Save Electricity: ವಿದ್ಯುತ್​ ಖರ್ಚು ಮಾಡದೇ ಎಸಿ ಬಳಸಿ; ತಿಂಗಳಿಗೆ ಸುಮಾರು 4,000 ರೂಪಾಯಿ ಉಳಿಸಿ

Solar AC: ಎಸಿ ಒಂದರಿಂದಲೇ ಪ್ರತಿ ತಿಂಗಳು ₹4,000ದಿಂದ ₹4,200ರ ತನಕ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಒಮ್ಮೆ ಅಳವಡಿಸಿಕೊಂಡ ನಂತರ ಸಹಜವಾಗಿ ಬಳಕೆಯೂ ಹೆಚ್ಚುವುದರಿಂದ ಆಮೇಲೆ ಎಷ್ಟೇ ನಿಯಂತ್ರಿಸುತ್ತೇವೆಂದರೂ ಖರ್ಚು ಕಡಿಮೆಯಾಗದು. ಆದರೆ, ಇದಕ್ಕೆ ಅತ್ಯುತ್ತಮ ಪರ್ಯಾಯ ವ್ಯವಸ್ಥೆಯೊಂದಿದ್ದು, ಒಮ್ಮೆ ಎಸಿ ಅಳವಡಿಸಿಕೊಳ್ಳಲು ಹಣ ವ್ಯಯಿಸಿದರೆ ಮತ್ತೆ ಖರ್ಚಿಲ್ಲದೆ ಅದನ್ನು ಬಳಸಬಹುದಾಗಿದೆ.

Save Electricity: ವಿದ್ಯುತ್​ ಖರ್ಚು ಮಾಡದೇ ಎಸಿ ಬಳಸಿ; ತಿಂಗಳಿಗೆ ಸುಮಾರು 4,000 ರೂಪಾಯಿ ಉಳಿಸಿ
ಸೋಲಾರ್ ಎಸಿ (ಪ್ರಾತಿನಿಧಿಕ ಚಿತ್ರ)
Follow us
|

Updated on:May 19, 2021 | 3:33 PM

ಮನುಷ್ಯ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತಾ ಹೋದಂತೆ ಖರ್ಚು ವೆಚ್ಚಗಳು ತನ್ನಿಂತಾನೆ ಹೆಚ್ಚುತ್ತಾ ಹೋಗಿವೆ. ನಮ್ಮ ಆರ್ಥಿಕ ಪರಿಸ್ಥಿತಿ ಒಂದೊಮ್ಮೆ ಏರುಪೇರಾದರೂ ಅವಶ್ಯಕತೆಗಳೊಂದಿಗೆ ರಾಜಿಯಾಗುವುದು ಕಷ್ಟವಾಗಿಬಿಡುತ್ತದೆ. ಕೊರೊನಾ ಬಂದಮೇಲೆ ಬಹುತೇಕರಿಗೆ Work From Home ಇರುವುದರಿಂದ ಅನಿವಾರ್ಯವಾಗಿ ಮನೆಯಲ್ಲಿಯೂ ಅಧಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿ ಬಂದಿದೆ. ಹೀಗಾಗಿ ಹೆಚ್ಚಿನವರ ಮನೆಗಳಲ್ಲಿ ಈಗ ಆರಾಮಾಗಿ ಕೂರಲು ಕುರ್ಚಿ, ಟೇಬಲ್, ಎಸಿ ಪ್ರತಿಷ್ಠಾಪನೆಯಾಗಿವೆ. ಆದರೆ, ಹೀಗೆ ಮಾಡುತ್ತಾ ಹೋದಂತೆ ಜೇಬಿಗೆ ಕತ್ತರಿ ಬೀಳುವುದು ಕೂಡಾ ಹೆಚ್ಚುತ್ತದೆ. ಉದಾಹರಣೆಗೆ ಎಸಿ ಒಂದರಿಂದಲೇ ಪ್ರತಿ ತಿಂಗಳು ₹4,000ದಿಂದ ₹4,200ರ ತನಕ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಒಮ್ಮೆ ಅಳವಡಿಸಿಕೊಂಡ ನಂತರ ಸಹಜವಾಗಿ ಬಳಕೆಯೂ ಹೆಚ್ಚುವುದರಿಂದ ಆಮೇಲೆ ಎಷ್ಟೇ ನಿಯಂತ್ರಿಸುತ್ತೇವೆಂದರೂ ಖರ್ಚು ಕಡಿಮೆಯಾಗದು. ಆದರೆ, ಇದಕ್ಕೆ ಅತ್ಯುತ್ತಮ ಪರ್ಯಾಯ ವ್ಯವಸ್ಥೆಯೊಂದಿದ್ದು, ಒಮ್ಮೆ ಎಸಿ ಅಳವಡಿಸಿಕೊಳ್ಳಲು ಹಣ ವ್ಯಯಿಸಿದರೆ ಮತ್ತೆ ಖರ್ಚಿಲ್ಲದೆ ಅದನ್ನು ಬಳಸಬಹುದಾಗಿದೆ.

