ಹೈಕೋರ್ಟ್​​ನಲ್ಲಿ ಜಾತಿ ಗಣತಿ ಭವಿಷ್ಯ: ಇಂದಿನ ವಾದ ಪ್ರತಿವಾದ ಹೇಗಿತ್ತು?

ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ನಲ್ಲಿ (Karnataka High Court) ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ನೇತೃತ್ವದ ಪೀಠ ವಿಚಾರಣೆಯನ್ನ ನಾಳೆಗೆ ಮುಂದೂಡಿದೆ.

ಹೈಕೋರ್ಟ್​​ನಲ್ಲಿ ಜಾತಿ ಗಣತಿ ಭವಿಷ್ಯ: ಇಂದಿನ ವಾದ ಪ್ರತಿವಾದ ಹೇಗಿತ್ತು?
High Court
Updated By: ಪ್ರಸನ್ನ ಹೆಗಡೆ

Updated on: Sep 23, 2025 | 6:57 PM

ಬೆಂಗಳೂರು, (ಸೆಪ್ಟೆಂಬರ್​​ 23): ಕಾಂಗ್ರೆಸ್​ ನೇತೃತ್ವದ ಕರ್ನಾಟಕ ಸರ್ಕಾರ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ನಲ್ಲಿ (Karnataka High Court) ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ನೇತೃತ್ವದ ಪೀಠದಲ್ಲಿ ನಡೆಯಿತು. ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ಪೀಠ ಅರ್ಜಿ ವಿಚಾರಣೆಯನ್ನ ನಾಳೆಗೆ ( ಸೆಪ್ಟೆಂಬರ್​​ 24 ) ಮುಂದೂಡಿದೆ.

‘ರಾಜ್ಯ ಸರ್ಕಾರಕ್ಕೆ ಸರ್ವೆ ಅಧಿಕಾರವಿಲ್ಲ’

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ಕೆ.ನಾವದಗಿ,ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ.ರಾಜ್ಯದ ಎಲ್ಲಾ ಜನರ ಸರ್ವೆ ನಡೆಸಲು ಸರ್ಕಾರ ಆದೇಶಿಸಿದ್ದು, ಡಿಜಿಟಲ್ ಆ್ಯಪ್ ಮೂಲಕವೂ ಸರ್ವೆ ನಡೆಸಲಾಗುತ್ತಿದೆ. ಎಲ್ಲರೂ ಆಧಾರ್, ಮೊಬೈಲ್ ನಂಬರ್ ಕೊಡಬೇಕೆಂದು ಸೂಚಿಸಲಾಗಿದೆ. ಯಾವುದೇ ಕಾನೂನಿನ ಬಲವಿಲ್ಲದೇ ಸರ್ವೆ ನಡೆಸುತ್ತಿದ್ದಾರೆ ಎಂದು ಪೀಠದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಜಾತಿಗಳ ಮುಂದೆ ಕ್ರಿಶ್ಚಿಯನ್ ತೆಗೆದಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಬಿಜೆಪಿ ಆಗ್ರಹ 

 

‘ಕೇಂದ್ರ ಸರ್ಕಾರದ ವ್ಯಾಪ್ತಿಯ ಅಧಿಕಾರ ಚಲಾವಣೆ’

ಸರ್ಕಾರ ಸರ್ವೆ ಹೆಸರಿನಲ್ಲಿ ಜನಗಣತಿ(ಸೆನ್ಸಸ್) ಮಾಡುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರದ ವ್ಯಾಪ್ತಿಯ ಅಧಿಕಾರವನ್ನು ಚಲಾಯಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ರೀತಿಯ ಜನಗಣತಿ ಮಾಡುವ ಅಧಿಕಾರವಿಲ್ಲ. ಹೀಗಿದ್ದರೂ ಪ್ರತಿ ಜಾತಿಯ ಜನಸಂಖ್ಯೆಯನ್ನು ಗಣತಿ ಮಾಡುತ್ತಿದ್ದಾರೆ. ಚುನಾವಣೆಯ ಉದ್ದೇಶದಿಂದ ರಾಜ್ಯ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಪ್ರಬಲ ವಾದ ಮಂಡಿಸಿದ್ದಾರೆ.

