ರಾಜ್ಯ ಕಾಂಗ್ರೆಸ್(Congress) ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಪೂರೈಸಲು ನಾನಾ ಸರ್ಕಸ್ ನಡೆಸುತ್ತಿದೆ. ಸದ್ಯ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ (Gruha Jyothi Scheme) ಜಾರಿಯಾಗಿದೆ. ಜೊತೆಗೆ ಶಕ್ತಿ ಯೋಜನೆ(Shakti Yojana) ಕೂಡ ಭರ್ಜರಿ ಯಶಸ್ಸು ಕಾಣುತ್ತಿದೆ. ಮನೆ ಗೋಜು ಬಿಟ್ಟು ಮಹಿಳಾ ಮಣಿಯರು ಪುಣ್ಯ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಅಕ್ಕಿ ನೀಡಲು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು ಅನ್ನ ಭಾಗ್ಯ ಯೋಜನೆ ಜಾರಿಗೆ ಕಂಟಕ ಎದುರಾಗಿದೆ. ಹೀಗಾಗಿ ಇಂದು ಕಾಂಗ್ರೆಸ್ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಕಾಂಗ್ರೆಸ್ಗೆ ಪ್ರತಿಯಾಗಿ ಬಿಜೆಪಿಯಿಂದಲೂ ಇಂದು ಪ್ರತಿಭಟನೆ ನಡೆಯಲಿದೆ. ಬನ್ನಿ ರಾಜ್ಯದಲ್ಲಾಗುತ್ತಿರುವ ಪ್ರಮುಖ ಘಟನೆಗಳ ಲೈವ್ ಅಪ್ಡೇಟ್ಸ್ಗಳನ್ನು ಇಲ್ಲಿ ಪಡೆಯಿರಿ.
ಮೈಸೂರು: ಶಿವ ದೇವಾಲಯದಲ್ಲಿ ಇದ್ದರೆ ನಂದಿ ಹೊರಗಡೆ ಕುಳಿತು ಕಾಯುತ್ತಿರುತ್ತದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರನ್ನು ಪುತ್ರ ಡಾ.ಯತೀಂದ್ರ ಅವರು ಕಾಯುತ್ತಿರುತ್ತಾರೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲೂ ರಾಮಮಂದಿರವಿದೆ. ರಾಜಕೀಯ ಕಾರಣಕ್ಕಾಗಿ ಶ್ರೀರಾಮಚಂದ್ರನ ಹೆಸರು ಬಳಸುವುದು ಸರಿಯಲ್ಲ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ 2-3 ದಿನ ಮಾತ್ರ ಪ್ರಚಾರ ಮಾಡಿದ್ದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ನಿರಂತರ ಪ್ರಚಾರ ಮಾಡಿದ್ದರು. ಇದರ ಫಲವಾಗಿ ಸಿದ್ದರಾಮಯ್ಯಗೆ 46,006 ಮತಗಳ ಅಂತರದಿಂದ ಗೆಲುವು ಲಭಿಸಿತು. ಅಲ್ಲದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದಿದೆ. 5 ಗ್ಯಾರಂಟಿಗಳನ್ನು ಈಡೇರಿಡಲು ಸಿಎಂ ಹಗಲುರಾತ್ರಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಭಾರ ಮಾಡಲು ಎದೆಗಾರಿಕೆ ಬೇಕು, ಆ ಎದೆಗಾರಿಕೆ ಸಿದ್ದರಾಮಯ್ಯರಲ್ಲಿದೆ ಎಂದರು.
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿಯುತ್ತಿದೆ. ಮರದ ಬಳಿಯ ವಿದ್ಯುತ್ ತಂತಿಗೂ ಬೆಂಕಿ ತಗುಲಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಹಲವು ಮನೆಗಳಲ್ಲಿ ಟಿವಿ, ರೆಫ್ರಿಜರೇಟರ್ಗಳಿಗೆ ಹಾನಿಯಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಅಕ್ಕಿ ಪಾಲಿಟಿಕ್ಸ್ ಮುಂದುವರಿದಿದೆ. ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರದ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸಿಎಂ ಸೂಚನೆ ಮೇರೆಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ನಾಳೆ ಕೇಂದ್ರ ಆಹಾರ ಸಚಿವರ ಭೇಟಿಗೆ ಸಮಯಾವಕಾಶ ಕೇಳಿರುವ ಸಚಿವರು, ಅಕ್ಕಿ ಪೂರೈಕೆ ಮಾಡುವಂತೆ ಮನವಿ ಮಾಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳ ಹೆಸರು ಕೇಳಿದರೆ ಆಗಲ್ಲ. ಸರ್ಕಾರದ ಹಿಂದೂ ವಿರೋಧಿ ನಿಲುವಿನ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಉಡುಪಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಸೋಲಿಗೆ ಬಿಜೆಪಿಯಲ್ಲಿ ಎಲ್ಲರೂ ಹೊಣೆಗಾರರು. ಬಿಜೆಪಿ ಸೋಲಿಗೆ ಒಬ್ಬ ನಾಯಕನನ್ನೇ ಹೊಣೆ ಮಾಡುವುದು ಸರಿಯಲ್ಲ. ಇದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ವೈಫಲ್ಯವಲ್ಲಎಂದರು.
ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಹೊಸ ಬೈಪಾಸ್ ರಸ್ತೆ ಬಳಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಗೃಹಬಳಕೆ ವಸ್ತುಗಳು ಹಾನಿಗೊಂಡಿವೆ.
ಚಿತ್ರದುರ್ಗದಲ್ಲಿ ‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸರ್ವರ್ ಸಮಸ್ಯೆಯಿಂದ ಅರ್ಜಿ ಸ್ವೀಕರಿಸಲಾಗುತ್ತಿಲ್ಲ ಎಂದು ನಗರದ ಬೆಸ್ಕಾಂ ಕಚೇರಿ ಮುಂದೆ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಜನರು ಅರ್ಜಿ ಸಲ್ಲಿಸಲಾಗದೆ ತೆರಳಿದರು.
ಉಡುಪಿ: ವಿದ್ಯುತ್ ದರ ಏರಿಕೆಗೂ ಬಿಜೆಪಿ ಸರ್ಕಾರ ವಿರುದ್ಧ ಬೊಟ್ಟು ಮಾಡುತ್ತಾರೆ. ಆದರೆ ಬಿಜೆಪಿ ಸರ್ಕಾರ ಕೆಇಆರ್‌ಸಿ ಪ್ರಸ್ತಾಪಕ್ಕೆ ಅನುಮೋದನೆ ಕೊಟ್ಟಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಇಂಧನ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಿಂತ ದೊಡ್ಡವರಾ? ಕೈಗಾರಿಕೆ ಉದ್ಯಮಿಗಳು ಅನ್ಯರಾಜ್ಯಕ್ಕೆ ಗುಳೆ ಹೋಗುತ್ತೇವೆ ಅಂತಿದ್ದಾರೆ. ಯಾವುದೇ ತಯಾರಿ ಇಲ್ಲದೆ ಶಕ್ತಿ ಯೋಜನೆ ಜಾರಿ ಮಾಡಿದ್ದಾರೆ. ಪ್ರಯಾಣಿಕರು ಹೆಚ್ಚಾದ್ದರಿಂದ ಬಸ್ ಬಾಗಿಲು ಮುರಿದು ಹೋಗಿದೆ. ಮಹಿಳೆಯರು, ಮಕ್ಕಳು ಕೈಅಡ್ಡ ಹಾಕಿದರೂ ಸರ್ಕಾರಿ ಬಸ್ ನಿಲ್ಲಿಸುತ್ತಿಲ್ಲ. ಗೃಹಲಕ್ಷ್ಮಿ ಯೋಜನೆ ಅತ್ತೆಗೋ ಸೊಸೆಗೊ ಎಂಬ ಗೊಂದಲ ಇದೆ ಎಂದರು.
ಸರ್ವರ್ ಹ್ಯಾಕ್ ಮಾಡಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಟೆಕ್ನಿಕಲ್ ಮನುಷ್ಯನಲ್ಲ, ಸಂಬಂಧಪಟ್ಟ ಇಲಾಖೆಯನ್ನು ಕೇಳಿ. ನಾನು ಹಳ್ಳಿಯಿಂದ ವಿಧಾನಸೌಧಕ್ಕೆ ಬಂದವನು. ಏನಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದರು. ಅಕ್ಕಿ ವಿತರಣೆ ಸಂಬಂಧ ಕಾನೂನು ಸಲಹೆ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ನಿಮಗೆ ತಿಳಿಸುತ್ತೇನೆ ಎಂದರು.
