ನೆಲಮಂಗಲ ನಗರಸಭೆಗೆ 2 ತಿಂಗಳೊಳಗೆ ಚುನಾವಣೆ ನಡೆಸಿ -ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

|

Updated on: Jan 07, 2021 | 8:21 PM

ನಗರಸಭೆಗೆ 2 ತಿಂಗಳೊಳಗೆ ಚುನಾವಣೆ ನಡೆಸಿ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.

ನೆಲಮಂಗಲ ನಗರಸಭೆಗೆ 2 ತಿಂಗಳೊಳಗೆ ಚುನಾವಣೆ ನಡೆಸಿ -ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ನೆಲಮಂಗಲ ನಗರಸಭೆ
Follow us on

ನೆಲಮಂಗಲ: ನಗರಸಭೆಗೆ 2 ತಿಂಗಳೊಳಗೆ ಚುನಾವಣೆ ನಡೆಸಿ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.

ಪುರಸಭೆಯಾಗಿದ್ದ ನೆಲಮಂಗಲವನ್ನು ಸರ್ಕಾರ ಮೇಲ್ದರ್ಜೆಗೇರಿಸಿತ್ತು. ಜೊತೆಗೆ, ನಗರಸಭೆಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿತ್ತು.

ಹಾಗಾಗಿ, ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಕಲ್ಪನಾ‌ ಮತ್ತಿತರರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಸಿದ್ಧವಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ನ್ಯಾ.ಆರ್.ದೇವದಾಸ್ ಪೀಠ ಆದೇಶ ಹೊರಡಿಸಿದೆ.

ಎರಡು ತಿಂಗಳೊಳಗೆ ನೆಲಮಂಗಲ ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ನಗರಸಭೆಗೆ ಒಳಪಟ್ಟಿರುವ ಅರಿಶಿನ ಕುಂಟೆ, ವಾಜರಹಳ್ಳಿ, ಬಸವನಹಳ್ಳಿ ಹಾಗೂ ವಿಶ್ವೇಶ್ವರಪುರ ಗ್ರಾಮ ಪಂಚಾಯತಿಗಳ 108 ಸದಸ್ಯರ ಕಾನೂನು ಹೋರಾಟಕ್ಕೆ ಜಯ ದೊರೆತಂತಾಗಿದೆ.

ನಗರಸಭಾ ಚುನಾವಣೆ ಕುರಿತಂತೆ 108 ಗ್ರಾಪಂ ಸದಸ್ಯರ ಪರ ಕಲ್ಪನಾ ಮಂಜುನಾಥ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.

ಈ ಹಿಂದೆ, ಪುರಸಭೆಯಾಗಿದ್ದ ನೆಲಮಂಗಲವನ್ನು ಸರ್ಕಾರ 26-12-2019ರಂದು ನಗರಸಭೆಯನ್ನಾಗಿ ಪರಿವರ್ತನೆ ಮಾಡಿತ್ತು. ಒಂದು ಪುರಸಭೆ, 4 ಗ್ರಾಮ ಪಂಚಾಯತಿಗಳನ್ನು ಸೇರ್ಪಡೆ ಮಾಡಿ ನಗರಸಭೆಯನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಆದರೆ, ನಗರಸಭೆಗೆ ಚುನಾವಣೆ ನಡೆಸದೆ ಹಿಂದೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದವರನ್ನೇ ನಗರಸಭಾ ಸದಸ್ಯರನ್ನಾಗಿ ಪರಿವರ್ತಿಸುವಂತೆ ಸರ್ಕಾರ ಸೂಚನೆ ನೀಡಿತ್ತು.

ಪುರಸಭೆಯನ್ನು ಮಾತ್ರ ಪರಿಗಣಿಸಿ ನಾಲ್ಕು ಗ್ರಾ.ಪಂಗಳ ಸದಸ್ಯರನ್ನು ಕಡೆಗಣನೆ ಮಾಡಿ ಕೇವಲ ಪುರಸಭಾ ಸದಸ್ಯರನ್ನೇ ನಗರಸಭೆ ಸದಸ್ಯರನ್ನಾಗಿ ಪರಿವರ್ತಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕಲ್ಪನಾ ಮಂಜುನಾಥ್ ಅವರು ಕಳೆದ ಆಗಸ್ಟ್‌ನಲ್ಲಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕಳೆದ 5 ತಿಂಗಳಿನಿಂದ ವಾದ-ವಿವಾದ ಆಲಿಸಿದ ನ್ಯಾ.ದೇವದಾಸ್ ಅವರು ಪುರಸಭಾ ಸದಸ್ಯರನ್ನೇ ನಗರಸಭಾ ಸದಸ್ಯರನ್ನಾಗಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಿ 2 ತಿಂಗಳೊಳಗೆ ನೆಲಮಂಗಲ ನಗರಸಭಾ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಟಿ.ಶೇಷಗಿರಿರಾವ್ ವಾದ ಮಂಡಿಸಿದ್ದರು.

ಜಲ್ಲಿ, ಕಲ್ಲು, M ಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ವಿಧಿಸುವ ಅಧಿಕಾರ ಸರ್ಕಾರಕ್ಕಿಲ್ಲ -ಹೈಕೋರ್ಟ್