾನ್ಯತೆ ನವೀಕರಣಕ್ಕೂ ತೊಂದರೆ

ಖಾಸಗಿ ಅನುದಾನರಹಿತ ಶಾಲೆಗಳ ಆರಂಭಕ್ಕೆ ಅನುಮತಿ ನೀಡುವುದು, ಖಾಸಗಿ ಅನುದಾನರಹಿತ ಹಾಗೂ ಅನುದಾನಿತ ಶಾಲೆಗಳ ಮಾನ್ಯತೆಯನ್ನು ನವೀಕರಿಸುವುದು ಕೂಡ ಡಿಡಿಪಿಐ (ಆಡಳಿತ) ಅವರ ಜವಾಬ್ದಾರಿಯಾಗಿದೆ. ಇತರೆ ಪಠ್ಯಕ್ರಮಗಳ ಸಂಯೋಜನೆ ಪಡೆಯಲು ಖಾಸಗಿ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವ ಅಧಿಕಾರವೂ ಇವರಿಗಿದೆ.

ಶಾಲೆಗಳ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ

ಈ ಹುದ್ದೆಯಲ್ಲಿ ಕಾಯಂ ಅಧಿಕಾರಿ ಇಲ್ಲದಿದ್ದರೆ ಹೊಸ ಶಾಲೆಗಳ ಅನುಮತಿ, ಮಾನ್ಯತೆ ನವೀಕರಣ ಹಾಗೂ ಪಠ್ಯಕ್ರಮದ ಸಂಯೋಜನೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ ವಿಳಂಬವಾಗಬಹುದು. ಇದರಿಂದ ಶಾಲೆಗಳ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಅನುದಾನದ ಬಳಕೆ, ಟೆಂಡರ್ ಪ್ರಕ್ರಿಯೆಯಲ್ಲೂ ತೊಡಕು

ಜಿಲ್ಲಾ ಹಂತಕ್ಕೆ ಬಿಡುಗಡೆಯಾಗುವ ಅನುದಾನಗಳನ್ನು ಖರ್ಚು ಮಾಡುವ ಪ್ರಕ್ರಿಯೆಯಲ್ಲಿ ಟೆಂಡರ್ ಕರೆಯುವ ಅಧಿಕಾರವೂ ಉಪನಿರ್ದೇಶಕರು (ಆಡಳಿತ) ಅವರಿಗೆ ಇರುತ್ತದೆ. ಹೀಗಾಗಿ ಈ ಹುದ್ದೆ ಖಾಲಿಯಾಗಿದ್ದರೆ ಅಥವಾ ಪ್ರಭಾರ ಅಧಿಕಾರಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ, ಅನುದಾನ ಬಳಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳು ವಿಳಂಬವಾಗುವ ಸಾಧ್ಯತೆಯಿದೆ.

ಇದಲ್ಲದೆ, ಪ್ರಭಾರ ಅಧಿಕಾರಿಗಳ ಅವಧಿಯಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾದರೆ ಉತ್ತರದಾಯಿತ್ವದ ವಿಚಾರವೂ ಗೊಂದಲಕ್ಕೆ ಕಾರಣವಾಗಬಹುದು ಎಂಬ ಆತಂಕವಿದೆ. ಹೀಗಾಗಿ ಆಡಳಿತಾತ್ಮಕ ನಿರ್ಧಾರಗಳ ಜವಾಬ್ದಾರಿ ಮತ್ತು ಅವುಗಳ ಅನುಷ್ಠಾನದಲ್ಲಿ ಸ್ಪಷ್ಟತೆ ಅಗತ್ಯವಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಜವಾಬ್ದಾರಿಯೂ ಡಿಡಿಪಿಐ ಹೆಗಲಿಗೆ

ಪ್ರತಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಿಯಾಯೋಜನೆ ರೂಪಿಸುವುದು ಡಿಡಿಪಿಐ (ಆಡಳಿತ) ಅವರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ತಮ್ಮ ಕಚೇರಿಯ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ರೂಪಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆ ಇವರಿಗಿರುತ್ತದೆ.

ಯಾವ ವಿಷಯಗಳಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ, ಯಾವ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು, ಶಿಕ್ಷಕರಿಗೆ ಯಾವ ರೀತಿಯ ಮಾರ್ಗದರ್ಶನ ಅಗತ್ಯ ಎಂಬುದರ ಕುರಿತು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಾಧಿಸುವುದು ಈ ವ್ಯವಸ್ಥೆಯ ಭಾಗವಾಗಿದೆ. ಆದರೆ ಜಿಲ್ಲೆಯಲ್ಲಿ ಕಾಯಂ ಡಿಡಿಪಿಐ ಇಲ್ಲದಿದ್ದರೆ, ಇಂತಹ ಕ್ರಿಯಾಯೋಜನೆಗಳ ರೂಪಣೆ, ಮೇಲ್ವಿಚಾರಣೆ ಮತ್ತು ಅನುಷ್ಠಾನದಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಸವಾಲಾಗಬಹುದು. ಇದರ ಪರಿಣಾಮ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಪ್ರಯತ್ನಗಳ ಮೇಲೂ ಬೀಳುವ ಆತಂಕವಿದೆ.

ಖಾಲಿ ಹುದ್ದೆ ಭರ್ತಿಗೆ ಏಕೆ ಆದ್ಯತೆ ನೀಡಬೇಕು?

ಉಪನಿರ್ದೇಶಕರು (ಆಡಳಿತ) ಕೇವಲ ಕಚೇರಿಯ ಆಡಳಿತ ನಿರ್ವಹಿಸುವ ಅಧಿಕಾರಿಗಳಲ್ಲ. ಶಿಕ್ಷಕರ ನೇಮಕಾತಿಯಿಂದ ಹಿಡಿದು ಶಿಸ್ತು ಕ್ರಮ, ಶಾಲೆಗಳ ಮಾನ್ಯತೆ, ಅನುದಾನದ ಬಳಕೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯವರೆಗೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಹೀಗಾಗಿ ಈ ಹುದ್ದೆಗಳಲ್ಲಿ ಕಾಯಂ ಅಧಿಕಾರಿಗಳ ನೇಮಕವಾಗದಿದ್ದರೆ, ಜಿಲ್ಲಾ ಮಟ್ಟದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ನಿಧಾನವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us