ನಟೆರೋಗದಿಂದ ತೊಗರಿ ಬೆಳೆ ಹಾಳು, ಪರಿಹಾರಕ್ಕಾಗಿ ಆಗ್ರಹಿಸಿ ಕಲಬುರಗಿ ಬಂದ್
ಪ್ರತಿವರ್ಷ ಸರಿಯಾದ ಬೆಲೆ ಸಿಗದೇ ಕಂಗಾಲಾಗುತ್ತಿದ್ದ ತೊಗರಿ ಬೆಳೆಗಾರರು, ಈ ಬಾರಿ ತೊಗರಿಗೆ ಬಂದಿರುವ ನಟೆ ರೋಗದಿಂದ ಕಂಗಾಲಾಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ, ಕಾಳಾಗುವ ಮುನ್ನವೇ ಒಣಗಿ ಹೋಗಿದೆ.
ಕಲಬುರಗಿ: ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರುವ ಜಿಲ್ಲೆ ಕಲಬುರಗಿ. ಆದರೆ ನಟೆರೋಗದಿಂದ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಯಿಯಾಗುವ ಹಂತದಲ್ಲಿ ತೊಗರಿ ಬೆಳೆ ಒಣಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾಳಾಗಿ ಹೋಗಿದೆ. ಹೀಗಾಗಿ ಇಂದು (ಜ.17) ನಟೆರೋಗದಿಂದ ಹಾಳಾಗಿರುವ ತೊಗರಿಗೆ ಪರಿಹಾರ ನೀಡಬೇಕು ಅಂತ ಆಗ್ರಹಿಸಿ, ವಿವಿಧ ಸಂಘಟನೆಗಳು ಕಲಬುರಗಿ ಬಂದ್ಗೆ ಕರೆ ನೀಡಿವೆ.
ಮುಂಜಾನೆ ಐದು ಗಂಟೆಯಿಂದಲೇ ಕಲಬುರಗಿ ನಗರದಲ್ಲಿ ಬಂದ್ ವಾತಾವರಣವಿದ್ದು ವಿವಿಧ ಸಂಘಟನೆಗಳ ಸದಸ್ಯರು, ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೆಯುವ ಚಳಿಯಿದ್ದರು ಕೂಡಾ, ರೈತರ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಮುಂಜಾನೆ ಐದು ಗಂಟೆಯಿಂದಲೇ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಇದರಿಂದ ಬೇರೆಡೆ ಹೋಗುವ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನವರಿ 19ಕ್ಕೆ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು, ರಾಜ್ಯಸರ್ಕಾರಕ್ಕೆ ಹೇಳಿ ಪರಿಹಾರ ಕೊಡಿಸಿ, ಜಿಲ್ಲೆಗೆ ಬರಬೇಕು ಅಂತ ಬಂದ್ ನಿರತರು ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯಲ್ಲಿ ಪ್ರೋಟಿನ್ ಪ್ರಮಾಣ ಹೆಚ್ಚಾಗಿರುವುದರಿಂದ, ಕಲಬುರಗಿ ತೊಗರಿಗೆ ರಾಜ್ಯವಲ್ಲದೆ, ದೇಶಾದ್ಯಂತ ಬೇಡಿಕೆಯಿದೆ. ಆದರೆ ಪ್ರತಿವರ್ಷ ಸರಿಯಾದ ಬೆಲೆ ಸಿಗದೇ ಕಂಗಾಲಾಗುತ್ತಿದ್ದ ತೊಗರಿ ಬೆಳೆಗಾರರು, ಈ ಬಾರಿ ತೊಗರಿಗೆ ಬಂದಿರುವ ನಟೆ ರೋಗದಿಂದ ಕಂಗಾಲಾಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ, ಕಾಳಾಗುವ ಮುನ್ನವೇ ಒಣಗಿ ಹೋಗಿದೆ.
ತೊಗರಿಗೆ ಕಾಡಿದ ನಟೆರೋಗ
ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರಿಗೆ ನಟೆ ರೋಗ ದೊಡ್ದ ಬರೆ ಎಳೆದಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ತೊಗರಿ ಬೆಳೆದಿದ್ದರು. ಅತಿವೃಷ್ಟಿಯಿಂದ ಆರಂಭದಲ್ಲಿಯೇ ತೊಗರಿ ಹಾಳಾಗಿದ್ದರಿಂದ ರೈತರು ಮತ್ತೆ ಭೂಮಿ ಹಸನು ಮಾಡಿ ತೊಗರಿ ಬಿತ್ತನೆ ಮಾಡಿದ್ದರು. ತೊಗರಿ ಬೆಳೆ ಕೂಡಾ ಚೆನ್ನಾಗಿ ಬಂದಿತ್ತು. ಆದರೆ ತೊಗರಿ ಕಾಳಾಗುವ ಹಂತದಲ್ಲಿ, ನಟೆ ರೋಗ ಒಕ್ಕರಿಸಿಕೊಂಡಿದೆ. ನಟೆ ರೋಗದಿಂದ ತೊಗರಿ ಗೊಡ್ಡಾಗಿದ್ದು, ಕಾಳಾಗುವ ಮುನ್ನವೇ ಒಣಗುತ್ತಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಅಂದಾಜು ಮಾಡಿದ ಪ್ರಕಾರ, ಎಂಬತ್ತು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ನಟೆ ರೋಗದಿಂದ ಹಾಳಾಗಿ ಹೋಗಿದೆ. ಇದು ತೊಗರಿ ಬೆಳೆಗಾರರಿಗೆ ದೊಡ್ಡ ಶಾಕ್ ನೀಡಿದೆ.
