ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರು: ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮತ್ತು ಸರ್ಕಾರಿ ವೈದ್ಯರು ಏಕಕಾಲದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 37,000 ಕೋಟಿ ರೂಪಾಯಿ ಬಿಲ್ ಪಾವತಿಗೆ ಗುತ್ತಿಗೆದಾರರು ಆಗ್ರಹಿಸಿದ್ದರೆ, ಔಷಧಗಳ ಸಮರ್ಪಕ ಪೂರೈಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ 11ರಿಂದ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಘೋಷಿಸಿದ್ದಾರೆ.

ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರು: ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್
ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರು
Image Credit source: tv9
Edited By:

Updated on: Feb 25, 2026 | 8:49 AM

ಬೆಂಗಳೂರು, ಫೆಬ್ರವರಿ 25: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಗುತ್ತಿಗೆದಾರರು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಏಕಕಾಲದಲ್ಲಿ ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 37,000 ಕೋಟಿ ರೂಪಾಯಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಲವು ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಬೇಡಿಕೆಗಳೇನು?

  1. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಸಮರ್ಪಕವಾಗಿ ಔಷಧಗಳ ಸರಬರಾಜು.
  2. ವೃಂದ ಮತ್ತ ನೇಮಕಾತಿ ನಿಯಮಗಳನ್ನ ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡುವುದು.
  3. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನ ಪ್ರಕಟಿಸುವುದು.
  4. ಕಳೆದ ಐದು ವರ್ಷಗಳಿಂದ ತಡೆ ಹಿಡಿಯಲಾದ ಮುಂಬಡ್ತಿಯನ್ನ ನೀಡುವುದು.
  5. ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಮಾಡುವುದು.
  6. ಕೇಂದ್ರ ಪುರಸ್ಕೃತ ಯೋಜನೆಯಡಿ 6 ಸಾವಿರ ನೌಕರರಿಗೆ ಪ್ರತಿತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆ ನೀಡುವುದು.
  7. ಖಾಲಿ ಇರುವ ವೈದ್ಯರು,ಅರೆ ವೈದ್ಯರ ಹುದ್ದೆಯನ್ನ ಕೂಡಲೇ ಭರ್ತಿ ಮಾಡುವುದು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ಮಾರ್ಚ್ 11ರಿಂದ ಮುಷ್ಕರ ಮಾಡುವುದಾಗಿ ಘೋಷಿಸಿದೆ. ಸರ್ಕಾರದ ಜೊತೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ವೈದ್ಯರ ಮುಷ್ಕರ

ಮುಷ್ಕರವನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಡಿಸ್ಪೆನ್ಸರಿಗಳಲ್ಲಿ ಕಪ್ಪು ಪಟ್ಟಿಧರಿಸಿ ಹೊರ ರೋಗಿ (ಓಪಿಡಿ) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಮುಂದುವರಿಯಲಿವೆ. ಎರಡನೇ ಹಂತವಾಗಿ ಮಾರ್ಚ್ 16ರಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ತುಂಬಾ ತಾಳ್ಮೆಯಿಂದ ಇದ್ದೇವೆ. ಹತ್ತಾರು ಸಭೆಗಳನ್ನು ನಡೆಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ವರ್ಷಗಳಿಂದ ಕಾದಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ ಸರ್ಕಾರ ಸ್ಪಂದಿಸದ ಕಾರಣ ಮುಷ್ಕರಕ್ಕೆ ಹೋಗುವುದು ಅನಿವಾರ್ಯವಾಗಿದೆ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ ರವೀಂದ್ರನಾಥ್ ಮೇಟಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗ್ತಿಲ್ಲ ಔಷಧಿ

ಕೌನ್ಸೆಲಿಂಗ್ ಸರಿಯಾಗಿ ಮಾಡಿಲ್ಲ, ಪರಸ್ಪರ ವರ್ಗಾವಣೆ ಆಗಿಲ್ಲ, ಅಂಗವಿಕಲರಿಗೆ ನ್ಯಾಯಯುತ ವರ್ಗಾವಣೆ ನೀಡಿಲ್ಲ. ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ. ಔಷಧಗಳಿಲ್ಲದಿದ್ದರೂ ಇದೆ ಎಂದು ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮ ಪ್ರಕಾರ ಹೊರಗಡೆಗೆ ಚೀಟಿ ಬರೆಯಬಾರದು, ಆದರೆ ಅನಿವಾರ್ಯವಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರವೀಂದ್ರನಾಥ್ ಮೇಟಿ ಆರೋಪಿಸಿದ್ದಾರೆ.
Contractors And Doctors Protest on State Govt: ಮಾರ್ಚ್ 11ರಿಂದ ಒಪಿಡಿ ಬಂದ್​
ಇತ್ತೀಚೆಗೆ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದರೂ ಔಷಧ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. 496 ಔಷಧಗಳಲ್ಲಿ ಕೇವಲ 26 ಮಾತ್ರ ಸರಬರಾಜಾಗುತ್ತಿವೆ. ಹಲವೆಡೆ ಐವಿ ಫ್ಲೂಯಿಡ್ ಕೊರತೆ ಉಂಟಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ನೌಕರರ ಸಂಘದ ಬೆಂಬಲ

ವೈದ್ಯರ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ದೊಡ್ಡದು. ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು. ಅಧಿಕಾರಿಗಳು ಪ್ರತಿಷ್ಠೆಗೆ ತೆಗೆದುಕೊಳ್ಳಬಾರದು. ನಾವು ಕಾನೂನಿನಡಿಯಲ್ಲಿ ಕೇಳುತ್ತಿದ್ದೇವೆ. ಪ್ರಮೋಷನ್ ಇಲ್ಲ, ವೇತನ ಹೆಚ್ಚಳವಿಲ್ಲ, ಗೌರವವಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಹೋಗಬೇಕಾಗಿದೆ. ಸರ್ಕಾರ ತಕ್ಷಣ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆದಾರರಿಂದ ಸರ್ಕಾರಕ್ಕೆ ಫೆಬ್ರವರಿ ಡೆಡ್​​ಲೈನ್

ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 37,000 ಕೋಟಿ ರೂಪಾಯಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಈ ಹಣ ಲೋಕೋಪಯೋಗಿ, ಜಲಸಂಪನ್ಮೂಲ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದೆ. ಬಾಕಿ ಪಾವತಿಸದಿದ್ದಲ್ಲಿ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ಮಾರ್ಚ್ 6ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us