‘ಗಣತಿ ಉದ್ದೇಶದ ಬಗ್ಗೆಯೇ ಅನುಮಾನ’

ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ಅಶೋಕ್​ ಹಾರನಹಳ್ಳಿ, ಕೇಂದ್ರ ಸರ್ಕಾರ ಈಗಾಗಲೇ 2027ರ ಮಾ.1ರಿಂದ ಜನಗಣತಿ ನಡೆಸುತ್ತಿದೆ. ಜನಗಣತಿಯ ಸಂದರ್ಭದಲ್ಲೇ ಜಾತಿ ಗಣತಿ ನಡೆಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಗಣತಿ ಉದ್ದೇಶದ ಬಗ್ಗೆ ಹಲವು ಅನುಮಾನಗಳಿವೆ. 2015ರಲ್ಲಿ ರಾಜ್ಯ ಸರ್ಕಾರ ಮಾಡಿದ ಸರ್ವೆ ಪ್ರಶ್ನಿಸಲಾಗಿತ್ತು ಮತ್ತು 150 ಕೋಟಿ ರೂ. ವೆಚ್ಚ ಮಾಡಿ ನಡೆಸಿರುವ ಆ ಸರ್ವೆ ವರದಿಯ ಸ್ಥಿತಿ ಏನಾಗಿದೆ ತಿಳಿದಿಲ್ಲ. ಹೀಗಿರುವಾಗ ಈಗ ಮತ್ತೆ 420 ಕೋಟಿ ಹಣ ವೆಚ್ಚ ಮಾಡಿ ಸರ್ವೆ ಮಾಡಲಾಗ್ತಿದೆ.1561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದ್ದು ಹೊಸ ಜಾತಿಗಳನ್ನ ಸರ್ಕಾರ ಸೃಷ್ಟಿ ಮಾಡ್ತಿದೆ. ಈ ರೀತಿಯ ಸರ್ವೆಯಿಂದ ಡಿಜಿಟಲ್ ಮಾಹಿತಿ ಸೋರಿಕೆ ಆತಂಕವನ್ನೂ ಅವರು ನ್ಯಾಯಾಲಯದ ಮುಂದೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯಕ್ಕೆ ಅಂಕಿ ಅಂಶ ಸಂಗ್ರಹದ ಅಧಿಕಾರ ಇಲ್ಲ’

ಅಂಕಿ ಅಂಶ ಸಂಗ್ರಹಕ್ಕೂ ಪ್ರತ್ಯೇಕ ಕಾಯ್ದೆ ಇದೆ. ಆ ಕಾಯ್ದೆಯಲ್ಲಿ ರಾಜ್ಯಕ್ಕೆ ಅಂಕಿ ಅಂಶ ಸಂಗ್ರಹದ ಅಧಿಕಾರ ನೀಡಲಾಗಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್​ ರೆಡ್ಡಿ ಪೀಠಕ್ಕೆ ತಿಳಿಸಿದ್ದಾರೆ. ಹಿಂದೆಂದೂ ಇತರೆ ಧರ್ಮದೊಂದಿಗೆ ಜಾತಿಯನ್ನು ಸೇರಿಸಲಾಗಿರಲಿಲ್ಲ. ಬಣಜಿಗ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬ್ರಾಹ್ಣಣ ಕ್ರಿಶ್ಚಿಯನ್, ಚೆರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್ ಹೀಗೆ 35ರಿಂದ 40 ಧರ್ಮ ಮಿಶ್ರಿತ ಜಾತಿಗಳನ್ನು ಗುರುತಿಸಿದ್ದಾರೆ. 2002ರ ಜಾತಿಗಳ ಅಧಿಸೂಚನೆಗೂ ಈಗಿನ ಜಾತಿಗಳ ಸಮೀಕ್ಷೆಗೂ ವ್ಯತ್ಯಾಸಗಳಿವೆ ಎಂದು ವಿವೇಕ್​ ರೆಡ್ಡಿ ವಾದಿಸಿದ್ದಾರೆ. ಇನ್ನು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎಸ್​.ಎಂ. ಚಂದ್ರಶೇಖರ್​ ಮತ್ತು ಶ್ರೀರಂಗ ಕೂಡ ಪ್ರಬಲ ವಾದ ಮಂಡಿಸಿದ್ರು.

