ಕರ್ನಾಟಕ ಸರ್ಕಾರದಿಂದ ಜನಸೇವಕ ಮತ್ತು ಜನಸ್ಪಂದನ ಯೋಜನೆ; ಏನಿದರ ವಿಶೇಷತೆ?

| Updated By: ರಶ್ಮಿ ಕಲ್ಲಕಟ್ಟ

Updated on: Nov 03, 2021 | 2:26 PM

Janasevaka and Janaspandana “ಈ ಎಲ್ಲಾ ಸೇವೆಗಳನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬಹುದು. ಜನವರಿ 26 ರಂದು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕರ್ನಾಟಕ ಸರ್ಕಾರದಿಂದ ಜನಸೇವಕ ಮತ್ತು ಜನಸ್ಪಂದನ ಯೋಜನೆ; ಏನಿದರ ವಿಶೇಷತೆ?
ಜನಸೇವಕ- ಜನಸ್ಪಂದನ
Follow us on

ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸಲು, ಕರ್ನಾಟಕ ಸರ್ಕಾರವು ಸೋಮವಾರ ‘ಜನಸೇವಕ’ (ಜನರ ಸೇವಕ) ಆನ್‌ಲೈನ್ ಪೋರ್ಟಲ್ ಮತ್ತು ‘ಜನಸ್ಪಂದನ’, ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ (IPGRS) ಅನ್ನು ಪ್ರಾರಂಭಿಸಿದೆ.  ಎರಡು ಉಪಕ್ರಮಗಳು ಆನ್‌ಲೈನ್‌ನಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ನೀಡುವುದರಿಂದ ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ . “ಈ ಎಲ್ಲಾ ಸೇವೆಗಳನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬಹುದು. ಜನವರಿ 26 ರಂದು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಸಾರ್ವಜನಿಕ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಏನಿದು ಜನ ಸೇವಕ ?
ಜನಸೇವಕವು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಜನರಿಗೆ ಸಹಾಯ ಮಾಡುವ ಉಪಕ್ರಮವಾಗಿದೆ. ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಬಳಸಿ, ಅಥವಾ ಕಾಲ್ ಸೆಂಟರ್ ಮೂಲಕ ಸಂಪರ್ಕವನ್ನು ಪಡೆಯುವ ಮೂಲಕ, ಸಬ್ಸಿಡಿ ದರದಲ್ಲಿ ಪಡಿತರವನ್ನು ಮನೆಗೆ ತಲುಪಿಸುವುದು ಅಥವಾ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಕಾರ್ಡ್, ಬಿಬಿಎಂಪಿ ಖಾತಾ ವರ್ಗಾವಣೆ ಮತ್ತು ಆರೋಗ್ಯ ಕಾರ್ಡ್ ಸೇರಿದಂತೆ 56 ಸರ್ಕಾರಿ ಸೇವೆಗಳನ್ನು ಜನರು ತಮ್ಮ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಜನಸೇವಕ ಸೇವೆಗಳನ್ನು ಹೇಗೆ ಬಳಸುವುದು
ನಾಗರಿಕರು ಸೇವೆಗಳನ್ನು ವಿನಂತಿಸಲು ಅನುವು ಮಾಡಿಕೊಡಲು ವೆಬ್‌ಸೈಟ್ (www.janasevaka.karnataka.gov.in) ಅನ್ನು ಅಭಿವೃದ್ಧಿಪಡಿಸಲಾಗಿದೆ. ಅವರು ಸಕಾಲ ಕಾಲ್ ಸೆಂಟರ್‌ಗೆ ನಾಗರಿಕರನ್ನು ಸಂಪರ್ಕಿಸುವ ಫೋನ್ ಸಂಖ್ಯೆ (08044554455)ಗೆ ಕರೆ ಮಾಡಬಹುದು. ಈ ಬಗ್ಗೆ  ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಜನಸೇವಕ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ, “ನಾಗರಿಕರು ಸಕಾಲ ಕಾಲ್ ಸೆಂಟರ್‌ಗೆ ಕರೆ ಮಾಡಿ ಸೇವೆಯನ್ನು ಕೋರಬಹುದು. ಕಾಲ್ ಸೆಂಟರ್ ಕಾರ್ಯನಿರ್ವಾಹಕರು ಸೇವೆಗೆ ಅಗತ್ಯವಿರುವ ದಾಖಲೆಗಳು ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ.
ಕಾಲ್ ಸೆಂಟರ್ ಮತ್ತು ವೆಬ್‌ಸೈಟ್ ಹೊರತುಪಡಿಸಿ, ನಾಗರಿಕರು ಕರ್ನಾಟಕ ಸರ್ಕಾರದ ‘ಮೊಬೈಲ್ ಒನ್’ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವ ಮೂಲಕ ಸೇವೆಗಳನ್ನು ಪಡೆಯಬಹುದು.


