ಪ್ರಾದೇಶಿಕ ಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಆಯ್ಕೆಮಾಡಿಕೊಳ್ಳುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ!

|

Updated on: Jul 05, 2021 | 8:10 PM

2019-20 ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂಗ್ಲಿಷ್​ಗಿಂತ ಹೆಚ್ಚು ಮಾತೃಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಆಯ್ಕೆಮಾಡಿಕೊಳ್ಳಲು ಆದ್ಯತೆ ನೀಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

ಪ್ರಾದೇಶಿಕ ಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಆಯ್ಕೆಮಾಡಿಕೊಳ್ಳುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದೇಶದೆಲ್ಲೆಡೆ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಲು ತವಕಿಸುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆ ಕಡೆ ಕೆಲಸ ಸಿಗುತ್ತದೆ, ವಿದೇಶಗಳಿಗೆ ಹೋಗುವ ಅವಕಾಶ ಸಿಗುತ್ತದೆ ಅಂತ ಭಾವಿಸಿ ಅವರನ್ನು ಇಂಗ್ಲಿಷ್ ಸ್ಕೂಲ್​ಗಳಿಗೆ ಸೇರಿಸುತ್ತಾರೆ. ಅಂಥ ಶಾಲೆಗಳಲ್ಲಿ ಶಿಕ್ಷಣ ದುಬಾರಿಯಾದರೂ ಸಾಲ-ಸೋಲ ಮಾಡಿ ದಾಖಲಾತಿ ಪಡೆಯುತ್ತಾರೆ. ಕರ್ನಾಟಕದ ಪೋಷಕರಲ್ಲೂ ಇಂಥ ಪ್ರವೃತ್ತಿ ಇದೆಯಾದರೂ ಇತ್ತೀಚಿಗೆ ಪ್ರಕಟವಾಗಿರುವ ಒಂದು ವರದಿ ಕನ್ನಡಿಗರಲ್ಲಿ ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ. ಈ ವರದಿಯ ಪ್ರಕಾರ ಕರ್ನಾಟಕದಲ್ಲಿ ಈಗಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕನ್ನಡವನ್ನೇ (ಪ್ರಾದೇಶಿಕ) ಶಿಕ್ಷಣ ಮಾಧ್ಯಮವನ್ನಾಗಿ ತೆಗೆದುಕೊಳ್ಳಲು ಇಷ್ಟಪಡುತ್ತಾರೆ.

ಭಾರತದಲ್ಲಿ ಶಾಲಾ ಶಿಕ್ಷಣ ಟ್ರೆಂಡನ್ನು ವಿಶ್ಲೇಷಣೆ ಮಾಡುವ ಯುನಿಫೈಡ್ ಡಿಸ್ಟ್ರಿಕ್ಟ್​ ಇನ್ಫಾರ್ಮೇಷನ್ ಸಿಸ್ಟಂನ (ಯುಡಿಐಎಸ್​ಇ) ವರದಿಯೊಂದರ ಪ್ರಕಾರ ಕರ್ನಾಟಕದಲ್ಲಿ ಶೇಕಡಾ 53.5 ರಷ್ಟು ವಿದ್ಯಾರ್ಥಿಗಳು ಕನ್ನಡವನ್ನೇ ಶಿಕ್ಷಣ ಮಾಧ್ಯವನ್ನಾಗಿ ಅಯ್ಕೆ ಮಾಡಿಕೊಳ್ಳೊತ್ತಾರೆ. 2019-20 ಶೈಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 20 ರಷ್ಟು ಹೆಚ್ಚಳ ಕಂಡುಬಂದಾಗ್ಯೂ ಕನ್ನಡ ಮಾಧ್ಯಮದಲ್ಲಿ ಓದಲಿಚ್ಛಿಸುವವರ ಸಂಖ್ಯೆ ಶೇಕಡಾ 53.5 ಇದೆ.

ಹಾಗಾಗಿ, 2019-20 ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂಗ್ಲಿಷ್​ಗಿಂತ ಹೆಚ್ಚು ಮಾತೃಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಆಯ್ಕೆಮಾಡಿಕೊಳ್ಳಲು ಆದ್ಯತೆ ನೀಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

ಭಾರತದ ಎಲ್ಲಾ ರಾಜ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು ಇಲ್ಲಿ ಶೇಕಡಾ 89.9 ರಷ್ಟು ವಿದ್ಯಾರ್ಥಿಗಳು ಬಂಗಾಳೀ-ಮಾಧ್ಯಮದ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಾರೆ.

ದಕ್ಷಿಣ ಭಾರತದ ರಾಜ್ಯಗಳ ವಿಷಯಕ್ಕೆ ಬಂದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಶೇಕಡಾ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ತೆಲುಗು ಮಾಧ್ಯಮದ ಶಾಲೆಗಳಲ್ಲಿ ಓದಲು ಇಷ್ಟಪಟ್ಟರೆ, ಕೇರಳದಲ್ಲಿ ಶೇಕಡಾ 34.8 ವಿದ್ಯಾರ್ಥಿಗಳಿ ಮಲೆಯಾಳಂ ಅನ್ನು ಕಲಿಕಾ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಏತನ್ಮಧ್ಯೆ, ತಮಿಳುನಾಡಿನಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಲಿಚ್ಛಿಸುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ವರದಿಯ ಪ್ರಕಾರ 2016 ರಲ್ಲಿ ತಮಿಳು ಭಾಷೆಯನ್ನು ಕಲಿಕಾ ಮಾಧ್ಯಮವನ್ನಾಗಿ ತೆಗೆದುಕೊಂಡ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 57.7 ರಷ್ಟಿದ್ದರೆ, 2019-20 ರ ಶೈಕ್ಷಣಿಕ ವರ್ಷದಲ್ಲಿ ಅದು ಶೇಕಡಾ 42.6 ಕ್ಕೆ ಇಳಿದಿದೆ.

ಹಿಂದೆ, 2018 ರಲ್ಲಿ ಹೆಚ್​ ಡಿ ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಬಾಷೆಯನ್ನು ಕಲಿಕಾ ಮಾಧ್ಯಮವನ್ನಾಗಿ ಶುರುಮಾಡುವ ಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಲೋಕದ ವಿದ್ವಾಂಸರು ತೀವ್ರವಾಗಿ ಖಂಡಿಸಿದ್ದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕುಮಾರ ಸ್ವಾಮಿಯವರು ಅಂಥ ಕ್ರಮ ಜಾರಿಗೊಳಿಸಲು ಮುಂದಾಗಿದ್ದರು.

ತಮ್ಮ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಕುಮಾರ ಸ್ವಾಮಿಯವರ ಸರ್ಕಾರ ನಿರ್ಧಾರವನ್ನು ಬದಲಿಸಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡದೆ ಅದನ್ನು ಒಂದು ಭಾಷೆಯನ್ನಾಗಿ ಕಲಿಸಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Amazon Kannada Insult: ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನ ಪ್ರಕರಣ; ಅಮೆಜಾನ್ ವಿರುದ್ಧ ಕಾನೂನು ಕ್ರಮ: ಸಚಿವ ಅರವಿಂದ ಲಿಂಬಾವಳಿ

ಇದನ್ನೂ ಓದಿ: Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್​; ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದ ಸರ್ಚ್​ ಎಂಜಿನ್