ಸರ್ಕಾರದ ಪರವಾಗಿ ಅಭಿಷೇಕ್​ ಮನು ಸಿಂಘ್ವಿ ವಾದ

ಕರ್ನಾಟಕ ಸರ್ಕಾರದ ಪರವಾಗಿ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡಿಸಿದ್ದು, ಈಗ ನಡೆಸಲಾಗುತ್ತಿರುವುದು ಜಾತಿಗಣತಿಯಲ್ಲ ಎಂಬುದನ್ನು ಆರಂಭದಲ್ಲೇ ನ್ಯಾಯಾಲಯದ ಗಮನಕ್ಕೆ ತಂದರು. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೆ ಎಂದು ವಾದ ಮಂಡಿಸಿದ ಸಿಂಘ್ವಿ, ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆ ಮಾಡಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದ್ದು, ಮಧ್ಯಂತರ ತಡೆಯಾಜ್ಞೆ ನೀಡಬಾರದೆಂದು ವಾದಿಸಿದ್ರು. ಅಂಕಿ ಅಂಶ ಸಂಗ್ರಹಿಸಿ ಸರ್ಕಾರ ಯೋಜನೆಗಳನ್ನು ರೂಪಿಸಲಿದ್ದು ಇದಕ್ಕೆ ತಡೆ ನೀಡಿದರೆ ಸರ್ಕಾರದ ಅಧಿಕಾರವನ್ನೂ ತಡೆದಂತಾಗುತ್ತದೆ. ಕೇಂದ್ರ ಸರ್ಕಾರ ಮಾತ್ರ ಸೆನ್ಸಸ್ ನಡೆಸಬೇಕೆಂಬುದು ಸರಿಯಲ್ಲ.ಗಣರಾಜ್ಯ ಪರಿಕಲ್ಪನೆಗೆ ಈ ವಾದ ಒಪ್ಪತಕ್ಕದ್ದಲ್ಲ ಎಂದಿದ್ದಾರೆ.

‘ಸರ್ಕಾರ ಆಯ್ದು ಆಯ್ದು ಸರ್ವೆ ನಡೆಸಲ್ಲ’

ಸರ್ವೆ ಎಂದರೆ ಸಂಪೂರ್ಣ ಜನರನ್ನು ಒಳಗೊಳ್ಳಲಿದ್ದು, ಸರ್ಕಾರ ಆಯ್ದು ಆಯ್ದು ಸರ್ವೆ ನಡೆಸಲ್ಲ. ಹಿಂದುಳಿದ ವರ್ಗಗಗಳನ್ನು ಪತ್ತೆ ಹಚ್ಚಲು ಸಂಪೂರ್ಣ ಸರ್ವೆ ಅಗತ್ಯ. ಅಂಕಿ-ಅಂಶ ಸಂಗ್ರಹಿಸಿದೇ ಹಿಂದುಳಿದ ವರ್ಗ ಪತ್ತೆ ಹಚ್ಚುವುದು ಹೇಗೆ? ಸಂವಿಧಾನಕ್ಕೆ 105ನೇ ತಿದ್ದುಪಡಿ ಬಳಿಕ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂಪೂರ್ಣ ಜನರ ಜಾತಿ ಸರ್ವೆ ನೀತಿ ನಿರೂಪಣೆಯ ಭಾಗವಾಗಿದ್ದು, ದಂತ ಗೋಪುರದಲ್ಲಿ ಕುಳಿತು ಜಾತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಬಿಹಾರದಲ್ಲಿ ಕೂಡ ಜಾತಿ ಗಣತಿ ನಡೆಸಲಾಗಿದ್ದು,ಕೇಂದ್ರ ಸರ್ಕಾರದ ಜಾತಿ ಗಣತಿಗೆ ಕಾಯಬೇಕೆಂದಿಲ್ಲ. ಹಾಗಾದರೆ ರಾಜ್ಯದ ಆಡಳಿತ ದುರ್ಬಲವಾಗುತ್ತದೆ ಎಂದು ಅಭಿಷೇಕ್​ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.

Published On - 6:38 pm, Tue, 23 September 25