ನಾಳೆ ಅಥವಾ ನಾಡಿದ್ದು ನಾನು ದೆಹಲಿಗೆ ಹೋಗುವುದಿಲ್ಲ. 2-3 ದಿನಗಳ ಬಳಿಕ ನಾನು ದೆಹಲಿಗೆ ಹೋಗುತ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಕಲುಷಿತ ನೀರು ಸೇವಿಸಿ 6 ಮಕ್ಕಳು ಸೇರಿದಂತೆ 18 ಜನ ಅಸ್ವಸ್ಥಗೊಂಡ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕರಿಕ್ಯಾಳ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥರನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಮಿಶ್ರಣವಾಗಿ ಈ ಘಟನೆ ಸಂಭವಿಸಿದ್ದು, ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ.
ಜೂನ್ 30ರಂದು ವಿಧಾನಪರಿಷತ್ನ 3 ಸ್ಥಾನಗಳಿಗೆ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ಬೋಸರಾಜು, ತಿಪ್ಪಣ್ಣಪ್ಪ ಕಮಕನೂರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಮಾತನಾಡಿದ ಶೆಟ್ಟರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ನಮಗೆ ಅವಕಾಶ ನೀಡಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿಗೆ ಧನ್ಯವಾದ ಸಲ್ಲಿಸುತ್ತೇವೆ. 3 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬರುವ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮಿಸುತ್ತೇವೆ. ಸದ್ಯ ಯಾವುದೇ ಸ್ಥಾನಮಾನದ ಬಗ್ಗೆ ಚರ್ಚೆ ಮಾಡಿಲ್ಲ. ಯಾವುದೇ ಜವಾಬ್ದಾರಿ, ಸ್ಥಾನಮಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದರೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿ ತನಿಖೆ ನಡೆಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡುತ್ತಾ ಕೇಂದ್ರದ ಮೇಲೆ ಆರೋಪ ಮಾಡಿದ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಗ್ಯಾರಂಟಿಗಳನ್ನು ಜಾರಿಗೆ ತರಲು ಕುಂಟು ನೆಪ ಹೇಳುತ್ತಿದ್ದಾರೆ ಎಂದರು.
ಶಿವಮೊಗ್ಗ: ಮಳೆ ಇಲ್ಲದೆ ಕಂಗಾಲು ಆಗಿದ್ದ ಮಲೆನಾಡಿನ ಜನರು ಸಂತಸಗೊಂಡಿದ್ದಾರೆ. ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಹಠಾತ್ ಮನೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಚಾಮರಾಜನಗರ: ಮಾಜಿ ಸಚಿವ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನವರು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿ ತಾವು ಮಾಡಿರುವ ಭರವಸೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ತಾವು ಮಾಡಬೇಕಾದ ಕೆಲಸವನ್ನು ಕೇಂದ್ರ ಸರ್ಕಾರದ ಮೇಲೆ ಹೊರೆಸುತ್ತಿದ್ದಾರೆ. ಕಾಂಗ್ರೆಸ್ ಲೋಗೋ ಬಚ್ಚಾ ಹೈ ಎನ್ನುವಂತಾಗಿದೆ ಇವರ ಪರಿಸ್ಥಿತಿ. ಕಾಂಗ್ರೆಸ್ನವರದ್ದು ಮಕ್ಕಳಾಟ ಎನಿಸುತ್ತಿದೆ. 10 ವರ್ಷದಿಂದ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಅಡಿ 5 ಕೆ.ಜಿ. ಅಕ್ಕಿಯನ್ನು ಫ್ರಿಯಾಗಿ ಕೊಡುತ್ತಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ.. ಕೇಂದ್ರ ಅಕ್ಕಿ ಕೊಡುವುದನ್ನ ನಿಲ್ಲಿಸಿದೆ ಅಂತ ಸುಳ್ಳು ಹೇಳಿದರು. 10 ಕೆ.ಜಿ. ಕೊಡುತ್ತೇವೆ ಅಂದಾಗ ಕೇಂದ್ರ ಸರ್ಕಾರವನ್ನ ಕೇಳಿದ್ದೀರಾ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್ ಆಯ್ಕೆಯಾಗಿದ್ದಾರೆ. ವೀಣಾ ಬಾರದ್ವಾಡ್ ಪರ 46 ಮತ ಚಲಾವಣೆಯಾದರೆ, ಕಾಂಗ್ರೆಸ್ ಪಕ್ಷದ ಸುವರ್ಣ ಪರ 37 ಮತ ಚಲಾವಣೆಯಾಗಿದೆ.
