Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?
Covid Vaccine: ಎರಡನೇ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳದ ಅತಿ ಹೆಚ್ಚಿನ ಜನರು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿದ್ದಾರೆ. ದೇಶದಲ್ಲಿ ಇನ್ನೂ 13 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕು. ದೇಶಾದ್ಯಂತ 2ನೇ ಡೋಸ್ ಲಸಿಕೆಯನ್ನು ಪಡೆಯುವುದೇ ಜನರಿಗೆ ದೊಡ್ಡ ಸವಾಲಾಗಿದೆ.
ಭಾರತದಲ್ಲಿ ಈಗ ಕೊರೊನಾ ಲಸಿಕೆಯ ಕೊರತೆ ಎದುರಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಮತ್ತೊಂದೆಡೆ ಈಗಾಗಲೇ ಮೊದಲ ಡೋಸ್ ಪಡೆದಿರುವ 45 ವರ್ಷ ಮೇಲ್ಪಟ್ಟವರು, ಆರೋಗ್ಯ ಸೇವಾ ಸಿಬ್ಬಂದಿ, ಕೊರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ಸಿಗುತ್ತಿಲ್ಲ.
ದೇಶದಲ್ಲಿ ಈಗ ಕೊರೊನಾ ವೈರಸ್ನ 2ನೇ ಅಲೆಯಲ್ಲಿ ಮುಖ್ಯವಾಗಿ ಮೆಡಿಕಲ್ ಆಕ್ಸಿಜನ್ ಮತ್ತು ಕೊರೊನಾ ವೈರಸ್ ವಿರುದ್ಧದ ಲಸಿಕೆಗೆ ಕೊರತೆ ಎದುರಾಗಿದೆ. ಭಾರತ ಸರ್ಕಾರ ಕೊರೊನಾ ಲಸಿಕೆಗಾಗಿ ಎರಡೇ ಎರಡು ಕಂಪನಿಗಳನ್ನು ಇದುವರೆಗೂ ಅವಲಂಬಿಸಿರುವುದು ಕೂಡ ಲಸಿಕೆಯ ಕೊರತೆಗೆ ಕಾರಣ. ಈಗ ದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಶೀಘ್ರವಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಅನಿವಾರ್ಯತೆ ಎದುರಾಗಿದೆ. ದೇಶದಲ್ಲಿ ಮೊದಲ ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ಸಿಗುತ್ತಿಲ್ಲ. ದೇಶದಲ್ಲಿ ಇದುವರೆಗೂ ಅಂದರೆ, ಮೇ 4ರ ಮಂಗಳವಾರ ರಾತ್ರಿ 8 ಗಂಟೆಯವರೆಗೂ ಒಟ್ಟಾರೆ 16 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ 13 ಕೋಟಿ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 3 ಕೋಟಿ ಜನರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಹೀಗಾಗಿ 3 ಕೋಟಿ ಜನರಿಗೆ ಮತ್ತೆ ಲಸಿಕೆ ನೀಡುವ ಅಗತ್ಯವಿಲ್ಲ.
2ನೇ ಡೋಸ್ ಲಸಿಕೆಗೆ ಕಾದಿರುವ 13 ಕೋಟಿ ಜನರು ದೇಶದಲ್ಲಿ ಇನ್ನೂ 13 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕು. ದೇಶಾದ್ಯಂತ 2ನೇ ಡೋಸ್ ಲಸಿಕೆಯನ್ನು ಪಡೆಯುವುದೇ ಜನರಿಗೆ ದೊಡ್ಡ ಸವಾಲಾಗಿದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ 2ನೇ ಡೋಸ್ ಲಸಿಕೆ ಸಿಗುತ್ತಿಲ್ಲ. ಕೆಲವರು ಕಷ್ಟಪಟ್ಟು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೋವಿನ್ ಪೋರ್ಟಲ್ನಲ್ಲೂ ಲಾಗಿನ್ ಆಗಿ ಎರಡನೇ ಡೋಸ್ ಪಡೆಯಲು ಅಪಾಯಿಂಟ್ಮೆಂಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೆಲ್ತ್ ಕೇರ್ ವರ್ಕರ್, ಫ್ರಂಟ್ ಲೈನ್ ವರ್ಕರ್, 45 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟವರು ಸುಮಾರು 13 ಕೋಟಿ ಜನರು ಈಗ ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕಾಗಿದೆ. ಈ ವರ್ಗದ ಜನರಿಗೆ ಆದಷ್ಟು ಬೇಗ ಕೊರೊನಾದ ಎರಡನೇ ಡೋಸ್ ಲಸಿಕೆಯನ್ನು ನೀಡಲೇಬೇಕು.
ಎರಡನೇ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳದ ಅತಿ ಹೆಚ್ಚಿನ ಜನರು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿದ್ದಾರೆ. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್ ಪಡೆದ 28 ದಿನದ ಬಳಿಕ ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕು. ಇನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ಮೊದಲ ಡೋಸ್ ಪಡೆದ 6-8 ವಾರಗಳಲ್ಲಿ ಪಡೆಯಬೇಕು. ಕೋವಿಶೀಲ್ಡ್ ಲಸಿಕೆಯನ್ನು ವಿದೇಶಗಳಲ್ಲಿ 12 ವಾರದ ಬಳಿಕವೂ ಪಡೆಯಲು ಅವಕಾಶ ನೀಡಲಾಗಿದೆ. ಆದರೇ, ಭಾರತದಲ್ಲಿ ಇದಕ್ಕೆ ಅವಕಾಶ ಕೊಟ್ಟಿಲ್ಲ.
