ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧ ಪ್ರಮಾಣ ಕಡಿಮೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್
ವಿಧಾನಸಭೆಯಲ್ಲಿ ವಿಪಕ್ಷಗಳ ಕಾನೂನು ಸುವ್ಯವಸ್ಥೆ ಆರೋಪಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ. ತಮ್ಮ ಅವಧಿಯಲ್ಲಿ ಕೊಲೆ ಪ್ರಕರಣಗಳು ಇಳಿಕೆಯಾಗಿವೆ ಎಂದ ಅವರು, ಹಿಂದಿನ ಬಿಜೆಪಿ ಸರ್ಕಾರಗಳ ಅವಧಿಯ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದರು. ಮಾದಕ ವಸ್ತು ಜಪ್ತಿ ಹಾಗೂ ಅಕ್ರಮ ಬಾಂಗ್ಲಾದೇಶಿ ವಲಸಿಗರ ಗಡೀಪಾರು ಕುರಿತು ಸರ್ಕಾರ ಕೈಗೊಂಡ ಕ್ರಮಗಳ ವಿವರ ನೀಡಿದರು.

ಬೆಂಗಳೂರು, ಫೆ.5: ವಿಧಾನ ಸಭೆ ಕಲಾಪದಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಭಾರೀ ಗದ್ದಲಗಳು ನಡೆಯುತ್ತಿದೆ, ವಿಶೇಷ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿದೆ. ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ (G. Parameshwara) ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪವನ್ನು ತಿರಸ್ಕರಿಸಿದ ಅವರು, ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಪರಾಧ ಅಂಕಿಅಂಶಗಳು, ಮಾದಕವಸ್ತು ವಶಪಡಿಸಿಕೊಳ್ಳುವ ದತ್ತಾಂಶ ಮತ್ತು ಅಕ್ರಮ ವಲಸಿಗರ ಗಡೀಪಾರು ವಿವರಗಳನ್ನು ಸದನದ ಮುಂದೆ ಇಟ್ಟಿದ್ದಾರೆ.
ಇಬ್ಬರೂ ಮಾಜಿ ಗೃಹ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿತ್ತು ಎಂಬುದನ್ನು ಮರೆತಂತೆ ಕಾಣುತ್ತದೆ. ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ ಪರಮೇಶ್ವರ, ಅಶೋಕ ಗೃಹ ಸಚಿವರಾಗಿದ್ದ 2011 ಮತ್ತು 2013 ರ ನಡುವೆ ರಾಜ್ಯವು 4,121 ಕೊಲೆಗಳು, 582 NDPS ಪ್ರಕರಣಗಳು ಮತ್ತು 995 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ. ಬಸವರಾಜ ಬೊಮ್ಮಾಯಿ (2019–20) ಅವರ ಅವಧಿಯಲ್ಲಿ, ಕೊಲೆಗಳು 2,554, NDPS ಪ್ರಕರಣಗಳು 8,317 ಮತ್ತು ಸೈಬರ್ ಅಪರಾಧ ಪ್ರಕರಣಗಳು 19,157 ದಾಖಲಾಗಿವೆ. ಆರಗ ಜ್ಞಾನೇಂದ್ರ ಅವರ ಅವಧಿಯಲ್ಲಿ, 2,417 ಕೊಲೆಗಳು ಮತ್ತು 24,486 ಸೈಬರ್ ಅಪರಾಧ ಪ್ರಕರಣಗಳು ನಡೆದಿವೆ.
ಇದಕ್ಕೆ ವ್ಯತಿರಿಕ್ತವಾಗಿ, ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ, ಕೊಲೆಗಳು 1,322 ಕ್ಕೆ ಇಳಿದಿವೆ, ನಂತರ 1,308 ಮತ್ತು 1,131 ಕ್ಕೆ ಇಳಿದಿವೆ. ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳು ಹೆಚ್ಚುತ್ತಿಲ್ಲ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರವು ಮಾದಕ ವಸ್ತುಗಳ ಪಿಡುಗಿನ ವಿರುದ್ಧ ಕೂಡ ಹೋರಾಡುತ್ತಿದೆ. ಇದರ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. 2023 ರಲ್ಲಿ 133 ಕೋಟಿ ರೂ. ಮೌಲ್ಯದ 10,630 ಕೆಜಿ ಗಾಂಜಾ, 2024 ರಲ್ಲಿ 264 ಕೋಟಿ ರೂ. ಮೌಲ್ಯದ 6,136 ಕೆಜಿ ಮತ್ತು 2025 ರಲ್ಲಿ 308 ಕೋಟಿ ರೂ. ಮೌಲ್ಯದ 6,219 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಸದನದ ಮುಂದೆ ವಿವರಣೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ:ನಾನು ಜೀವನದ ಕೊನೆಕಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ದೇವೇಗೌಡ
ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆಯೂ ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆ ಕರ್ನಾಟಕದಲ್ಲಿ ಮಾತ್ರವಲ್ಲ, ಪೂರ್ವ ಗಡಿಯ ಮೂಲಕ, ವಿಶೇಷವಾಗಿ ಕೋಲ್ಕತ್ತಾದ ಮೂಲಕ ಪ್ರವೇಶಿಸುತ್ತಾರೆ. ಗಡಿಗಳನ್ನು ಕಾಪಾಡುವ ಜವಾಬ್ದಾರಿ ಯಾರದ್ದು? ಎಂದು ಕೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರವು ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಿದೆ. 2021ರಲ್ಲಿ 15 ಜನರನ್ನು ಗಡೀಪಾರು ಮಾಡಲಾಯಿತು. 2022ರಲ್ಲಿ, 21 ಜನ, 2024ರಲ್ಲಿ 68 ಜನ, 2025ರಲ್ಲಿ 85 ಜನ, ಒಟ್ಟು 196 ಜನರನ್ನು ಗಡೀಪಾರು ಮಾಡಲಾಗಿದೆ. ಇನ್ನು 370 ಜನರನ್ನು ಗಡೀಪಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಬೆಂಗಳೂರಿನಂತಹ ಜಿಲ್ಲೆಗಳಲ್ಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
