ಬೆಳಗಾವಿ: ಗಣೇಶ ಚತುರ್ಥಿ ದಿನವೇ ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಬೆಳಗಾವಿಯ ಚಾವ್ಹಾಣ್ ಗಲ್ಲಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಶುಭದಿನವೇ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ, ಸೆಪ್ಟೆಂಬರ್ 15: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಚಾವ್ಹಾಣ್ ಗಲ್ಲಿಯಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪ್ರಿಯಾ ಗಜಾನನ ದಮೋನೆ (28) ಮತ್ತು ಗಂಗಾ ಗಜಾನನ ದಮೋನೆ (25) ಎಂದು ತಿಳಿದುಬಂದಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಈ ದಾರುಣ ಘಟನೆ ನಡೆದಿದೆ. ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಫ್ರಿಡ್ಜ್ ಬ್ಲಾಸ್ಟ್‌ನಿಂದಲೇ ಸಂಭವಿಸಿತಾ ದುರಂತ?
ಪ್ರಾಥಮಿಕ ವರದಿಗಳ ಪ್ರಕಾರ, ಮನೆಯೊಳಗಿನ ಅಡುಗೆಮನೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ ಮಾದರಿಯ ಮನೆಗೆ ವ್ಯಾಪಿಸಿದ್ದು, ಮನೆಯೊಳಗಿದ್ದ ಪ್ರತಿಯೊಂದು ವಸ್ತುವೂ ಸುಟ್ಟು ಕರಕಲಾಗಿದೆ. ಗಣೇಶ ಚತುರ್ಥಿಯ ನಿಮಿತ್ತ ಮನೆಯಲ್ಲಿ ಗಣಪತಿ ಮಂಟಪವನ್ನು ಸಹ ಸ್ಥಾಪಿಸಲಾಗಿತ್ತು. ಬೆಂಕಿ ಮಂಟಪಕ್ಕೂ ವ್ಯಾಪಿಸಿತ್ತು. ಫ್ರಿಡ್ಜ್ ಬ್ಲಾಸ್ಟ್ ಆಗಿ ಬೆಂಕಿ ಮತ್ತಷ್ಟು ವ್ಯಾಪಿಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಫ್ರಿಡ್ಜ್ ಮುಂಭಾಗದಲ್ಲೇ ಮಲಗಿದ್ದ ನಾಲ್ವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಕಿಯ ತೀವ್ರತೆಗೆ ಫ್ರಿಡ್ಜ್ ಸಂಪೂರ್ಣ ಸುಟ್ಟು ಡಬ್ಬಿಯಂತೆ ಕಾಣುತ್ತಿದೆ. ತಗಡಿನ ಶೆಡ್‌ನಿಂದ ನಿರ್ಮಿಸಿದ್ದ ಮನೆಯಲ್ಲಿ ಆರು ಮಂದಿ ಕುಟುಂಬಸ್ಥರು ವಾಸಿಸುತ್ತಿದ್ದರು. ಮನೆಯ ಪಕ್ಕದಲ್ಲಿದ್ದ ಗಣಪತಿ ಮಂಟಪಕ್ಕೂ ಅಲ್ಪ ಪ್ರಮಾಣದ ಹಾನಿಯಾಗಿದೆ. ದುರಂತದ ಬಳಿಕ ಪಕ್ಕದ ಮನೆಯವರು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆ ನಡೆದ ಮನೆಯಲ್ಲಿ ಸಿಲಿಂಡರ್‌ಗಳನ್ನೂ ಕೂಡ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಆದರೂ, ಮನೆಯೊಳಗೆ ಟಿಜೋರಿ, ಫ್ರಿಡ್ಜ್ ಸೇರಿದಂತೆ ಎಲ್ಲ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಫ್ರಿಡ್ಜ್ ಸಹ ಬ್ಲಾಸ್ಟ್ ಆಗಿದೆ ಎಂದು ವರದಿಯಾಗಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಭೀಕರ ದುರಂತವು ಗಣೇಶ ಹಬ್ಬದ ಸಂಭ್ರಮದ ನಡುವೆ ಕುಟುಂಬವೊಂದಕ್ಕೆ ಅಕ್ಷರಶಃ ದುರಂತವನ್ನು ತಂದೊಡ್ಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 am, Tue, 15 September 26




