ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission – KRRC) ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದೆ. ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (₹1.35) ಬೆಲೆ ಏರಿಕೆ ಕೋರಿ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶ ಪರಿಶೀಲಿಸಿರುವ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಪರಿಷ್ಕೃತ ದರಗಳು ಏಪ್ರಿಲ್ 1, 2021ರ ನಂತರದ ಮೊದಲ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳ ದರ ಪರಿಷ್ಕರಣೆಯ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಸೂಲಿ ಮಾಡಲು ಆದೇಶ ನೀಡಲಾಗಿದೆ.
ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆ, ಸ್ಥಳೀಯ ನಗರಸಂಸ್ಥೆಗಳ ಚುನಾವಣೆ ಘೋಷಣೆ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ದರ ಪರಿಷ್ಕರಣೆ ಆದೇಶ ಹೊರಡಿಸುವುದು ವಿಳಂಬವಾಯಿತು. ಕೊವಿಡ್ ಸೋಂಕು ತಡೆಯಲು ಲಾಕ್ಡೌನ್ ನಿರ್ಬಂಧ ಹೇರಿದ ಕಾರಣ ಆಯೋಗದ ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೊಂದರೆಯಾಯಿತು ಎಂದು ಆಯೋಗ ಕಾರಣ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ಗೆ 83ರಿಂದ 168 ಪೈಸೆಗಳಷ್ಟು ಹೆಚ್ಚಳ ಕೋರಿದ್ದವು. ಪ್ರಸ್ತಾವನೆಗಳನ್ನು ಪರಿಶೀಲಿಸಿದ ಆಯೋಗವು ಶೇ 3.84ರ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದರಂತೆ ಏಕರೂಪದಲ್ಲಿ 30 ಪೈಸೆಗಳಷ್ಟು ದರ ಹೆಚ್ಚಳವಾಗಲಿದೆ.
ಇದರ ಜೊತೆಗೆ ಎಚ್ಟಿ ಕೈಗಾರಿಕೆಗಳಲ್ಲಿ ಬೆಳಿಗ್ಗೆ 6ರಿಂದ 10ರ ಪೀಕ್ ಅವಧಿಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ ವಿಧಿಸುತ್ತಿದ್ದ ₹ 1ರ ದಂಡವನ್ನು ಹಿಂಪಡೆಯಲಾಗಿದೆ. ಎಲ್ಟಿ ಮಂಜೂರಾತಿ ಮಿತಿಯನ್ನು 150 ಕಿಲೋವ್ಯಾಟ್ಗೆ ಹೆಚ್ಚಿಸಲಾಗಿದೆ. ಗೃಹಬಳಕೆ ವಿಭಾಗದಲ್ಲಿ ಮೊದಲ ಹಂತವನ್ನು (First Slab) 30 ಯೂನಿಟ್ಗಳಿಂದ 50 ಯೂನಿಟ್ಗಳಿಗೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಬೀದಿದೀಪಗಳಲ್ಲಿ ಎಲ್ಇಡಿ ಬಲ್ಬ್ ಬಳಕೆಗೆ ಪ್ರತಿ ಯೂನಿಟ್ಗೆ ₹1.05 ರಿಯಾಯ್ತಿ ಮುಂದುವರಿಸಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ.
(Karnataka Electricity Price Hike KERC Approves Customers have to pay from October)
ಇದನ್ನೂ ಓದಿ: Save Electricity: ವಿದ್ಯುತ್ ಖರ್ಚು ಮಾಡದೇ ಎಸಿ ಬಳಸಿ; ತಿಂಗಳಿಗೆ ಸುಮಾರು 4,000 ರೂಪಾಯಿ ಉಳಿಸಿ
ಇದನ್ನೂ ಓದಿ: ಕಾಂಗ್ರೆಸ್ ಲಸಿಕೆ ಪ್ರಸ್ತಾವನೆ ತಿರಸ್ಕರಿಸಿದ ರಾಜ್ಯ ಸರ್ಕಾರ; ಸಿದ್ದರಾಮಯ್ಯಗೆ ಪತ್ರ ಬರೆದು ಸೂಚನೆ
Published On - 5:38 pm, Wed, 9 June 21