
ಬೆಂಗಳೂರು, ಡಿಸೆಂಬರ್ 04: ಮೂಢ ನಂಬಿಕೆ, ಆಚರಣೆಗಳ ಹೆಸರಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವಂತಹ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗ್ತಿವೆ. ಈ ಹಿನ್ನಲೆ ಇಂತಹ ಪ್ರಕರಣಗಳ ತಡೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಬಗ್ಗೆ ಹೊಸ ಕಾನೂನು ತರಲು ಸಿದ್ಧತೆ ನಡೆದಿದೆ. ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ-2025ರ ಮಂಡನೆಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಇದೆಂಥಾ ಅನ್ಯಾಯ; ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಸಾಮಾಜಿಕ ಬಹಿಷ್ಕಾರ ಹಾಕಿರುವುದು ಅಥವಾ ಅದಕ್ಕೆ ಕಾರಣವಾಗಿರುವುದು ವಿಚಾರಣೆ ವೇಳೆ ಸಾಬೀತಾದರೆ ಅಂತಹ ವ್ಯಕ್ತಿಗಳಿಗೆ 3 ವರ್ಷ ಜೈಲು ಶಿಕ್ಷ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ನೀಡಬಹುದು. ಪ್ರಥಮ ದರ್ಜೆಯ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕುವಂತಹ ಸಭೆಗಳು ನಡೆಯುವ ಮಾಹಿತಿ ಸಿಕ್ಕರೆ ಅವುಗಳನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು.
ಇದರ ಜೊತೆಗೆ ದ್ವೇಷ ಭಾಷಣಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿಯೂ ಹೊಸ ವಿಧೇಯಕವನ್ನು ಮಂಡಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದು, ಅಪರಾಧ ವಿಧೇಯಕ 2025ರ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಮ್ಮೆ ಸಂಪುಟದ ಅನುಮೋದನೆ ದೊರೆತರೆ, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Thu, 4 December 25