ಜನಸೇವಕ ಹೇಗೆ ಕೆಲಸ ಮಾಡುತ್ತದೆ?
ಸೇವೆಯನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ನಂತರ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಜನಸೇವಕ ಕಾರ್ಯನಿರ್ವಾಹಕರನ್ನು ವಿತರಣಾ ಸ್ಥಳಕ್ಕೆ ನಿಯೋಜಿಸಲಾಗುತ್ತದೆ.  “ಪ್ರತಿ ಯಶಸ್ವಿ ಅರ್ಜಿ ಸಲ್ಲಿಕೆಗೆ ಸಹಾಯಕರು 115 ರೂಪಾಯಿಗಳ ಸೇವಾ ಶುಲ್ಕವನ್ನು ವಿಧಿಸುತ್ತಾರೆ. ಸಂಬಂಧಪಟ್ಟ ಇಲಾಖೆಯಿಂದ ಅರ್ಜಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ನಾಗರಿಕರ ಮನೆಗೆ ಜನಸೇವಕವು ಪ್ರಮಾಣಪತ್ರ/ಎನ್ಒಸಿ/ಅನುಮತಿ/ಪರವಾನಗಿ ಇತ್ಯಾದಿಗಳನ್ನು ತಲುಪಿಸುತ್ತದೆ.” ಎಂದು ರೆಡ್ಡಿ ವಿವರಿಸಿದರು.

ಎಂಡ್-ಟು-ಎಂಡ್ ಪ್ರಕ್ರಿಯೆಯು ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ಆಧರಿಸಿರುತ್ತದೆ ಇದರಿಂದ ಪ್ರತಿ ವಹಿವಾಟು ಮತ್ತು ಸೇವೆಯನ್ನು ತೊಂದರೆಯಿಲ್ಲದೆ ನಡೆಸಬಹುದು. ಸಲ್ಲಿಸಿದ ಸೇವೆಗಳ ಬಗ್ಗೆ ನಾಗರಿಕರಿಂದ ಆನ್‌ಲೈನ್ ಪ್ರತಿಕ್ರಿಯೆಯನ್ನು ಸಹ ತೆಗೆದುಕೊಳ್ಳಲಾಗುತ್ತದೆ.
“ನಾವು ಜನಸೇವಕ ವಿತರಣಾ ಕಾರ್ಯನಿರ್ವಾಹಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಅವರಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮೊಬೈಲ್ ಫೋನ್‌ಗಳ ಜೊತೆಗೆ ಇತರ ತಾಂತ್ರಿಕ ನೆರವು ಮತ್ತು ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಪೊಲೀಸ್ ಪರಿಶೀಲನೆಯ ಮೂಲಕ ನಾವು ವಿತರಣಾ ಕಾರ್ಯನಿರ್ವಾಹಕರ ಹಿನ್ನೆಲೆಯನ್ನು ಸಹ ಖಚಿತಪಡಿಸಿಕೊಳ್ಳುತ್ತೇವೆ ಎಂದು ರೆಡ್ಡಿ ಹೇಳಿದರು.

ಜನಸೇವಕ ಸೇವೆ ಯಾವಾಗ ಆರಂಭವಾಗುತ್ತದೆ?
ಈ ವರ್ಷ ಜನವರಿ 15 ರಂದು ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸೇವಕ ಸೇವೆಗಳನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಯಿತು. ರಾಜಾಜಿನಗರ, ಯಶವಂತಪುರ, ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನವೆಂಬರ್ 1 ರಿಂದ ಈ ಉಪಕ್ರಮವು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಲಭ್ಯವಿದೆ. ಮುಂದಿನ ವರ್ಷ ಜನವರಿ 26ರೊಳಗೆ ಜನಸೇವಕ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

”ಜನಸೇವಕ ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ನಮ್ಮದು ಜನಪರ ಸರ್ಕಾರವಾಗಿದ್ದು, ಇದು ವ್ಯಕ್ತಿಗಳ ಮನೆ ಬಾಗಿಲಿಗೆ ತಲುಪುತ್ತಿದೆ. ಈ ಅಗತ್ಯ ಸೇವೆಗಳು ನೇರವಾಗಿ ನಾಗರಿಕರಿಗೆ ತಲುಪಿದಾಗ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಬಲಗೊಳ್ಳುತ್ತದೆ”ಎಂದು ಬೊಮ್ಮಾಯಿ ಹೇಳಿದರು.
ದೆಹಲಿ ಸರ್ಕಾರದ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗಯಂತೆಯೇ ಜನಸೇವಕ ಸೇವೆ ಒದಗಿಸುತ್ತಿದ್ದು ಇದಕ್ಕೆ ಕಳೆದ ವರ್ಷ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.

