
ಬೆಂಗಳೂರು, ಅಕ್ಟೋಬರ್ 26: ಆಂಧ್ರ ಪ್ರದೇಶದ ಕರ್ನೂಲ್ ಸಮೀಪ ಅಗ್ನಿ ದುರಂತದಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿ ಹಲವರು ಸಾವನ್ನಪ್ಪಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾರಿಗೆ ಬಸ್ಗಳಲ್ಲಿನ ಸುರಕ್ಷತಾ ಕ್ರಮದ ಪರಿಶೀಲನೆಗೆ ಮುಂದಾಗಿದ್ದು, ಈ ಬಗ್ಗೆ ನಾಲ್ಕೂ ನಿಗಮಗಳ ಎಂಡಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪತ್ರ ಬರೆದಿದ್ದಾರೆ. ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮುಖ್ಯಸ್ಥರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರದ ಮೂಲಕ ಒಂದಿಷ್ಟು ಸಲಹೆ, ಸೂಚನೆ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ ಎಂದು ಸಚಿವರು ತಿಳಿಸಿದ್ದು, ಪ್ರಾಣ ಹಾನಿಗೆ ಯಾವುದೇ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನೂಲ್ ಬಸ್ ದುರಂತದಲ್ಲಿ 20 ಜನರ ಸಜೀವದಹನ; ಬೈಕ್ನ ಕಿಡಿಯೇ ಬೆಂಕಿ ಅವಘಡಕ್ಕೆ ಕಾರಣ
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಅಕ್ಟೋಬರ್ 24ರಂದು ನಸುಕಿನ ಜಾವ ಆಂಧ್ರಪ್ರದೇಶದ ಕರ್ನೂಲು ಬಳಿ ಸುಟ್ಟು ಭಸ್ಮವಾಗಿತ್ತು. ಬೈಕ್ಗೆ ಡಿಕ್ಕಿಯಾದ ಬಳಿಕ ಏಕಾಏಕಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ಗೆ ವಾಪಿಸಿತ್ತು. ಬಸ್ನಲ್ಲಿಪ್ರಯಾಣಿಸುತ್ತಿದ್ದ ಒಟ್ಟು 46 ಮಂದಿ ಪ್ರಯಾಣಿಕರ ಪೈಕಿ, 19 ಪ್ರಯಾಣಿಕರು ಮತ್ತು ಬೈಕ್ ಸವಾರ ಸಜೀವ ದಹನವಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Sun, 26 October 25