ಇದು ಅಚ್ಚರಿ ಎನಿಸಿದರೂ ಸತ್ಯ. ಏಕೆಂದರೆ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಬೇಡುವ ವಿದ್ಯುತ್ ಎಸಿಗಳಿಗೆ ಪರ್ಯಾಯವಾಗಿ ಸೌರಶಕ್ತಿಯಿಂದ ಚಲಿಸುವ ಎಸಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ಸೋಲಾರ್ ಎಸಿಗಳು ಸೂರ್ಯನ ಶಾಖದಿಂದ ಉತ್ಪಾದನೆಯಾಗುವ ವಿದ್ಯುತ್ ಸಹಾಯದಿಂದ ಕೆಲಸ ಮಾಡುವುದರಿಂದ ನಿಮಗೆ ವಿದ್ಯುತ್ ಬಿಲ್ ಕಟ್ಟಬೇಕಾದ ತಾಪತ್ರಯವೇ ಇರುವುದಿಲ್ಲ. ಅಳವಡಿಸುವ ವಿಚಾರಕ್ಕೆ ಬಂದಾಗ ಇವು ಜೇಬಿಗೆ ತುಸು ಭಾರ ಎನ್ನಿಸಿದರೂ ಒಮ್ಮೆ ಹಣ ಹೂಡಿದರೆ ಮತ್ತೆ ಖರ್ಚು ಮಾಡುವ ಪ್ರಮೇಯವೇ ಬಾರದ ಕಾರಣ ವಿದ್ಯುತ್ ಬಿಲ್ ಕಟ್ಟಲು ಮಂಡೆಬಿಸಿ ಮಾಡಿಕೊಳ್ಳದೇ ತಂಪು ಗಾಳಿಯಲ್ಲಿ ನಿಶ್ಚಿಂತೆಯಿಂದ ಕೆಲಸ ಮಾಡಬಹುದು.

ತಿಂಗಳಿಗೆ ಸಾವಿರಾರು ರೂಪಾಯಿ ಉಳಿತಾಯ ಮಾಡಿ ವಿದ್ಯುತ್ ಚಾಲಿತ ಎಸಿಯನ್ನು ಎಷ್ಟೇ ನಿಯಂತ್ರಿತವಾಗಿ ಬಳಸಿದರೂ ದಿನಕ್ಕೆ 20 ಯುನಿಟ್​ಗಿಂತಲೂ ಹೆಚ್ಚು ವಿದ್ಯುತ್ ಅದರ ಹೊಟ್ಟೆ ತುಂಬಿಸಲು ಬೇಕಾಗುತ್ತದೆ. ಅಂದರೆ ತಿಂಗಳಿಗೆ ₹4,000 ದಿಂದ ₹4,200ರತನಕ ಕೇವಲ ಎಸಿಯನ್ನು ಸಾಕುವುದಕ್ಕೇ ಖರ್ಚಾಗುತ್ತದೆ. ಆದ್ದರಿಂದ ಇದರ ಬದಲು ಮಾರುಕಟ್ಟೆಯಲ್ಲಿ ಲಭ್ಯವಿರುವ 1 ಟನ್, 1.5 ಟನ್ ಅಥವಾ 2 ಟನ್ ಸಾಮರ್ಥ್ಯದ ಸೋಲಾರ್ ಎಸಿಯನ್ನು ಕೊಂಡುಕೊಂಡರೆ ಅದು ನಿಮ್ಮನ್ನು ಸೆಖೆಯಿಂದ ಪಾರು ಮಾಡುವುದರ ಜೊತೆಗೆ ತಿಂಗಳ ಸಂಬಳವನ್ನೂ ಕಾಪಾಡಿಕೊಳ್ಳಲು ಸಹಕರಿಸುತ್ತದೆ.