ಇದನ್ನೂ ಓದಿ: Explainer: ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?
2ನೇ ಡೋಸ್ ಪಡೆಯದಿದ್ದರೆ ಹಲವು ಸಮಸ್ಯೆ ಎರಡನೇ ಡೋಸ್ ಲಸಿಕೆಯನ್ನು ಪಡೆಯದೇ ಇದ್ದರೇ, ಏನಾಗುತ್ತೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಮೊದಲ ಡೋಸ್ ಲಸಿಕೆ ನೀಡಿದ ಬಳಿಕ ಎರಡನೇ ಡೋಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತೆ. ಆದರೇ, 2ನೇ ಡೋಸ್ ಲಸಿಕೆ ಸಿಗದಿದ್ದರೇ ಅಥವಾ ಒಂದು ವೇಳೆ 2ನೇ ಡೋಸ್ ಲಸಿಕೆ ವಿಳಂಬವಾದರೇ, ಮೊದಲ ಡೋಸ್ ಲಸಿಕೆಯ ಪರಿಣಾಮ ಕಡಿಮೆಯಾಗಬಹುದು. ಜೊತೆಗೆ ಲಸಿಕೆಯಿಂದ ಸಿಗುತ್ತಿದ್ದ ರಕ್ಷಣೆ ಕಡಿಮೆಯಾಗುತ್ತೆ. 2ನೇ ಡೋಸ್ ಲಸಿಕೆಯನ್ನು ಪಡೆಯದೇ ಇದ್ದರೇ, ಸಂಪೂರ್ಣ ಮತ್ತು ಪರಿಣಾಮಕಾರಿ ಲಸಿಕೆ ನೀಡಿಕೆಯ ಅಂದೋಲನದ ಉದ್ದೇಶವೇ ಈಡೇರಲ್ಲ.
ಹೀಗೆ ಲಸಿಕೆಯ ಕೊರತೆಯಾಗಲು ಉತ್ಪಾದನಾ ಸಾಮರ್ಥ್ಯ ಕಡಿಮೆ ಇರುವುದೇ ಕಾರಣ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈವರೆಗೂ 15 ಕೋಟಿ ಡೋಸ್ ಲಸಿಕೆ ಪೂರೈಸಿರುವುದಾಗಿ ಹೇಳಿದೆ. ಬಾಕಿ ಇರುವ 11 ಕೋಟಿ ಡೋಸ್ ಅನ್ನು ಜುಲೈ ತಿಂಗಳೊಳಗೆ ಪೂರೈಸಲಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ಪ್ರತಿ ತಿಂಗಳು 7 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಜುಲೈ ತಿಂಗಳಿನಿಂದ ತಿಂಗಳಿಗೆ 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದಿಸಲಿದೆ. ದೇಶದಲ್ಲಿ 13.9 ಕೋಟಿ ಜನರು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದಾರೆ.
ಸಮಸ್ಯೆ ಇರುವುದು ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯ ಪೂರೈಕೆಯಲ್ಲಿ. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ತಿಂಗಳಿಗೆ 1 ರಿಂದ 1.5 ಕೋಟಿ ಡೋಸ್ ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿದೆ. ದೇಶದಲ್ಲಿ ಇದುವರೆಗೂ 1.4 ಕೋಟಿ ಜನರು ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯು ಶೇ 82 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಹೀಗಾಗಿ ಜನರು ಈಗ ಕೋವ್ಯಾಕ್ಸಿನ್ ಲಸಿಕೆಗಾಗಿ ಮುಗಿ ಬೀಳುತ್ತಿದ್ದಾರೆ. ಆದರೇ, ಕೋವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡವರಿಗೆ 2ನೇ ಡೋಸ್ ಸಿಗುತ್ತಿಲ್ಲ. 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಜನರು ಪರದಾಡುತ್ತಿದ್ದಾರೆ. ಸರ್ಕಾರವು ತನ್ನ ಕೊರೊನಾ ಲಸಿಕೆಯ ನೀತಿಯನ್ನು ಸ್ಪಲ್ಪ ಬದಲಿಸಿಕೊಂಡು, 2ನೇ ಡೋಸ್ ಲಸಿಕೆಯನ್ನು ನೀಡಲು ಹೆಚ್ಚಿನ ಆದ್ಯತೆ ನೀಡಬೇಕು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ಹೆಚ್ಚಿನ ಆದ್ಯತೆ ಹಾಗೂ ಅಪಾಯಿಂಟ್ಮೆಂಟ್ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
(Covid Vaccine Problem in Covaxin Covishield Vaccination What are the possible solutions)
ಇದನ್ನೂ ಓದಿ: Explainer: ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಏಕೆ ಗೋಚರಿಸುತ್ತಿವೆ?
ಇದನ್ನೂ ಓದಿ: Explainer: ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯದಿದ್ದರೆ ಏನಾಗುತ್ತದೆ?