ಬಿಸಿಲಿನ ಝಳಕ್ಕೆ ಬೆದರಿದ ಪ್ರವಾಸಿಗರು: ಹಂಪಿಗೆ ಭೇಟಿ ನೀಡುವವರ ಸಂಖ್ಯೆ 10 ವರ್ಷಗಳ ಕನಿಷ್ಠಕ್ಕೆ

|

Updated on: Apr 17, 2024 | 9:27 AM

ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿರುವುದು ಪ್ರವಾಸೋದ್ಯಮದ ಮೇಲೂ ಪ್ರಭಾವ ಬೀರಿದೆ. ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂಖ್ಯೆ ಕಡಿಮೆಯಾಗಿದೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಬರುವ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಬಿಸಿಲಿನ ಝಳಕ್ಕೆ ಬೆದರಿದ ಪ್ರವಾಸಿಗರು: ಹಂಪಿಗೆ ಭೇಟಿ ನೀಡುವವರ ಸಂಖ್ಯೆ 10 ವರ್ಷಗಳ ಕನಿಷ್ಠಕ್ಕೆ
ಹಂಪಿಗೆ ಭೇಟಿ ನೀಡುವವರ ಸಂಖ್ಯೆ 10 ವರ್ಷಗಳ ಕನಿಷ್ಠಕ್ಕೆ
Follow us on

ಬೆಂಗಳೂರು, ಏಪ್ರಿಲ್ 17: ಕರ್ನಾಟಕದಾದ್ಯಂತ ಹೆಚ್ಚುತ್ತಿರುವ ತಾಪಮಾನ (Temperature) ಪ್ರವಾಸೋದ್ಯಮಕ್ಕೂ ಹೊಡೆತ ನೀಡುತ್ತಿದೆ. ಈ ಮಧ್ಯೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ (Hampi) ಕಳೆದ 10 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರವಾಸಿಗರ (Tourists) ಭೇಟಿಗೆ ಸಾಕ್ಷಿಯಾಗಿದೆ ಎಂದು ವರದಿಯಾಗಿದೆ. ಹಂಪಿಗೆ ಸಾಮಾನ್ಯವಾಗಿ ದಿನಕ್ಕೆ 5,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಆದಾಗ್ಯೂ, ತಾಪಮಾನದ ಮಟ್ಟ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಹೀಗಾಗಿ, ವಾರಾಂತ್ಯದಲ್ಲಿ ಈ ಪ್ರವಾಸಿಗರ ಸಂಖ್ಯೆ ಸುಮಾರು 150ಕ್ಕೆ ಇಳಿಕೆಯಾಗಿದೆ. ವಾರದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಎರಡಂಕಿ ತಲುಪುತ್ತಿದೆಯಷ್ಟೇ ಎಂದು ಹೊಸಪೇಟೆಯ ಡಿಸಿ ಎಂಎಸ್ ದಿವಾಕರ್ ತಿಳಿಸಿದ್ದಾರೆ.

ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಮಾರಾಟಗಾರರು, ಸಣ್ಣ ಅಂಗಡಿಗಳ ವರ್ತಕರ ಜೀವನೋಪಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 2 ದಿನ ಮಳೆಯಾದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂದು ದಿವಾಕರ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ವರ್ಷದ ಜನವರಿಯಲ್ಲಿ ದಿನಕ್ಕೆ ಸುಮಾರು 25,000 ಪ್ರವಾಸಿಗರು ಹಂಪಿಗೆ ಆಗಮಿಸಿದ್ದರು. ಮೂರು ದಿನಗಳ ಹಂಪಿ ಉತ್ಸವದಲ್ಲಿ ಸುಮಾರು 15 ಲಕ್ಷ ಪ್ರವಾಸಿಗರು ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಹೋಟೆಲ್ ಉದ್ಯಮಕ್ಕೂ ಹೊಡೆತ

ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು, ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳು ಸಾಕಷ್ಟಿಲ್ಲ. ಕಾರ್ಮಿಕ ವರ್ಗದವರಿಗೆ ಹಂಪಿ ದೇವಸ್ಥಾನದ ಸಮೀಪದಲ್ಲಿ ಹೋಟೆಲ್‌ಗಳ ಅವಶ್ಯಕತೆಯಿದೆ ಎಂದು ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ಈ ಪ್ರದೇಶದ ಹೋಟೆಲ್ ಉದ್ಯಮದ ಮೇಲೆಯೂ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ

ಹಂಪಿಯ ಹೋಟೆಲ್​​ಗಳಲ್ಲಿ ಕೊಠಡಿ ಬುಕಿಂಗ್ ಶೇಕಡಾ 20 ಕ್ಕೆ ಕುಸಿದಿದೆ. ಸಾಮಾನ್ಯವಾಗಿ ನಮ್ಮಲ್ಲಿರುವ 200 ಕೊಠಡಿಗಳಲ್ಲಿ 180 ಕೊಠಡಿಗಳು ಭರ್ತಿಯಾಗುತ್ತಿದ್ದವು. ಈಗ ಅವುಗಳಲ್ಲಿ ಕೇವಲ 30 ಬುಕ್ ಆಗಿವೆ. ಪರಿಸ್ಥಿತಿ ನಿಜವಾಗಿಯೂ ಕಷ್ಟಕರವಾಗಿದೆ ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