ಬೆಳಗಾವಿ: ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ವಿಚಾರವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿಸಿದ್ದಾರೆ. ನಮ್ಮ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ನಮ್ಮ ಸಿಸ್ಟಮ್ಗಳನ್ನು ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆಗಳನ್ನು ಜಾರಿ ತರುತ್ತೇವೆ. ಆನ್ಲೈನ್ನಲ್ಲಿ ಸಮಸ್ಯೆಯಾದರೆ ಆಫ್ಲೈನ್ನಲ್ಲಿ ಅರ್ಜಿ ಪಡೆಯುತ್ತೇವೆ. ಒಂದು ತಿಂಗಳು ತಡ ಆಗಬಹುದು ಅದಕ್ಕಿಂತಲೂ ಹೆಚ್ಚು ಆಗಲ್ಲ ಎಂದರು.
ಬೆಂಗಳೂರು: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗುತ್ತಿದ್ದೇನೆ ಎಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಆದ ನಂತರ ಮೊದಲ ಬಾರಿಗೆ ಸೌಹಾರ್ದಯುತವಾಗಿ ಭೇಟಿಯಾಗಲಿದ್ದೇನೆ. ಇದೇ ಸಂದರ್ಭದಲ್ಲಿ ಆಹಾರ ಸಚಿವ ಮುನಿಯಪ್ಪನವರು ಕೇಂದ್ರ ಆಹಾರ ಸಚಿವರನ್ನು ಭೇಟಿಯಾಗಲಿದ್ದು, ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮನವಿ ಮಾಡಲಿದ್ದಾರೆ ಎಂದರು.
ಬೆಳಗಾವಿ: ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಹಾಗೂ ಹೃದಯವಂತೂ ಮೊದಲೇ ಇಲ್ಲವೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕೇಂದ್ರಕ್ಕೆ ಬಿಸಿ ಮುಟ್ಟುತ್ತೊ ಇಲ್ವೊ, ಆಮೇಲೆ ನೋಡೋಣ. ಮೊದಲು 25 ಜನ ಸಂಸದರು ಕಣ್ಣು ತೆಗೆಯಲಿ ಎಂದು ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಒಂದು ವರ್ಷದಲ್ಲಿ ಪಾರ್ಲಿಮೆಂಟ್ ಚುನಾವಣೆ ಬಂದಿದೆ. ಮಹಾಜನತೆ ಅರ್ಥ ಮಾಡ್ಕೊಳಲಿ ಚುನಾವಣೆ ಬಂದಾಗ ಜನರ ಓಲೈಕೆಗೆ ಬರ್ತಾರೆ. ಆದರೆ, ಇವತ್ತು ಬಡವರಿಗೆ ನೀಡಬೇಕಾದ ಅಕ್ಕಿಯನ್ನು ತಡೆಯುತ್ತಿದ್ದಾರೆ ಎಂದರು.
ಬೆಂಗಳೂರು: ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿಯನ್ನ ಹಳಿ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ರಾಜ್ಯದಲ್ಲಿ ಸರ್ಕಾರಿ ಬಸ್ ನಿಂತು ಹೋಗುತ್ತೆ. ರಾಜ್ಯದಲ್ಲಿ ಯಾಕೆ ಅಭಿವೃದ್ಧಿ ಕಾರ್ಯ ನಿಲ್ಲಿಸಿದ್ದೀರಿ, ಸಚಿವರು ಓಪನ್ ಆಗಿಯೇ ಐಎಎಸ್, IPS ವರ್ಗಾವಣೆಗೆ ಕಮಿಷನ್ ಫಿಕ್ಸ್ ಮಾಡುತ್ತಿದ್ದು, ವರ್ಗಾವಣೆಯಲ್ಲಿ ದೊಡ್ಡ ದಂಧೆ ಶುರುವಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ‘ಅಕ್ಕಿ ವಿತರಣೆ ಮುಂದೂಡಲು ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಶಾಸಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಮಾತನಾಡಲೂ ಅವಕಾಶ ಕೊಡದೇ ಪೊಲೀಸರು ನಮ್ಮನ್ನ ವಶಕ್ಕೆ ಪಡೆದಿದ್ದಾರೆ. ಗೂಂಡಾಗಿರಿ ಪ್ರಾರಂಭವಾಗಿದೆ ಎಂಬುದಕ್ಕೆ ಇದೇ ಉದಾಹರಣೆ, ಕಾಂಗ್ರೆಸ್ ಉಚಿತವಾಗಿ 10 ಕೆಜಿ ಅಕ್ಕಿ ಕೊಡ್ತೇವೆ ಅನ್ನೋದು ಸುಳ್ಳು, 10 ಕೆಜಿ ಅಕ್ಕಿ ಉಚಿತ ಎಂದು ಹೇಳಿ ಈಗ 5 ಕೆಜಿಗೆ ಬಂದಿದ್ದಾರೆ ಎಂದರು.
