ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ (ಸೆ 21) ಗೃಹ ಸಚಿವ ಆರಗ ಜ್ಞಾನೇಂದ್ರ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ವಿಧೇಯಕ’ವನ್ನು ಸಣ್ಣ ತಿದ್ದುಪಡಿಯೊಂದಿಗೆ ಮತ್ತೊಮ್ಮೆ ಮಂಡಿಸಿದರು. ಒಂದು ವಾರದ ಹಿಂದಷ್ಟೇ (ಸೆ 15) ವಿಧಾನ ಪರಿಷತ್ನಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ವಿಧಾನಸಭೆಯು ಸಹಮತ ಸೂಚಿಸಿತು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯು ವಿಧೇಯಕವನ್ನು ಅನುಮೋದಿಸಿತ್ತು. ಆದರೆ ಕಳೆದ ವರ್ಷ ವಿಧಾನ ಪರಿಷತ್ನಲ್ಲಿ ಸಂಖ್ಯಾ ಬಲ ಕಡಿಮೆಯಿದ್ದ ಕಾರಣ ವಿಧೇಯಕ ಮಂಡಿಸಲು ಸರ್ಕಾರವೇ ಹಿಂಜರಿದಿತ್ತು. ಇದೀಗ ಸಂಖ್ಯಾಬಲದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ ನಂತರ ವಿಧಾನ ಪರಿಷತ್ನಲ್ಲಿಯೂ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿದೆ.
ವಿಧಾನಸಭೆಯಲ್ಲಿ ನಿನ್ನೆ (ಸೆ 21) ವಿಧೇಯಕ ಮಂಡಿಸಿ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಕಳೆದ ಮೇ 17, 2022ರಿಂದ ಸುಗ್ರೀವಾಜ್ಞೆಯ ಬಲದೊಂದಿಗೆ ಮತಾಂತರ ನಿಷೇಧ ಕಾನೂನು ರಾಜ್ಯದಲ್ಲಿ ಚಾಲ್ತಿಗೆ ಬಂದಿದೆ. ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ ನಂತರ ಪೂರ್ವಾನ್ವಯವಾಗುವಂತೆ ಈ ಕಾನೂನು ಕಳೆದ ಮೇ ತಿಂಗಳಿನಿಂದಲೇ ಜಾರಿಯಲ್ಲಿರುತ್ತದೆ’ ಎಂದು ಹೇಳಿದ್ದರು. ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದ್ದರು. ಆದರೆ ಮಸೂದೆಯು ಸದನದ ಅಂಗೀಕಾರ ಪಡೆದುಕೊಂಡಿತು.
ಮುಖ್ಯಾಂಶಗಳು
ಒಟ್ಟು 14 ಸೆಕ್ಷನ್ಗಳಿರುವ ಈ ಕಾಯ್ದೆಯನ್ನು ಜನಸಾಮಾನ್ಯರ ಭಾಷೆಯಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ಎಂದು ಕರೆಯಲಾಗಿದೆ. ಈ ಕಾಯ್ದೆಯ ಮುಖ್ಯ ಅಂಶಗಳು ಹೀಗಿವೆ……
- ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
- ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು
- ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು
- ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು
- ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು
- ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು
- ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು
- ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧಿಸಿದ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು
- ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು
ಇವೆಲ್ಲಾ ಅಪರಾಧ
- ಮತಾಂತರಕ್ಕಾಗಿ ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಮಾಡುವುದು
- ಮತಾಂತರಕ್ಕಾಗಿ ಆಮಿಷ, ಆಕರ್ಷಣೆ ಹಾಗೂ ಮದುವೆಯನ್ನು ಬಳಸಿಕೊಳ್ಳುವುದು
ಯಾರು ದೂರು ಕೊಡಬಹುದು?
ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ದೂರು ಕೊಡಬಹುದಾಗಿದೆ.
ಶಿಕ್ಷೆಯ ಪ್ರಮಾಣ
- ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.
- ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನ ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ.
ಪ್ರತಿಪಕ್ಷಗಳ ತಕರಾರುಗಳೇನು?
- ಮತ್ತಿತರ ಸಂಸ್ಥೆಗಳು: ಕಾಯ್ದೆಯ ಸೆಕ್ಷನ್ (1) (f) ಎಂಬಲ್ಲಿ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (NGO) ಹಾಗೂ ಮತ್ತಿತರ ಸಂಸ್ಥೆಗಳು ಎಂದು ಉಲ್ಲೇಖಿಸಲಾಗಿದೆ. ಈ ಪೈಕಿ ಮತ್ತಿತರ ಸಂಸ್ಥೆಗಳ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಅಲ್ಲದೆ ನಿರ್ದಿಷ್ಟ ಧರ್ಮದಲ್ಲಿ ನೀರು ಕುಡಿಸಿದರೂ (ಹೋಲಿ ವಾಟರ್) ಮತಾಂತರವಾದಂತೆ ಎಂಬ ನಂಬಿಕೆ ಇದೆ. ಇಂತಹ ನಂಬಿಕಗಳನ್ನೇ ಆಧಾರವಾಗಿಟ್ಟುಕೊಂಡು ಸಂಸ್ಥೆಗಳನ್ನ ಗುರಿಯಾಗಿಸಬಹುದು ಎಂಬ ಆತಂಕವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
- ಸೆಕ್ಷನ್ 3ರಲ್ಲಿ ಅಪರಾಧದ ವಿವರಣೆ: ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳು ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಮದುವೆ ಎಂಬ ಪದ ಸೇರಿಸಿರುವುದಕ್ಕೆ ತೀವ್ರ ಅಕ್ಷೇಪಣೆ ಇದೆ. ಸಹಜ ವಿವಾಹವನ್ನೂ ಮತಾಂತರವೆಂದು ಪರಿಗಣಿಸಿ ಶಿಕ್ಷಿಸಬಹುದಾಗಿದೆ. ಹೀಗಾಗಿ ಬಲವಂತದ ಮದುವೆಯಾಗಿದ್ದರೆ ಮಾತ್ರ ತಪ್ಪು. ಮದುವೆ ಎಂಬ ಪದ ಸೇರಿಸಿ ನಿರ್ದಿಷ್ಟ ಸಮುದಾಯವನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಆರೋಪ.
