ಬೆಂಗಳೂರು: ಪ್ರತಿಭಟನೆಗಳಿಂದ ಜನಸಾಮಾನ್ಯರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಬರೆದ ಪತ್ರವನ್ನು ಆಧರಿಸಿ, ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಹೈಕೋರ್ಟ್, ಎಲ್ಲಾ ರಾಜಕೀಯ ಪಕ್ಷಗಳಿಗೂ ನೋಟಿಸ್ ಜಾರಿಗೊಳಿಸಿದೆ. ಜತೆಗೆ, ಬೆಂಗಳೂರು ಪೊಲೀಸ್ ಆಯುಕ್ತರಿಗೂ ನೋಟಿಸ್ ನೀಡಿದೆ.
ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎಂಬ ವರದಿ ಪಡೆದುಕೊಂಡಿದೆ. ಆದರೆ ಇಂತಹ ನಗರದಲ್ಲಿ ಈ ಸ್ಥಿತಿ ಬರುವುದು ಸರಿಯಲ್ಲ. ಎಲ್ಲಾ ನಾಗರಿಕರಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಪ್ರಜೆಗಳಿಗೆ ತೊಂದರೆ ಉಂಟುಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿಭಟನೆ, ರ‍್ಯಾಲಿಗಳಿಂದ ಸಂಚಾರ ದಟ್ಟಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಪತ್ರ ಬರೆದಿದ್ದರು. ಇದೀಗ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಪತ್ರ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲು ಮಾಡಲಾಗಿದೆ.
ನಗರದಲ್ಲಿ ನಡೆದಿತ್ತು ಸಾಲುಸಾಲು ಪ್ರತಿಭಟನೆಗಳು
ಬೆಂಗಳೂರು ನಗರದಲ್ಲಿ ಈಚೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಜನಾಂಗದ ಪ್ರತಿಭಟನೆಯೂ ಮುಂದುವರಿದಿದೆ. ರೈತ ಸಂಘಟನೆಗಳು ಮತ್ತು ಸಾರಿಗೆ ಸಿಬ್ಬಂದಿ ನಡೆಸಿದ್ದ ಹೋರಾಟಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ.
ಬೆಂಗಳೂರು ನಗರಕ್ಕೆ ಬಂದಿದ್ದ ಸುಮಾರು 25 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶೇಷಾದ್ರಿ ರಸ್ತೆ ಮಾರ್ಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ನಗರದ ಬಹುತೇಕ ಪ್ರತಿಭಟನೆಗಳು ಇದೇ ಮಾರ್ಗದಲ್ಲಿ ನಡೆಯುತ್ತವೆ ಎನ್ನುವುದು ಗಮನಾರ್ಹ ಸಂಗತಿ. ಪ್ರತಿಭಟನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿಚಾರಣೆ ನಡೆಸಲು ಹೈಕೋರ್ಟ್ ಮುಂದಾಗಿದೆ.
ಇದನ್ನೂ ಓದಿ: ಅವಹೇಳನಕಾರಿ ಟ್ವೀಟ್ ಪ್ರಕರಣ: ಕಂಗನಾ ರಣಾವತ್ಗೆ ಕರ್ನಾಟಕ ಹೈಕೋರ್ಟ್ನಲ್ಲಿ ಹಿನ್ನಡೆ!
ಕೋರ್ಟ್ ಕೊಠಡಿಯಲ್ಲಿ ವಕೀಲರು ಮಾಸ್ಕ್ ತೆಗೆದಿದ್ದಕ್ಕೆ ಅಹವಾಲು ಆಲಿಸಲ್ಲ ಎಂದ ಬಾಂಬೆ ಹೈಕೋರ್ಟ್
Published On - 9:03 pm, Fri, 5 March 21