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ಗಳು ಹೆಚ್ಚುತ್ತಿದ್ದು, ಅದರ ಮೂಲ ಪತ್ತೆ ಹಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ. ಈ ಫೇಕ್‌ನ್ಯೂಸ್‌ಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ಆರೋಪ ಹಿನ್ನಲೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ‘ಹಸಿವು ಮುಕ್ತ ರಾಜ್ಯ ಮಾಡಲು ನಾವು ಹೋರಾಟ ಮಾಡ್ತಿದ್ದೇವೆ. ಕೇಂದ್ರ ಸರ್ಕಾರ ಕೊಡದಿದ್ರೂ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತೇವೆ. ಕೆಲವರು ಜೋಳ, ರಾಗಿ ಕೊಡಿ ಅಂತಾ ನಮಗೆ ಪತ್ರ ಬರೆಯುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರು: ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷರಾಗಿ ಆಹಾರ ಬದ್ಧತೆ ಕಾರ್ಯಕ್ರಮ ತಂದಿದ್ದರು, ಬಳಿಕ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಸಂವಿಧಾನದ ಹಕ್ಕು ನೀಡಿದ್ರು. ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಐದು ಕೆಜಿ ಅಕ್ಕಿ ನೀಡಿದ್ವಿ, ನಂತರ ಸಿದ್ದರಾಮಯ್ಯ 7 ಕೆಜಿಗೆ ಏರಿಕೆ ಮಾಡಿದ್ರು, ಈ ಬಾರಿ 10 ಕೆಜಿ ಅಕ್ಕಿ ನೀಡೋದಾಗಿ ಹೇಳಿದ್ದೇವೆ ಎಂದರು.
ಬೆಂಗಳೂರು: ಕೇಂದ್ರ ಸರ್ಕಾರದಿಂದ ಅಕ್ಕಿ ನಿಲ್ಲಿಸಿದ ಆರೋಪದ ಮೇಲೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ಬಳಿ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜಾಗಿದ್ದು, ಅದರಂತೆ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಈ ವೇಳೆ ಅಕ್ಕಿ ಬೇಯಿಸುವುದರ ಮೂಲಕ ವಿನೂತನ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ. ಪಾತ್ರೆಯೊಳಗೆ ಅಕ್ಕಿ ಹಾಕಿದ ಡಿಕೆಶಿ,ರಾಮಲಿಂಗ ರೆಡ್ಡಿ, ಗೋವಿಂದ ಗೋವಿಂದ ಎಂದು ಘೋಷಣೆ ಕೂಗಿದ್ದಾರೆ.
ಮೈಸೂರು: ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ಆರೋಪ ಹಿನ್ನಲೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಮೈಸೂರಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಶಾಸಕ ಎಂ ಕೆ ಸೋಮಶೇಖರ್, ಜಿಲ್ಲಾಧ್ಯಕ್ಷ ಡಾ ಬಿಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ ಸೇರಿ ಹಲವರು ಭಾಗಿಯಾಗಿದ್ದರು.
ಬೆಂಗಳೂರು: ಕೆಲ ಸಚಿವರನ್ನು ಸಿದ್ದರಾಮಯ್ಯನವರ ಚೇಲಾಗಳು ಎಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದ್ದು, ‘ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಇವರು ಚೇಲಾ ಅಂತಾರೆ, ಬಿ ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಎಂದು ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ದಿ ಕೊಡಲಿ. ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ ಎಂದಿದ್ದಾರೆ.
