ಆ್ಯಂಬಿಡೆಂಟ್ ಕಂಪನಿಯಿಂದ ವಂಚನೆ ಕೇಸ್: ಶಾಸಕ ಜನಾರ್ದನ ರೆಡ್ಡಿಗೆ ಶಾಕ್ ಕೊಟ್ಟ ಸರ್ಕಾರ

ಆ್ಯಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್‌ಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣದಿಂದ ಕೈಬಿಟ್ಟ ಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಇನ್ನು ಇದು ಇಂದು (ಸೆ.24) ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಬಂದಿದ್ದು, ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿಖಾನ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಆ್ಯಂಬಿಡೆಂಟ್ ಕಂಪನಿಯಿಂದ ವಂಚನೆ ಕೇಸ್: ಶಾಸಕ ಜನಾರ್ದನ ರೆಡ್ಡಿಗೆ ಶಾಕ್ ಕೊಟ್ಟ ಸರ್ಕಾರ
Janardhan Reddy
Edited By:

Updated on: Sep 24, 2026 | 4:12 PM

ಬೆಂಗಳೂರು, (ಸೆಪ್ಟೆಂಬರ್ 24):  ಆ್ಯಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣದಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್‌ ಅವರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. 8 ತಿಂಗಳ ಬಳಿಕ ಜನಪ್ರತಿನಿಧಿಗಳ ಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಶಾಸಕ ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಅಲಿಖಾನ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಆ್ಯಂಬಿಡೆಂಟ್ ಕಂಪನಿಯಿಂದ 20 ಕೋಟಿ ರೂ. ಪಡೆದ ಆರೋಪವಿತ್ತು. ಇಡಿ ತನಿಖೆ ನಡೆದರೆ ಸಹಾಯ ಮಾಡುವುದಾಗಿ ಹಣ ಪಡೆದ ಆರೋಪವಿತ್ತು. ಆದರೆ 2025ರ ಆಕ್ಟೋಬರ್ 22ರಂದು ಜನಪ್ರತಿನಿಧಿಗಳ ಕೋರ್ಟ್‌, ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಅಲಿಖಾನ್‌ ಅವರನ್ನು ಪ್ರಕರಣದಿಂದ ಕೈಬಿಟ್ಟಿತ್ತು. ಆದ್ರೆ, ಇದೀಗ ರಾಜ್ಯ ಸರ್ಕಾರ 8 ತಿಂಗಳುಗಳ ಬಳಿಕ ಜನಾರ್ದನ ರೆಡ್ಡಿ ಹಾಗೂ ಮೆಹಫೂಜ್ ಅಲಿಖಾನ್‌ ಅವರನ್ನು ಪ್ರಕರಣದಿಂದ ಕೈಬಿಟ್ಟಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​​ಗೆ ಮೇಲನ್ಮನವಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ, ಇಬ್ಬರಿಗೂ ನೋಟಿಸ್ ನೀಡಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ಕಂಡ ಅದೆಷ್ಟೋ ಬಹುಕೋಟಿ ವಂಚನೆಗಳಲ್ಲಿ ಈ ಆಂಬಿಡೆಂಟ್​ ಚಿಟ್​ಫಂಡ್​ ಪ್ರಕರಣ ಕೂಡ ಒಂದು. ಎಲ್ಲಾ ವಂಚನೆ ಪ್ರಕರಣಗಳಲ್ಲಿ ನಡೆಯುವಂಥದ್ದೇ ಮಾಡಸ್​ ಆಪರೆಂಡಿ ಈ ಪ್ರಕರಣದಲ್ಲೂ ನಡೆದಿತ್ತು. ಈ ಹಿಂದೆಯೇ ಬೆಳಕಿಗೆ ಬರಬೇಕಿದ್ದ ಪ್ರಕರಣ ಬೂದಿ ಮುಚ್ಚಿದ ಕೆಂಡದಂತೆ ಸಮಯಕ್ಕಾಗಿ ಕಾದು ಕುಳಿತಿತ್ತು. ಆಂಬಿಡೆಂಟ್​ ಸಂಸ್ಥೆಯ ಮಾಲೀಕರಾದ ಸೈಯದ್​ ಅಹ್ಮದ್​ ಫರೀದ್​ ಮತ್ತು ಸೈಯದ್​ ಅಫಾಕ್​ ಅಪ್ಪ-ಮಗನ ಜೋಡಿ ನಡೆಸುತ್ತಿರುವ ವ್ಯವಹಾರದ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಆರ್ಥಿಕ ನೀತಿಯ ಅನ್ವಯ ಇರುವ ನಡಾವಳಿಗಳನ್ನು ಗಾಳಿಗೆ ತೂರಿ ಅಪ್ಪ – ಮಗನ ಜೋಡಿ ವ್ಯವಹಾರ ಮಾಡಿದೆ ಎಂದು ಹಣಕಾಸು ಗುಪ್ತಚರ ಘಟಕ (ಎಫ್​ಐಯು) ನೀಡಿದ ಮಾಹಿತಿ ಬೆನ್ನತ್ತಿದ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ದಾಳಿಯಾದ ನಂತರ ಅಪ್ಪ – ಮಗ ತಮ್ಮ ತಪ್ಪನ್ನು ಒಪ್ಪಿಕೊಂಡು 2 ಕೋಟಿ ರೂ. ದಂಡವನ್ನು ಪಾವತಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಅತ್ತ ಜಾರಿ ನಿರ್ದೇಶನಾಲಯದ ಮುಂದೆ ಮಂಡಿಯೂರಿ ಬಚಾವಾದರೂ ಇತ್ತ ಹಣ ತೊಡಗಿಸಿದವರಿಗೆ ವಂಚಿಸಿ ಬೆಂಗಳೂರು ನಗರದ ಕೆ.ಜಿ. ಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದವು.

