ಬೆಂಗಳೂರು, ಡಿಸೆಂಬರ್ 14: ರಾಜ್ಯದಲ್ಲಿ 2.55 ಲಕ್ಷ ಸರ್ಕಾರಿ ಹುದ್ದೆಗಳು (Government Posts) ಖಾಲಿ ಇರುವುದು ತಿಳಿದುಬಂದಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಹುದ್ದೆಗಳು ಸೇರಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೆ ತರಲು ಬದ್ಧವಾಗಿರುವುದಾಗಿ ರಾಜ್ಯ ಸರ್ಕಾರ (Karnataka Government) ಹೇಳಿದ್ದು, ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರುವ ನಿರೀಕ್ಷೆಯಿದೆ. ಈ ಮಧ್ಯೆ, ಸರ್ಕಾರ ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಬೇಕು ಮತ್ತು ಕೆಲವು ಹುದ್ದೆಗಳನ್ನು ಹೊರಗುತ್ತಿಗೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿರುವುದಾಗಿ ವರದಿಯಾಗಿದೆ.
ಖಾಲಿ ಇರುವ ಹುದ್ದೆಗಳ ಪೈಕಿ 75,000 ಕ್ಕೂ ಹೆಚ್ಚು ಶಿಕ್ಷಣ ಇಲಾಖೆಯಲ್ಲಿ (ಉನ್ನತ ಮತ್ತು ಶಾಲಾ ಶಿಕ್ಷಣ), 35,196 ಆರೋಗ್ಯ ಇಲಾಖೆಯಲ್ಲಿ ಮತ್ತು 22,069 ಗೃಹ ಇಲಾಖೆಯಲ್ಲಿ ಇವೆ. ಇದರಲ್ಲಿ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆಗಳು ಸೇರಿವೆ. ಇದಲ್ಲದೇ ಕಂದಾಯ, ಆರ್‌ಡಿಪಿಆರ್, ಪಶುಸಂಗೋಪನೆ, ಹಣಕಾಸು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ತಲಾ ಸುಮಾರು 10 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.
2.55 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಇನ್ನಷ್ಟು ಸವಾಲಿನದ್ದಾಗಿದೆ. ಏಕೆಂದರೆ ಇದು ದೊಡ್ಡ ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆ. ಸದ್ಯ ಮಂಜೂರಾದ ಹುದ್ದೆಗಳು 7.2 ಲಕ್ಷ. ಈಗ 2.55 ಲಕ್ಷ ಹುದ್ದೆಗಳು ಖಾಲಿ ಇದ್ದರೂ, ಇನ್ನಷ್ಟು ಮಂದಿ ನಿವೃತ್ತಿಯಾದಾಗ ಅದರ ಸಂಖ್ಯೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಮೇಲಿನ ಶೇ 20ರ ತೆರಿಗೆ ಪ್ರಸ್ತಾವ ಹಿಂಪಡೆದ ಕರ್ನಾಟಕ ಸರ್ಕಾರ
ರಾಜ್ಯ ಸರಕಾರವು ವಾರ್ಷಿಕ ಸರಾಸರಿ 65 ಸಾವಿರ ಕೋಟಿ ರೂ.ಗಳನ್ನು ವೇತನಕ್ಕಾಗಿ ವ್ಯಯಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲ ವೇತನವನ್ನು ಶೇಕಡ 40ರಷ್ಟು ಹೆಚ್ಚಿಸಬೇಕೆಂಬ ಬೇಡಿಕೆ ಇದ್ದು, ಏಳನೇ ವೇತನ ಆಯೋಗದ ಮುಂದಿದೆ. ಸಮಿತಿಯು ಶಿಫಾರಸು ಮಾಡಿದರೆ, ಸರ್ಕಾರಕ್ಕೆ ಇನ್ನೂ 12,000 ಕೋಟಿ ರೂಪಾಯಿ ಬೇಕಾಗಬಹುದು ಮತ್ತು ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಹಣಕಾಸಿನ ಹೊರೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