ಪಟಾಕಿ ದಾಸ್ತಾನು ಮಳಿಗೆಗಳ ಪರಿಶೀಲನಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 03, 2023 | 3:11 PM

ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸ್ಪೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಅರ್ಜಿದಾರರ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ಹೇಳಿದೆ.

ಪಟಾಕಿ ದಾಸ್ತಾನು ಮಳಿಗೆಗಳ ಪರಿಶೀಲನಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ
ಹೈಕೋರ್ಟ್​
Follow us on

ಬೆಂಗಳೂರು, (ನವೆಂಬರ್ 03): ಅತ್ತಿಬೆಲೆ ಸಮೀಪ ಪಟಾಕಿ (firecracker)ದಾಸ್ತಾನು ಮಾಡುವಾಗ ನಡೆದ ದುರಂತದಲ್ಲಿ 14 ಜನರ ಸಾವಿನ ನಂತರ ಬೆಂಗಳೂರಿನಲ್ಲಿ ಪಟಾಕಿ ಮಾರಾಟದ ಮೇಲೆ ಸರ್ಕಾರ ಹಲವು ನಿರ್ಬಂಧ ವಿಧಿಸಿದೆ. ಹಲವೆಡೆ ಪಟಾಕಿ ದಾಸ್ತಾನು ಕೇಂದ್ರಗಳ‌ ಮೇಲೆ ದಾಳಿ ನಡೆಸಿದ ಕಂದಾಯ ಇಲಾಖೆ ಪಟಾಕಿ ಸಂಗ್ರಹಿಸಿದ್ದ ಹಲವು ದಾಸ್ತಾನುಗಳನ್ನು ಸೀಜ್ ಮಾಡಿದ್ದು, ಇದನ್ನು ಪ್ರಶ್ನಿಸಿ ಪಟಾಕಿ ಮಾರಾಟಗಾರರು ಹೈಕೋರ್ಟ್ (Karnataka High Court) ಮೆಟ್ಟಿಲೇರಿದೆ. ಇದೀಗ ಹೈಕೋರ್ಟ್ ಪಟಾಕಿ ಮಾರಾಟಗಾರರ ರಿಟ್ ಅರ್ಜಿ ವಿಚಾರಣೆ ನಡೆಸಿ, ಸ್ಪೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಅರ್ಜಿದಾರರ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ.

ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು (ನವೆಂಬರ್ 03) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಪಟಾಕಿ ದಾಸ್ತಾನಿಗೆ ಅನುಸರಿಸಿರುವ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಮನಿಸಬೇಕಿದೆ. ಇತ್ತೀಚೆಗೆ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಸ್ಪೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಅರ್ಜಿದಾರರ ದಾಸ್ತಾನು ಮಳಿಗೆಗಳ ತಪಾಸಣೆ ನಡೆಸಬೇಕು. ಸರ್ಕಾರ, ಸ್ಪೋಟಕ ನಿಯಂತ್ರಣಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು.‌ ದಾಸ್ತಾನು ಕೇಂದ್ರಗಳ ಸುರಕ್ಷತೆ ಬಗ್ಗೆ ನವೆಂಬರ್ 6 ರೊಳಗೆ ಪರಿಶೀಲನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ವರದಿ ಆಧರಿಸಿ ಹೈಕೋರ್ಟ್ ಮುಂದಿನ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ಬಾರಿ ದೀಪಾವಳಿ ಪಟಾಕಿ ಮಾರಾಟ, ಸಿಡಿಸಲು ಸರ್ಕಾರದಿಂದ ಕಟ್ಟುನಿಟ್ಟಿನ ಗೈಡ್ ಲೈನ್ಸ್​​​, ಇದರಂತೆ ನಡೆಯಬೇಕು

ತಾವರೆಕೆರೆ, ಅವಲಹಳ್ಳಿ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಪಟಾಕಿ ದಾಸ್ತಾನು ಮಳಿಗೆಗಳಿಗೆ ಬೀಗ ಜಡಿಯಲಾಗಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ತಿರುಮಲ ಟ್ರೇಡರ್ಸ್, ಶ್ರೀ ವಿಜಯ ಟ್ರೇಡರ್ಸ್ ಸೇರಿ ಹಲವು ಪಟಾಕಿ ದಾಸ್ತಾನುಗಾರರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು ಸರ್ಕಾರದ ಕ್ರಮದಿಂದ ಪಟಾಕಿ ವ್ಯಾಪಾರ ನಡೆಸುವ ತಮ್ಮ ಹಕ್ಕಿಗೆ ಧಕ್ಕೆಯಾಗಿದೆ. ಪಟಾಕಿ ಮಾರಾಟದ ಲೈಸೆನ್ಸ್ ಪಡೆದೇ‌ ಪಟಾಕಿ ಸಂಗ್ರಹಿಸಲಾಗಿದೆ. ದಾಸ್ತಾನು ಮಳಿಗೆಗಳಿಗೆ ಬೀಗ ಹಾಕಿರುವುದರಿಂದ ನಷ್ಟವುಂಟಾಗಿದೆ‌. ಹೀಗಾಗಿ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಗೆ ಮನವಿ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Fri, 3 November 23