ಕಲಬುರಗಿ ಜಿಲ್ಲೆಯ ಹೆಚಿನ ರೈತರು ನಂಬಿಕೊಂಡಿರುವುದು ತೊಗರಿ ಬೆಳೆಯನ್ನೇ. ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಂದರೆ ಅದು ತೊಗರಿ. ಈ ಬಾರಿ ಜಿಲ್ಲೆಯಲ್ಲಿ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ ಅತಿವೃಷ್ಟಿಯಿಂದ 1.29 ಲಕ್ಷ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಬೆಳದಿದ್ದ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಇದೀಗ ಎಂಬತ್ತು ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿನ ತೊಗರಿ ನಟೆ ರೋಗದಿಂದ ಹಾಳಾಗಿದ್ದರಿಂದ, ಬಿತ್ತನೆಯಾದ ಅರ್ಧದಷ್ಟು ತೊಗರಿ ಬೆಳೆ ಹಾಳಾಗಿ ಹೋದಂತಾಗಿದೆ.
ಪರಿಹಾರಕ್ಕೆ ರೈತರ ಆಗ್ರಹ, ಸ್ಪಂಧಿಸದ ಸರ್ಕಾರ
ಇನ್ನು ಜಿಲ್ಲೆಯ ಪ್ರಮುಖ ಬೆಳೆಯಾಗಿರೋ ತೊಗರಿ ಹಾಳಾಗಿದ್ದರಿಂದ, ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪ್ರತಿ ಎಕರೆಗೆ ಇಪ್ಪತ್ತೈದು ಸಾವಿರ ರೂಪಾಯಿ ಪರಿಹಾರ ನೀಡಬೇಕು ಅಂತ ರೈತರು ಅನೇಕ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕಲಬುರಗಿ ನಗರದಲ್ಲಿ ಒಣಗಿರೋ ತೊಗರಿ ಗಿಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಕೂಡಾ ನೂರಾರು ರೈತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಪರಿಹಾರ ನೀಡದೆ ಇದ್ರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಕೂಡಲೇ ಸರ್ಕಾರ ಹಾನಿಯಾಗಿರುವ ಪ್ರದೇಶದ ಸರ್ವೆ ಮಾಡಿಸಿ, ಪರಿಹಾರ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಆದರೆ ಇಲ್ಲಿವರಗೆ ಸರ್ಕಾರ ಪರಿಹಾರ ನೀಡುವ ಯಾವುದೇ ಭರವಸೆಯನ್ನು ರೈತರಿಗೆ ನೀಡಿಲ್ಲ. ಇದು ತೊಗರಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಡಿಕೆ, ರಾಗಿ ಸೇರಿದಂತೆ ಅನೇಕ ಬೆಳೆಗಳು ಹಾಳಾದಾಗ ಸರ್ಕಾರ, ಆ ರೈತರ ನೆರವಿಗೆ ನಿಲ್ಲುತ್ತದೆ. ಆದ್ರೆ ತೊಗರಿ ಬೆಳೆಗಾರರ ಬೆನ್ನಿಗೆ ಮಾತ್ರ ಚೂರಿ ಹಾಕುವ ಕೆಲಸ ಮಾಡುತ್ತಿದೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಸ್ಪಂಧಿಸದೇ ಇದ್ದಾಗ ಇಂದು ಕಲಬುರಗಿ ಬಂದ್ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರ ತೊಗರಿ ಬೆಳೆಗಾರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕೂಡಲೇ ಸರ್ಕಾರ ನಟೆ ರೋಗದಿಂದ ಹಾಳಾಗಿರುವ ಜಮೀನಿನ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಎಂಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಪರಿಹಾರ ನೀಡದೇ ಇದ್ದರೆ, ರೈತರ ಸರಣಿ ಆತ್ಮಹತ್ಯೆ ನಿಲ್ಲೋದಿಲ್ಲಾ. ಹೀಗಾಗಿ ಕೂಡಲೇ ಸರ್ಕಾರ ಪ್ರತಿ ಎಕರೆಗೆ ಇಪ್ಪತ್ತೈದು ಸಾವಿರ ರೂಪಾಯಿ ಪರಿಹಾರ ನೀಡಬೇಕು ಅಂತ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ
Published On - 9:36 am, Tue, 17 January 23