ನೆಟೆ ರೋಗದಿಂದ ತೊಗರಿ ಬೆಳೆ ಹಾಳು: ಕೊನೆಗೂ ರೈತರಿಗೆ ಪರಿಹಾರ ಘೋಷಿಸಿದ ಸರ್ಕಾರ

| Updated By: ರಮೇಶ್ ಬಿ. ಜವಳಗೇರಾ

Updated on: Jan 24, 2023 | 10:53 PM

ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

ನೆಟೆ ರೋಗದಿಂದ ತೊಗರಿ ಬೆಳೆ ಹಾಳು: ಕೊನೆಗೂ ರೈತರಿಗೆ ಪರಿಹಾರ ಘೋಷಿಸಿದ ಸರ್ಕಾರ
ತೊಗರಿ ಬೆಳೆ ನಷ್ಟಕ್ಕೆ ಪರಿಹಾರ
Follow us on

ಬೆಂಗಳೂರು: ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯಾದ್ಯಂತ ತೊಗರಿ ಬೆಳೆ(Toor dal Crop) ನೆಟೆರೋಗದಿಂದ ವ್ಯಾಪಕ ಹಾನಿ ಉಂಟಾಗಿದೆ. ಬೆಳೆ ಹಾನಿದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಕೊನೆಗೂ ಪರಿಹಾರ ಘೋಷಿಸಿದೆ. ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಗರಿಷ್ಠ 2 ಹೆಕ್ಟೇರ್​ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ಘೋಷಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಟೆರೋಗದಿಂದ ತೊಗರಿ ಬೆಳೆ ಹಾಳು, ಪರಿಹಾರಕ್ಕಾಗಿ ಆಗ್ರಹಿಸಿ ಕಲಬುರಗಿ ಬಂದ್

ಇಂದು(ಜನವರಿ 24) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2 ಹೆಕ್ಟೇರ್​ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇನ್ನು ನೆಟೆ ರೋಗ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತವು 223 ಕೋಟಿ ರೂಪಾಯಿಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.


ಅಕಾಲಿಕ ಮಳೆಯಿಂದಾಗಿ ಹಾಗೂ ಮೋಡಕವಿದ ವಾತಾವರಣದಿಂದಾಗಿ ಬೀದರ್, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ನೆಟೆ ರೋಗ ಬಾಧೆ ಉಲ್ಬಣಗೊಂಡು ಒಣಗಿ ಹೋಗಿತ್ತು. ಇದರಿಂದ ರೈತ ಕಂಗಾಲಾಗಿದ್ದ. ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಮೂರು ಜಿಲ್ಲೆಗಳಲ್ಲಿ ರೈತರು ನಿರಂತರ ಪ್ರತಿಭಟನೆಗಳನ್ನು ಮಾಡಿದ್ದರು. ಆದರೂ ಸೆರ್ಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ವಿಪಕ್ಷಗಳಿಂದ ಸಹ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚತ್ತ ಬೊಮ್ಮಾಯಿ ಸರ್ಕಾರ ಕೊನೆಗೆ ಪರಿಹಾರ ಘೋಷಿಸಿದೆ. ಆದ್ರೆ, ಆ ಪರಿಹಾರ ಸಂತ್ರಸ್ತ ರೈತರಿಗೆ ತಲುಪ್ಪುತ್ತೋ? ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಈ ಪರಿಹಾರ ರೈತ ಹಾಕಿದ್ದ ಬಂಡಾವಳ ನಷ್ಟ ಭರಿಸುತ್ತಾ ಎನ್ನುವುದು ಮುಂದಿರುವ ಪ್ರಶ್ನೆ.

ರಾಜ್ಯದ ತೊಗರಿ ಕಣಜ ಖ್ಯಾತಿಯ ತೊಗರಿ ಬೆಳೆಗಾರರು ಕಂಗಾಲು

ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವುದು ಕಲಬುರಗಿ ಜಿಲ್ಲೆಯಲ್ಲಿ. ಹೀಗಾಗಿಯೇ ಕಲಬುರಗಿಯನ್ನು ರಾಜ್ಯದ ತೊಗರಿ ಕಣಜ ಎಂದು ಎಂದು ಕರೆಯುತ್ತಾರೆ. ಕಲಬುರಗಿಯಲ್ಲಿ ಬೆಳೆಯುವ ತೊಗರಿ ರಾಜ್ಯವಲ್ಲದೆ, ನೆರೆಯ ರಾಜ್ಯಗಳಿಗೆ ಕೂಡಾ ಹೋಗುತ್ತದೆ. ಕಲಬುರಗಿ ಜಿಲ್ಲೆಯ ಹೆಚಿನ ರೈತರು ನಂಬಿಕೊಂಡಿರುವುದು ತೊಗರಿ ಬೆಳೆಯನ್ನೇ. ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಂದರೆ ಅದು ತೊಗರಿ. ಈ ಬಾರಿ ಜಿಲ್ಲೆಯಲ್ಲಿ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ ಅತಿವೃಷ್ಟಿಯಿಂದ 1.29 ಲಕ್ಷ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಬೆಳದಿದ್ದ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಇದೀಗ ಎಂಬತ್ತು ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿನ ತೊಗರಿ ನಟೆ ರೋಗದಿಂದ ಹಾಳಾಗಿದ್ದರಿಂದ, ಬಿತ್ತನೆಯಾದ ಅರ್ಧದಷ್ಟು ತೊಗರಿ ಬೆಳೆ ಹಾಳಾಗಿದೆ ಎಂದು ತಿಳಿದುಬಂದಿದೆ.