
ಬೆಂಗಳೂರು, ಸೆಪ್ಟೆಂಬರ್ 15: ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ ಕರ್ನಾಟಕದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ದುರಂತಗಳು ಹಲವು ಕುಟುಂಬಗಳನ್ನು ಶೋಕದಲ್ಲಿ ಮುಳುಗಿಸಿವೆ. ರಾಜ್ಯದ ವಿವಿಧೆಡೆ ಒಂದೇ ದಿನದ ಅವಧಿಯಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಸಂಭವಿಸಿದ ಅಗ್ನಿ ದುರಂತ ಹಾಗೂ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಮಂಡ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಹಾಗೂ ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ತಲಾ ಒಬ್ಬರು ಇಹಲೋಕ ತ್ಯಜಿಸಿದ್ದಾರೆ.
ಗಣೇಶ ಚತುರ್ಥಿ ದಿನವೇ ಬೆಳಗಾವಿಯ ಚಾವ್ಹಾಣ್ ಗಲ್ಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಮನೆಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ. ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ ದುರಂತ ಸಂಭವಿಸಿದ್ದು, ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ ಮತ್ತಷ್ಟು ವ್ಯಾಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪ್ರಿಯಾ ಗಜಾನನ ದಮೋನೆ (28) ಮತ್ತು ಗಂಗಾ ಗಜಾನನ ದಮೋನೆ (25) ಎಂದು ತಿಳಿದುಬಂದಿದೆ.
ಮತ್ತಷ್ಟು ಓದಿ: ಬೆಳಗಾವಿ: ಗಣೇಶ ಚತುರ್ಥಿ ದಿನವೇ ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮೂವರು ಯುವಕರು ಮೃತಪಟ್ಟಿದ್ದಾರೆ. ಗಣೇಶ ಮೆರವಣಿಗೆ ವೀಕ್ಷಿಸಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸವದತ್ತಿಯಿಂದ ಧಾರವಾಡದತ್ತ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್, ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸವದತ್ತಿ ನಿವಾಸಿಗಳಾದ ವಿನೋದ್ ಹೊಗೆನ್ನವರ (22), ಆಕಾಶ್ ಜಾಧವ್ (20) ಹಾಗೂ ರವಿ ಕುರುಬರ (22) ಮೃತಪಟ್ಟಿದ್ದಾರೆ.
ಮತ್ತಷ್ಟು ಓದಿ: ಬೆಳಗಾವಿಯಲ್ಲಿ ಮತ್ತೊಂದು ದುರಂತ: ಸವದತ್ತಿ ಹೊರವಲಯದಲ್ಲಿ ಬಸ್ ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರ ಸಾವು
ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಬಳಿ ಹಾಲಿನ ಟ್ಯಾಂಕರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಗಣೇಶ ಹಬ್ಬದ ದಿನವೇ ಸಂಭವಿಸಿದ ಈ ದುರ್ಘಟನೆಯಲ್ಲಿ ಸ್ಕೂಟರ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೊಪ್ಪ ಗ್ರಾಮದ ನಿವಾಸಿಗಳಾದ ಕಾವ್ಯಾ, ಮುತ್ತುರಾಜ್ ಮತ್ತು ಕೀರ್ತನಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.
ಮತ್ತಷ್ಟು ಓದಿ: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಒಂದೇ ಊರಿನ ಮೂವರು ದಾರುಣ ಸಾವು
ಕಲಬುರಗಿ ನಗರದ ಹೀರಾಪುರ ರಸ್ತೆಯ ಫ್ಲೈಓವರ್‌ನಲ್ಲಿ ಗಣೇಶ ಮೂರ್ತಿ ತರಲು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೊಟನೂರು ಬಡಾವಣೆಯ ಪ್ರಶಾಂತ್ ಬಿರಾದರ್ (23) ಮೃತಪಟ್ಟಿದ್ದಾರೆ. ಬೈಕ್ ಟಚ್ ಆಗಿದ್ದರಿಂದ ರಸ್ತೆಗೆ ಬಿದ್ದು ಇಬ್ಬರ ತಲೆಗೆ ಗಂಭೀರ ಗಾಯಗಳಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಶಾಂತ್ ಬಿರಾದರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳುವಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್ ದಾಟಿದ ಹೋಂಡಾ ಸಿಟಿ ಕಾರು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ಶಿಡ್ಲಘಟ್ಟ ಮೂಲದ ವೆಂಕಟೇಶಪ್ಪ (75) ಮೃತಪಟ್ಟಿದ್ದಾರೆ. ಮುನಿ ಅಕ್ಕಯ್ಯಮ್ಮ, ಮಾಲಾ ಹಾಗೂ ಪವನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