ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ 19 ಎರಡನೇ ಅಲೆ ಉಲ್ಬಣಗೊಂಡಿರುವ ಬೆನ್ನಲ್ಲೇ ಲಸಿಕೆಯ ಕೊರತೆ ತಲೆದೋರಿದೆ. ರಾಜ್ಯದ ಹಲವೆಡೆ ಎರಡನೇ ಡೋಸ್ ಪಡೆಯುವವರಿಗೂ ಲಸಿಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ 3 ದಿನಗಳ ಕಾಲ ಲಸಿಕೆ ಸಿಗುವುದೇ ಅನುಮಾನ ಎನ್ನಲಾಗುತ್ತಿದೆ. ಲಸಿಕೆ ಪೂರೈಸುವಂತೆ ತಯಾರಿಕಾ ಕಂಪನಿಗಳಿಗೆ ಸರ್ಕಾರದಿಂದ ಬೇಡಿಕೆ ಸಲ್ಲಿಸಲಾಗಿದ್ದರೂ ಕೋಟಿ ಲೆಕ್ಕದಲ್ಲಿ ಬೇಡಿಕೆ ಇಟ್ಟರೆ ಲಕ್ಷ ಲೆಕ್ಕದಲ್ಲಿ ಪೂರೈಕೆ ಆಗುತ್ತಿದೆ. ಹೀಗಾಗಿ ಇನ್ನೂ ಮೂರು ದಿನಗಳ ಕಾಲ ಲಸಿಕೆ ಸಿಗುವುದೇ ಅನುಮಾನವಾಗಿದ್ದು, 3 ದಿನದ ಬಳಿಕ ಲಸಿಕೆ ಸಿಕ್ಕರೂ ಕೇವಲ 2ನೇ ಡೋಸ್ ಪಡೆಯುವವರಿಗಷ್ಟೇ ಸಿಗಬಹುದೇ ವಿನಃ ಎಲ್ಲರಿಗೂ ಲಭ್ಯವಾಗುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.
ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದೇ ಇರುವುದು ಕೊರತೆಗೆ ಕಾರಣವಾಗಿದ್ದು, ಮೇ 8ರಂದು 3.5 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬಂದಿದೆ. ಇನ್ನು ಮೇ 14ರ ಬಳಿಕ ಲಸಿಕೆ ಪೂರೈಸುವುದಾಗಿ ಎರಡು ಲಸಿಕಾ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿವೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ಹಂಚಿಕೆ ಮಾಡಿದಷ್ಟು ವ್ಯಾಕ್ಸಿನ್ ಪೂರೈಸುವುದಾಗಿ ಕಂಪನಿಗಳು ಹೇಳುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.
ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಎಲ್ಲ ಪ್ರಕ್ರಿಯೆ ಮುಗಿಸಿದೆ. ಆದರೆ ಭಾರತ್ ಬಯೋಟೆಕ್ ಹಾಗೂ ಸೆರಮ್ ಇನಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗಳಿಂದಲೇ ಪೂರೈಕೆಯಾಗುತ್ತಿಲ್ಲ. ಕೋಟಿ ಲೆಕ್ಕದಲ್ಲಿ ಕೇಳಿದರೆ ಕೇವಲ ಲಕ್ಷ ಡೋಸ್ ಲೆಕ್ಕದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದೀಗ ಎರಡೂ ಕಂಪನಿಗಳು ಮೇ 14ರ ನಂತರ ಲಸಿಕೆ ಪೂರೈಸುವುದಾಗಿ ಹೇಳುತ್ತಿದ್ದು, ರಾಜ್ಯ ಸರ್ಕಾರ ಕೊವಿಶೀಲ್ಡ್ ಲಸಿಕೆಯನ್ನು ಹೆಚ್ಚು ಖರೀದಿಸಲು ನಿರ್ಧರಿಸಿದೆ. ಆದರೆ, ಈ ಖರೀದಿಗೂ ಕೇಂದ್ರ ಸರ್ಕಾರದ ನಿರ್ಧಾರ ಅಡ್ಡಿಯಾಗಿದ್ದು, ಕೇಂದ್ರ ಸರ್ಕಾರ ಹಂಚಿಕೆ ಮಾಡಿದಷ್ಟೇ ಲಸಿಕೆ ಪೂರೈಸುವುದಾಗಿ ಕಂಪನಿಗಳು ಹೇಳುತ್ತಿವೆ ಎಂಬ ಅಸಮಾಧಾನದ ಮಾತುಗಳು ಹೊರಬಿದ್ದಿವೆ.
ನಮ್ಮ ವಿರುದ್ಧ ಕೆಲ ರಾಜ್ಯಗಳು ಸುಮ್ಮನೆ ಆರೋಪ ಮಾಡುತ್ತಿವೆ: ಭಾರತ್ ಬಯೋಟೆಕ್
ಇದರ ಬೆನ್ನಲ್ಲೇ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್ ಟ್ವೀಟ್ ಮಾಡಿದ್ದು, ತಮ್ಮ ಬಗ್ಗೆ ಆರೋಪ ಹೊರಿಸುತ್ತಿರುವ ರಾಜ್ಯಗಳ ಬಗ್ಗೆ ಅಸಮಾಧಾನಗೊಂಡಿದೆ. ಕೊವ್ಯಾಕ್ಸಿನ್ ಪೂರೈಕೆಯನ್ನು ಸೂಕ್ತ ರೀತಿಯಲ್ಲಿ ಮಾಡಿದ್ದೇವೆ 18 ರಾಜ್ಯಗಳಿಗೆ ಕೊವ್ಯಾಕ್ಸಿನ್ ಡೋಸ್ ಪೂರೈಕೆ ಮಾಡಲಾಗಿದೆ. ಮೇ 10ರಂದೇ ಕೊವ್ಯಾಕ್ಸಿನ್ ಲಸಿಕೆಯನ್ನು ಇಲ್ಲಿಂದ ಕಳುಹಿಸಿಕೊಟ್ಟಿದ್ದೇವೆ. ಆದರೆ ಹಲವು ರಾಜ್ಯಗಳು ನಮ್ಮ ವಿರುದ್ದ ಆರೋಪ ಮಾಡುತ್ತಿವೆ. ನಮ್ಮ 50 ಮಂದಿ ಸಿಬ್ಬಂದಿ ಕೊವಿಡ್ನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಅದರ ನಡುವೆಯೂ ಕೇಂದ್ರ ಸರ್ಕಾರ ತಿಳಿಸಿದ ರೀತಿಯಲ್ಲೇ ಲಸಿಕೆ ಹಂಚಿಕೆ ಮಾಡಿದ್ದೇವೆ ಎಂಸು ಭಾರತ್ ಬಯೋಟೆಕ್ ಸಮರ್ಥಿಸಿಕೊಂಡಿದೆ.
Covaxin dispatched 10/5/21.18 states have been covered thou in smaller shipments. Quite disheartening to the teams to hear Some states complaining about our intentions. 50 of our employees are off work due to covid, yet we continue to work under pandemic lockdowns 24×7 for U ?? pic.twitter.com/FmQl4vtqXC
— suchitra ella (@SuchitraElla) May 11, 2021
ಇದನ್ನೂ ಓದಿ:
Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?