ಕೋರ್ಟ್ ಕೊಠಡಿಯಲ್ಲಿ ವಕೀಲರು ಮಾಸ್ಕ್ ತೆಗೆದಿದ್ದಕ್ಕೆ ಅಹವಾಲು ಆಲಿಸಲ್ಲ ಎಂದ ಬಾಂಬೆ ಹೈಕೋರ್ಟ್
ಕೋರ್ಟ್ ಕೊಠಡಿಯಲ್ಲಿ ಅಹವಾಲು ಆಲಿಸುವಾಗ ವಕೀಲರು ಮಾಸ್ಕ್ ತೆಗೆದುಹಾಕಿದ್ದರಿಂದ ಬಾಂಬೆ ಹೈಕೋರ್ಟ್ನಲ್ಲಿ ಆ ಪ್ರಕರಣದ ಅಹವಾಲನ್ನು ಆಲಿಸಲು ನಿರಾಕರಿಸಿರುವ ಬಗ್ಗೆ ವರದಿ ಆಗಿದೆ.
ಮುಂಬೈ: ಕಕ್ಷಿದಾರರನ್ನು ಪ್ರತಿನಿಧಿಸುವ ವೇಳೆ ವಕೀಲರೊಬ್ಬರು ನ್ಯಾಯಾಲಯ ಕೊಠಡಿಯಲ್ಲಿ ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದುಹಾಕಿದ್ದಕ್ಕೆ ಪ್ರಕರಣದ ಅಹವಾಲು ಆಲಿಸುವುದನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಫೆಬ್ರವರಿ 22ನೇ ತಾರೀಕಿನಂದು ನಡೆದ ಘಟನೆಯ ಈ ಆದೇಶವು ಶನಿವಾರದಂದು ಲಭ್ಯವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಒಬ್ಬರೇ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ನ್ಯಾ. ಪೃಥ್ವಿರಾಜ್ ಚವ್ಹಾಣ್ ಫೆಬ್ರವರಿ 22ರಂದು ಅಹವಾಲು ಆಲಿಸುತ್ತಿದ್ದರು. ಆ ವೇಳೆ ಕಕ್ಷಿದಾರರ ಪರ ವಕೀಲರು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನ್ಯಾಯಾಲಯದ ಕೊಠಡಿಯಲ್ಲಿ ಮಾಸ್ಕ್ ತೆಗೆದುಹಾಕಿದ್ದರು.
ವ್ಯಕ್ತಿಗಳ ಉಪಸ್ಥಿತಿಯಲ್ಲೇ ಪ್ರಕರಣದ ಅಹವಾಲು ಕೇಳುವ ವೇಳೆಯಲ್ಲಿ ಪಾಲಿಸಲೇಬೇಕೆಂದು ಹೈಕೋರ್ಟ್ ರೂಪಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (SOPs) ಬಗ್ಗೆ ನ್ಯಾಯಮೂರ್ತಿ ಚವ್ಹಾಣ್ ಮಾತನಾಡಿ, ಎಲ್ಲ ಸಮಯದಲ್ಲಿ ಮಾಸ್ಕ್ ಧರಿಸಿರುವುದು ಕಡ್ಡಾಯ ಎಂದಿದ್ದರು. ಆ ನಂತರ ಇದೇ ಪ್ರಕರಣದ ವಿಚಾರಣೆ ಬಂದಾಗ ಅದರ ಅಹವಾಲು ಆಲಿಸುವುದಕ್ಕೆ ನ್ಯಾಯಮೂರ್ತಿ ಚವ್ಹಾಣ್ ನಿರಾಕರಿಸಿದ್ದಾರೆ. “ಬೋರ್ಡ್ನಿಂದ ಈ ವಿಷಯ ತೆಗೆಯಬೇಕು,” ಎಂದು ಆದೇಶ ಹೇಳಿದೆ.
ಸರದಿ ಬರುವ ತನಕ ಇತರರು ಕಾಯುತ್ತಿರಬೇಕು: ನ್ಯಾ. ಚವ್ಹಾಣ್ ಅವರು ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಿಗೆ ಮಾತ್ರ ನ್ಯಾಯಾಲಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಇತರ ವಕೀಲರು ಮತ್ತು ಅವರ ಕಕ್ಷಿದಾರರು ತಮ್ಮ ಸರದಿಯ ಸಂಖ್ಯೆ ಬರುವ ತನಕ ಮತ್ತೊಂದು ಕೊಠಡಿಯಲ್ಲಿ ಕಾಯಬೇಕಾಗುತ್ತದೆ. ಪುಣೆ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಹೈಕೋರ್ಟ್ ಮತ್ತು ಇತರ ಎಲ್ಲ ಸಹವರ್ತಿ ಕೋರ್ಟ್ಗಳಲ್ಲಿ ಎಂಟು ತಿಂಗಳ ನಂತರ ವ್ಯಕ್ತಿಯ ಸಮ್ಮುಖದಲ್ಲೇ ಅಹವಾಲು ಆಲಿಸುವುದಕ್ಕೆ ಆರಂಭಿಸಲಾಗಿದೆ.
ಕೊರೊನಾ ಆರಂಭವಾದಾಗಿನಿಂದ ಕೋರ್ಟ್ಗಳು ಆನ್ಲೈನ್ನಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಹವಾಲು ಆಲಿಸುತ್ತಿದ್ದವು. ಫೆಬ್ರವರಿ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಪೆಬ್ರವರಿ 26ಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು 21,38,154 ದಾಖಲಾಗಿದ್ದವು. ಆ ಪೈಕಿ ಮುಂಬೈನಲ್ಲೇ 3,23,879 ಪ್ರಕರಣಗಳು ದಾಖಲಾಗಿವೆ.