ಆಂಬಿಡೆಂಟ್​ ಸಂಸ್ಥೆ ವಂಚನೆ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಜನಾರ್ದನ ರೆಡ್ಡಿ ಹೆಸರು ಆರೋಪಿಗಳ ಜತೆ ಥಳುಕುಹಾಕಿಕೊಂಡಿದ್ದು ಕಂಡಿತ್ತು. ವಿಚಾರಣೆ ನಡೆಸಿದಾಗ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಮುಚ್ಚಿಹಾಕಲು ಜನಾರ್ದನ ರೆಡ್ಡಿಗೆ ಹಣ ನೀಡಿದ್ದೆ ಎಂದು ಆರೋಪಿ ಹೇಳಿದ್ದ. ಈ ಜಾಡನ್ನು ಬೆನ್ನತ್ತಿದ ಸಿಸಿಬಿ, ಜನಾರ್ದನ ರೆಡ್ಡಿಗೆ ನೊಟೀಸ್​ ಜಾರಿ ಮಾಡಿತ್ತು. ನಂತರ ಸುದೀರ್ಘ ವಿಚಾರಣೆಯ ನಂತರ ಜನಾರ್ದನ ರೆಡ್ಡಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆದರೆ ಜೈಲು ಸೇರಿ ನಾಲ್ಕೇ ದಿನಗಳಲ್ಲಿ ಜನಾರ್ದನ ರೆಡ್ಡಿ ಜಾಮೀನು ಪಡೆದು ಆಚೆ ಬಂದಿದ್ದರು. ಜನಾರ್ದನ ರೆಡ್ಡಿ ತಮಗೆ ವಂಚನೆ ಮಾಡಿದ್ದಾರೆ ಎಂಬುದಾಗಿ ಫರೀದ್​ ಅಥವಾ ಅಫಾಕ್​ ಎಲ್ಲೂ ದೂರು ನೀಡಿಲ್ಲ. ಹೀಗಿರುವಾಗ ರೆಡ್ಡಿಯನ್ನು ಈ ಪ್ರಕರಣದಲ್ಲಿ ಬಂಧಿಸಿದ್ದು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗಿತ್ತು. ಹೀಗಾಗಿ ರೆಡ್ಡಿ ಅವರನ್ನು ಕೋರ್ಟ್, ಪ್ರಕರಣದಿಂದ ಕೈಬಿಟ್ಟಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us