ಸೋಲಾರ್ ಎಸಿಗೆ ಎಷ್ಟು ಖರ್ಚಾಗುತ್ತದೆ? ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಸೋಲಾರ್ ಎಸಿ ಲಭ್ಯವಿದೆ. ಬೆಲೆಯ ವಿಚಾರಕ್ಕೆ ಬಂದಾಗ ಬಹುತೇಕ ಎಲ್ಲಾ ಕಂಪೆನಿಗಳೂ ಒಂದೇ ಬೆಲೆಯನ್ನು ನಿಗದಿ ಮಾಡಿದ್ದು, ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಹೆಚ್ಚೂಕಡಿಮೆ ವಿದ್ಯುತ್ ಎಸಿಯಂತೆಯೇ ಇರುವ ಸೋಲಾರ್ ಎಸಿ ಹೆಚ್ಚುವರಿಯಾಗಿ ಸೋಲಾರ್ ಪ್ಲೇಟ್ ಮತ್ತು ಅದಕ್ಕೆ ಬೇಕಾದ ಬ್ಯಾಟರಿಯನ್ನು ಹೊಂದಿರುತ್ತದೆ. ಹಣಕಾಸಿನ ವಿಚಾರಕ್ಕೆ ಬಂದಾಗ 1,500 ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲೇಟ್ ಹೊಂದಿರುವ 1 ಟನ್ ಸೋಲಾರ್ ಎಸಿಗೆ ₹97 ಸಾವಿರ ತಗುಲುತ್ತದೆ. ಅಂತೆಯೇ 1.5ಟನ್ ಸಾಮರ್ಥ್ಯದ ಎಸಿಗೆ ₹1.39ಲಕ್ಷ ಹಾಗೂ 2 ಟನ್ ಎಸಿಗೆ ₹1.79 ಲಕ್ಷ ಖರ್ಚಾಗಲಿದೆ. ಮೇಲ್ನೋಟಕ್ಕೆ ಇದು ದುಬಾರಿ ಎನ್ನಿಸುವುದು ಸತ್ಯವಾದರೂ ಒಮ್ಮೆ ಖರ್ಚು ಮಾಡಿದರೆ ಮತ್ತೆ ವಿದ್ಯುತ್ ಬಿಲ್​ನಲ್ಲಿ ಸಾವಿರಗಟ್ಟಲೆ ಉಳಿಸಬಹುದಾದ ಕಾರಣ ಒಂದೆರೆಡು ವರ್ಷದಲ್ಲಿ ಖರ್ಚು ಸರಿಹೊಂದಲಿದೆ.

ವಿ.ಸೂ: ಹೆಚ್ಚು ಸಾಮರ್ಥ್ಯದ ಎಸಿಗೆ ಹೆಚ್ಚು ವ್ಯಾಟ್​ನ ಸೋಲಾರ್ ಪ್ಲೇಟ್ ಬೇಕಾಗುವ ಕಾರಣ ಅದಕ್ಕೆ ತಕ್ಕಂತೆ ಖರ್ಚು ಬೀಳಲಿದೆ ಎನ್ನುವುದನ್ನು ಗಮನಿಸಿಕೊಂಡರಾಯಿತು.

ತುರ್ತು ಸಮಯದಲ್ಲಿ ವಿದ್ಯುತ್ ಬಳಸಿಯೂ ಚಲಾಯಿಸಬಹುದು ಸೋಲಾರ್ ಪ್ಲೇಟ್​ನಿಂದ ಸೌರಶಕ್ತಿ ಹೀರಿಕೊಂಡು ನಂತರ ಬ್ಯಾಟರಿ ಚಾರ್ಜ್​ನಿಂದ ಕಾರ್ಯ ನಿರ್ವಹಿಸುವ ಎಸಿಯನ್ನು ತುರ್ತು ಸಂದರ್ಭದಲ್ಲಿ ವಿದ್ಯುತ್ ಸಹಾಯದಿಂದಲೂ ಬಳಸಬಹುದು. ಒಂದುವೇಳೆ ಮಳೆಯ ವಾತಾವರಣ ಇದ್ದು, ಮೋಡ ಕವಿದ ಪರಿಣಾಮ ಸೂರ್ಯನ ಶಾಖವೇ ಇಲ್ಲದಿದ್ದರೆ ಅಂತಹ ಅನಿವಾರ್ಯ ಸಂದರ್ಭದಲ್ಲಿ ವಿದ್ಯುತ್​ ಸಂಪರ್ಕ ನೀಡುವ ಮೂಲಕ ಎಸಿಯನ್ನು ಬಳಸಿಕೊಳ್ಳಬಹುದಾಗಿದೆ. ಒಂದುವೇಳೆ ನಿಮಗೆ ವಿದ್ಯುತ್ ಬಿಲ್ ಕಟ್ಟಿ ಸಾಕಾಗಿದ್ದರೆ ಮಾರುಕಟ್ಟೆಯಲ್ಲಿರುವ ವಿವಿಧ ಕಂಪೆನಿಗಳ ಸೋಲಾರ್ ಎಸಿ ಪೈಕಿ ಯಾವುದಾದರೊಂದನ್ನು ಆರಿಸಿ ಅಳವಡಿಸಿಕೊಳ್ಳಿ.

(Solar AC Can save your money upto Rs 4000 along with saving electricity)

ಇದನ್ನೂ ಓದಿ: How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ 

Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?

Published On - 3:31 pm, Wed, 19 May 21

ತಾಜಾ ಸುದ್ದಿ