- ದೂರು ನೀಡುವವರ ವಿವರ: ವಿಧೇಯಕದ ಸೆಕ್ಷನ್ 4ರಡಿ ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ದೂರು ನೀಡಬಹುದಾಗಿದೆ. ಅಂತರಧರ್ಮೀಯ ವಿವಾಹಗಳಲ್ಲಿ ಕೌಟುಂಬಿಕ ಅಸಮಾಧಾನ ಕೂಡ ದೂರಿಗೆ ಕಾರಣವಾಗಬಹುದು. ಗಂಡು ಹೆಣ್ಣಿಗೆ ಒಪ್ಪಿಗೆ ಇದ್ದರೂ ಕುಟುಂಬದ ಸದಸ್ಯರ ಆಕ್ಷೇಪ ಮತಾಂತರ ಆರೋಪಕ್ಕೆ ಕಾರಣವಾಗಬಹುದು. ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಬಹುದು ಎಂಬ ಆತಂಕ ಪ್ರತಿಪಕ್ಷಗಳದು.
- ನಿಯಮಬಾಹಿರ ಮತಾಂತರ ವಿಧೇಯಕದ ಸೆಕ್ಷನ್ 5ರಲ್ಲಿ ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನು ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3ರಿಂದ 10 ವರ್ಷದವರೆಗೆ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ಎಂಬ ನಿಯಮವಿದೆ. ಇತರರನ್ನು ಮತಾಂತರ ಮಾಡಿದರೆ ಕೇವಲ 5 ವರ್ಷದವರೆಗೆ ಶಿಕ್ಷೆ ವಿಧಿಸಲಾಗಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನೇ ಏಕೆ ಟಾರ್ಗೇಟ್ ಮಾಡಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆ. ಈ ವರ್ಗಗಳ ಪ್ರಬುದ್ಧತೆ, ಪ್ರಜ್ಞೆ ಮತ್ತು ವಿವೇಚನೆಯನ್ನು ಸರ್ಕಾರ ಪ್ರಶ್ನೆ ಮಾಡುತ್ತಿದೆಯೇ? ಈ ವರ್ಗದವರ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನವನ್ನು ಕಸಿದುಕೊಳ್ಳುವ ಹುನ್ನಾರವೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.
- ವಿಧೇಯಕದ ಸೆಕ್ಷನ್ 8 (1) ಹಾಗೂ (2) ಅಡಿ ಮತಾಂತರ ಅಗಬಯಸುವ ವ್ಯಕ್ತಿಗಳು 60 ದಿನಗಳ ಮೊದಲು ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗಳೆದುರು ಫಾರಂ 1 ಭರ್ತಿ ಮಾಡಿ ಮಾಹಿತಿ ನೀಡಬೇಕಿದೆ. ಅದೇ ರೀತಿ ಮತಾಂತರ ಮಾಡಿಸುವ ವ್ಯಕ್ತಿಯೂ ಒಂದು ತಿಂಗಳು ಮೊದಲು ಫಾರ್ಮ್ 2 ಅನ್ನು ಭರ್ತಿ ಮಾಡಿ ಮಾಹಿತಿ ನೀಡತಕ್ಕದ್ದು ಎಂಬ ನಿಯಮವಿದೆ. ಇಷ್ಟು ದೀರ್ಘ ಅವಧಿ ಏಕೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆ.
- ಅರ್ಜಿ ಸಲ್ಲಿಸಿದ ಬಳಿಕ ಮತಾಂತರವಾದ ಕೆಲ ದಿನಗಳ ಬಳಿಕ ಗಂಡು ಹೆಣ್ಣಿನ ನಡುವೆ ಅಥವಾ ಕುಟುಂಬದ ನಡುವೆ ವೈಮನಸ್ಸು ಉಂಟಾಗಿ ದೂರು ನೀಡಿದರೆ ಕಾಯ್ದೆಯ ದುರುಪಯೋಗವಾಬಹುದು. ಅಲ್ಲದೇ ಮತಾಂತರ ಮಾಡಿಸಿದ ವ್ಯಕ್ತಿಗೂ ಸಹ ಸಮಸ್ಯೆ ಆಗಬಹುದು ಎಂಬುದು ಪ್ರತಿಪಕ್ಷಗಳ ಆತಂಕ.
ಮತಾಂತರ ನಿಷೇಧ ವಿಧೇಯಕದ ಪೂರ್ಣ ಮೂಲಪಠ್ಯ ಓದಲು ಇಲ್ಲಿ ಕ್ಲಿಕ್ ಮಾಡಿ