ಕಳೆದ ಫೆಬ್ರವರಿಯಲ್ಲಿ ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಡ್ರೈ ರನ್ ಭಾಗವಾಗಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಇದು ನಾಗರಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅದರ ಆಧಾರದ ಮೇಲೆ ಯೋಜನೆಯ ಮೊದಲ ಹಂತವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಜನಸ್ಪಂದನ?
ಜನಸ್ಪಂದನವು ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯಾಗಿದೆ (IPGRS) ಇದರ ಮೂಲಕ ಸರ್ಕಾರವು ಯಾವುದೇ ಸರ್ಕಾರಿ ಯೋಜನೆ ಅಥವಾ ಸೇವೆಯ ಮೇಲೆ ದೂರುಗಳನ್ನು ಸಲ್ಲಿಸಲು ನಾಗರಿಕರಿಗೆ ಒನ್-ಸ್ಟಾಪ್ ವೇದಿಕೆಯ ಭರವಸೆ ನೀಡುತ್ತದೆ.  ಜನಸ್ಪಂದನವು ನಾಗರಿಕರ ವಿವಿಧ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯ ಮಾಡುವ ಕಾಲ್ ಸೆಂಟರ್ ಆಗಿದೆ. ನಾಗರಿಕರು ಸಹಾಯವಾಣಿಗೆ (1902) ಕರೆ ಮಾಡಬಹುದು ಮತ್ತು ಯಾವುದೇ ಸರ್ಕಾರಿ ಯೋಜನೆ ಅಥವಾ ಸೇವೆಯ ಬಗ್ಗೆ ದೂರುಗಳನ್ನು ನೀಡಬಹುದು.

ಜನಸ್ಪಂದನ ಹೇಗೆ ಕೆಲಸ ಮಾಡುತ್ತದೆ?
ನಾಗರಿಕರಿಗೆ 24X7 ಆನ್‌ಲೈನ್ ಬೆಂಬಲವನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮಾನಿಟರಿಂಗ್ ಸಿಸ್ಟಮ್ (CPGRAMS) ಮಾದರಿಯಲ್ಲಿ ಇದನ್ನು ರೂಪಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಂವಹನ ಸಚಿವಾಲಯವು 1902 ಸಹಾಯವಾಣಿ ಸಂಖ್ಯೆಯನ್ನು ಕರ್ನಾಟಕಕ್ಕೆ ನೀಡಿತು. ಜನಸ್ಪಂದನವು ವೆಬ್‌ನಲ್ಲಿ ಮತ್ತು ಆಂಡ್ರಾಯ್ಡ್ ಫೋನ್‌ಗಳಿಗೆ ಅಪ್ಲಿಕೇಶನ್‌  ಲಭ್ಯವಿದೆ.

ರಾಜ್ಯದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲು ವಿವಿಧ ಇಲಾಖೆಗಳು ಸ್ಥಾಪಿಸಿರುವ ಹಲವಾರು ಸಹಾಯವಾಣಿಗಳು ಮತ್ತು ವೆಬ್ ಪೋರ್ಟಲ್‌ಗಳು ಜನಸ್ಪಂದನದಲ್ಲಿವೆ. ಜನಸ್ಪಂದನವು ಸರ್ಕಾರದ 600 ಯೋಜನೆಗಳು ಮತ್ತು ಸೇವೆಗಳನ್ನು ಒಳಗೊಂಡಿರುತ್ತದೆ.

ಸಾರ್ವಜನಿಕರು ವ್ಯಕ್ತಪಡಿಸುವ ಪ್ರತಿಯೊಂದು ಕುಂದುಕೊರತೆಗಳನ್ನು ನಿರ್ದಿಷ್ಟ ಯೋಜನೆ ಅಥವಾ ಸೇವೆಗಾಗಿ ಆಯಾ ಇಲಾಖೆಯ ನಿರ್ದಿಷ್ಟ ಕಾರ್ಯನಿರ್ವಾಹಕರಿಗೆ ಮ್ಯಾಪ್ ಮಾಡಲಾಗುತ್ತದೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಕಾಲಮಿತಿಯೊಳಗೆ ಪರಿಹರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ತಿಂಗಳ ಪ್ರಾಯೋಗಿಕ ಚಾಲನೆಯ ನಂತರ ಜನಸ್ಪಂದನ ಆರಂಭ
ಇ-ಆಡಳಿತ ಇಲಾಖೆಯ ಅಧಿಕಾರಿಗಳ ಪ್ರಕಾರ ನಾಗರಿಕರು ಹೇಳುವ ಕುಂದುಕೊರತೆಗಳಿಗೆ ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಕಳೆದ ಎರಡು ತಿಂಗಳಿನಿಂದ ಪ್ರಾಯೋಗಿಕ ಆಧಾರದ ಮೇಲೆ IPGRS ಅನ್ನು ನಡೆಸುತ್ತಿದ್ದಾರೆ. ಪ್ರಾಯೋಗಿಕ ಹಂತದಲ್ಲಿ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ IPGRS ಅಪ್ಲಿಕೇಶನ್ 1,583 ಕುಂದುಕೊರತೆಗಳನ್ನು ಸ್ವೀಕರಿಸಿದೆ, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಗೆ ಸಂಬಂಧಿಸಿವೆ. ಜನಸ್ಪಂದನ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಐದರಲ್ಲಿ 3.3 ರೇಟಿಂಗ್ ಹೊಂದಿದೆ.

ಇದನ್ನೂ ಓದಿ: Puneeth Rajkumar: ಮಾನವೀಯ ಮೌಲ್ಯಗಳನ್ನು ಪುನೀತ್​ರಿಂದ ಕಲಿಯಬೇಕು; ಅಪ್ಪು ಸ್ಮರಿಸಿ ಕಂಬನಿ ಮಿಡಿದ ರಾಮ್ ಚರಣ್