ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

Karnataka Weather: ಹೊಸ ವರ್ಷದಂದು ಕರ್ನಾಟಕದಲ್ಲಿ ವಾತಾವರಣ ಬದಲಾಗಿದೆ. ಉತ್ತರ ಒಳನಾಡಿಗೆ ಶೀತ ಮಾರುತಗಳು ಆವರಿಸಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ವಿಜಯಪುರ, ಬೆಳಗಾವಿ ಸೇರಿ ಹಲವೆಡೆ ತೀವ್ರ ಚಳಿ ದಾಖಲಾಗಿದೆ. ಬೆಂಗಳೂರು ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ತಂಪಾದ ರಾತ್ರಿಗಳನ್ನು ನಿರೀಕ್ಷಿಸಲಾಗಿದೆ. ಬಹುತೇಕ ಕಡೆ ಒಣ ಹವಾಮಾನ ಮುಂದುವರಿಯಲಿದೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ
ಸಾಂದರ್ಭಿಕ ಚಿತ್ರ

Updated on: Jan 01, 2026 | 6:31 AM

ಬೆಂಗಳೂರು, ಜ.1: ಹೊಸ ವರ್ಷಕ್ಕೆ ವಾತಾವರಣದಲ್ಲೂ (Karnataka Weather Forecast) ಕೂಡ ಬದಲಾವಣೆಗಳು ಆಗಿವೆ. ರಾಜ್ಯದ ಹಲವು ಭಾಗದಲ್ಲಿ ವಾತಾವರಣ ಬದಲಾಗಿದೆ. ಇಂದು ರಾಜ್ಯದ (ಜನವರಿ 1), ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ, ಕನಿಷ್ಠ ತಾಪಮಾನ 13°C ಮತ್ತು 19°C ನಡುವೆ ಇರುತ್ತದೆ. ಗರಿಷ್ಠ ತಾಪಮಾನ ಸುಮಾರು 27°C-28°C ಇರಲಿದೆ. ಬೀದರ್ , ವಿಜಯಪುರ ಮತ್ತು ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಶೀತ ಅಲೆಯ ಪರಿಸ್ಥಿತಿ ಇರಲಿದ್ದು, ಈಗಾಗಲೇ ಎಲ್ಲೋ ಅಲರ್ಟ್​ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗಿದೆ. ಬೀದರ್ 6.4°C, ವಿಜಯಪುರ 9.9°C, ಬೆಳಗಾವಿ 8.7°Cರಷ್ಟು ತಾಪಮಾನ ಇದೆ.

ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಇಬ್ಬಣಿಯಿಂದ ಕೂಡಿದ್ದು, ಕನಿಷ್ಠ ತಾಪಮಾನವು 19°C-20°C ಇರುತ್ತದೆ. ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆ ತಂಪಾದ ವಾತಾವರಣ ಇರಲಿದೆ. ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ ಸುಮಾರು 28°C-30°C , ಕನಿಷ್ಠ ತಾಪಮಾನ ಸುಮಾರು 20°C-21°C ಇರಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ, ಒಣ ಹವಾಮಾನವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದೆ.

ಬೆಳಗಾವಿ (8.7°C), ಬಾಗಲಕೋಟೆ (9.9°C), ರಾಯಚೂರು (10.4°C), ಧಾರವಾಡ ಮತ್ತು ಗದಗ (ತಲಾ 10.7°C) ತೀವ್ರ ಚಳಿಗಾಲದ ಚಳಿಯನ್ನು ಅನುಭವಿಸಿವೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಚಿಕ್ಕಮಗಳೂರು (11.1°C), ಹಾಸನ (13.1°C), ತುಮಕೂರು (13.1°C), ಕೋಲಾರ (13.3°C) ಮತ್ತು ಚಿತ್ರದುರ್ಗ (13°C) ಶೀತದ ವಾತಾವರಣವನ್ನು ಹೊಂದಿದೆ. ಇನ್ನು ಬೆಂಗಳೂರಿನ ಐಎಂಡಿ ಪ್ರಕಾರ, ಬೆಂಗಳೂರಿನಲ್ಲಿ ತಕ್ಷಣಕ್ಕೆ ಮಳೆಯಾಗುವ ಮುನ್ಸೂಚನೆ ಇಲ್ಲ, ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣ ಕೂಡ ಹೆಚ್ಚಾಗಲಿದೆ. ರಾತ್ರಿ ಹೊತ್ತು ಕೂಡ ತಂಪಾದ ಗಾಳಿ ಇರಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​​

ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆ ತಂಪಾದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಗರದಲ್ಲಿ ಹಗಲಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಿದ್ದರೂ, ರಾತ್ರಿ ಮತ್ತು ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 am, Thu, 1 January 26