ಬೆಂಗಳೂರು: ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ ಹಿನ್ನಲೆ ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಸರ್ಕಲ್, ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಮೈಸೂರು ರಸ್ತೆ, ಮಾಗಡಿ ರಸ್ತೆ, ವಿಜಯನಗರ, ಜಯನಗರ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ರಾಜಾಜಿನಗರ, ಯಶವಂತಪುರ, ಚಂದ್ರಾಲೇಔಟ್, ನಂದಿನಿ ಲೇಔಟ್, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಬನಶಂಕರಿ, ಬಸವನಗುಡಿ, ಹೆಬ್ಬಾಳ, ಯಲಹಂಕ, ಶ್ರೀನಗರ, ಆರ್.ಟಿ.ನಗರ ಸೇರಿ ಹಲವೆಡೆ ಮಳೆಯಿಂದ ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರಿ ಮಳೆಗೆ ನದಿಯಂತಾಗಿರುವ ಬೆಂಗಳೂರಿನ ಪ್ರಮುಖ ರಸ್ತೆಗಳಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು: ರಾಜ್ಯಕ್ಕೆ ನೀಡುತ್ತಿದ್ದ ಅಕ್ಕಿಯನ್ನ ನಿಲ್ಲಿಸಿದ ಹಿನ್ನಲೆ ಇಂದು ಬೆಳಿಗ್ಗೆ 11ಗಂಟೆಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಇದೀಗ ಮಳೆ ಅಡ್ಡಿಯಾಗಿದೆ. ಹೌದು ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಬೆಂಗಳೂರು: ಬೆಂಗಳೂರಿನಲ್ಲಿಂದು ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ ಹಿನ್ನಲೆ ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಫ್ರೀಡಂಪಾರ್ಕ್ನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಮೌರ್ಯ ಸರ್ಕಲ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆ ಎರಡೂ ಕಡೆ 500ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಡಿಸಿಪಿಗಳಾದ ಶ್ರೀನಿವಾಸಗೌಡ, ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. 6 ಎಸಿಪಿ, 25 ಪಿಐ ಸೇರಿ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬಿಜೆಪಿ ಮುಖಂಡರ ಪ್ರತಿಭಟನೆ ಸ್ಥಳದಲ್ಲಿ KSRP ತುಕಡಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಕೂಡ 2 ದಿನಗಳ ಕಾಲ ಭಾರಿ ಮಳೆಯಾಗುವ ಸಂಭವವಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಮಳೆ ನಿರೀಕ್ಷೆಯಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀ
ಬೆಂಗಳೂರು: ಜೂನ್ ವಿದ್ಯುತ್ ಬಿಲ್ ಕುರಿತು ಬೆಸ್ಕಾಂ ಸ್ಪಷ್ಟಿಕರಣ ನೀಡಿದ್ದು, ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ, ಗ್ರಾಹಕರಿಗೆ ಆನ್ಲೈನ್ನಲ್ಲಿ ಋಣಾತ್ಮಕ ಬಿಲ್ಲುಗಳು ಬಂದಿದೆ. ಇದನ್ನು ಎರಡು ದಿನಗಳ ಒಳಗಾಗಿ ಸರಿಪಡಿಸಲಾಗುವುದು. ಬಿಲ್ ಕುರಿತು ಗೊಂದಲಗಳಿದ್ದರೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದೇ ಸಂಬಂದಿಸಿದ ಉಪ ವಿಭಾಗಕ್ಕೆ ಬೇಟಿ ನೀಡಿ ಅಥವಾ 1912 ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಮಂಗಳೂರು: ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಅನ್ನಭಾಗ್ಯ’ ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿ ಎಂದು ಕಾಂಗ್ರೆಸ್ ಖಂಡಿಸಿ, ಇಂದು ಬೆಳಗ್ಗೆ 11 ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರಿನ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸುವ ಸಾದ್ಯತೆಯಿದೆ.
ಕೋಲಾರ: ಬಂಗಾಳಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಹೌದು ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಕೋಲಾರ ಸೇರಿದಂತೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು, ಮಳೆಯಿಂದ ಮಾವು ಕಟಾವಿಗೆ ತೊಂದರೆಯಾಗಿ, ಮಾವು ಬೆಳೆಗಾರರಿಗೆ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಗಿ ಕಾದು ಕುಳಿತಿದ್ದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಹವಾಮಾನ ಇಲಾಖೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು FCI ನಿರಾಕರಣೆ ಹಿನ್ನಲೆ ಕಾಂಗ್ರೆಸ್ನಿಂದ ಇಂದು ಬೆಳಿಗ್ಗೆ 11.30 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಭಾಗವಾಗಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಮಾಡಲು ನಿಶ್ಚಯಿಸಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಇನ್ನು ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಬೆಂಗಳೂರಿನ ಶಾಸಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಬೆಂಗಳೂರು: ಇದೀಗ ಅಕ್ಕಿ ರಾಜಕೀಯ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿ ಕಾಂಗ್ರೆಸ್ ನಿಲ್ಲಿಸಲು ಮುಂದಾಗಿದೆ. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು FCI ನಿರಾಕರಣೆ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ಧ ನಾಳೆ(ಜೂ.21) ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ ಮಾಡಲಿದೆ.
Published On - 7:02 am, Tue, 20 June 23