ಬೆಂಗಳೂರು, ಮೇ 06: ರಾಜ್ಯದ ವಿವಿಧಡೆ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು 6 ಜನ ಮೃತಪಟ್ಟಿದ್ದಾರೆ. ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಮೃಪಟ್ಟಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕರುಗುಂದ ಗ್ರಾಮದ ಬಳಿ ನಡೆದಿದೆ. ಹೊರನಾಡು ಮೂಲದ ಸುನೀಲ್ (30), ಉಮೇಶ್ (35) ಮೃತ ದುರ್ದೈವಿಗಳು. ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ಜಿಲ್ಲೆಯ ಹುಣಸೇಕಟ್ಟೆ ಗ್ರಾಮದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಹರಿಹರದ ಸಾರಥಿ ಗ್ರಾಮದ ಕೊಟ್ರೇಶಪ್ಪ (65) ಹಾಗೂ ಪುಷ್ಪಾ (55) ಮೃತ ದುರ್ದೈವಿಗಳು.
ಚಿತ್ರದುರ್ಗದಲ್ಲಿ ಮದುವೆ ಮುಗಿಸಿ ವಾಪಸ್ಸಾಗುವಾಗ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತುಮಕೂರು: ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಧುಗಿರಿ ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮದ ಮಹೇಂದ್ರ (19) ಮೃತ ದುರ್ದೈವಿ. ಬೈಕ್ನಲ್ಲಿದ್ದ ಚರಣ್, ಅನಿಲ್ ಎಂಬುವವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಕಾರು ಅಪಘಾತ; ಆಸ್ಪತ್ರೆಗೆ ದಾಖಲು
ರಾಮನಗರ: ಅಪಘಾತದಲ್ಲಿ ಗಾಯಗೊಂಡು ಎಂಟು ದಿನ ಕೋಮಾದಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮೋಹಿತಾ (9) ಮೃತ ದುರ್ದೈವಿ. ಏಪ್ರಿಲ್ 28ರಂದು ಕನಕಪುರ ತಾಲೂಕಿನ ತಾಮಸಂದರ್ ನಿವಾಸಿ ಮಂಜುನಾಥ್ ಟಿಪಿ ಮತ್ತು ಮಗಳು ಮೋಹಿತಾ ಮಧ್ಯಾಹ್ನ ಬೈಕ್ನಲ್ಲಿ ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು. ದಾರಿ ಮಧ್ಯೆ ಮೋಹಿತಾ ಐಸ್ಕ್ರೀಂ ಕೊಡಿಸು ಪಪ್ಪಾ ಎಂದಿದ್ದಾಳೆ. ಮಗಳಿಗೆ ಐಸ್ ಕ್ರೀಂ ಕೊಡಿಸಲು ಮಂಜುನಾಥ್ ಬೈಕ್ ಪಕ್ಕಕ್ಕೆ ಹಾಕಿದ್ದರು. ಬೈಕಿನಿಂದ ಇಳಿಯುವಷ್ಟರಲ್ಲಿ ಹಿಂದಿನಿಂದ ಬಂದ ಕಾರು ತಂದೆ-ಮಗಳಿಗೆ ಗುದ್ದಿದೆ.
ಘಟನೆಯಲ್ಲಿ ಗಾಯಗೊಂಡ ಮಂಜುನಾಥ್ ಹಾಗೂ ಮೋಹಿತಾಳ ಆಸ್ಪತ್ರೆ ಸಾಗಿಸಲಾಗಿತ್ತು. ಆಸ್ಪತ್ರೆ ಸಾಗಿಸುವಷ್ಟರಲ್ಲಿ ಮಂಜುನಾಥ್ ಮೃತಪಟ್ಟಿದ್ದರು. ಮೋಹಿತಾಳನ್ನು ಹಾರೋಹಳ್ಳಿಯ ದಯಾನಂದ್ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮೋಹಿತಾಳ ಬ್ರೇನ್ ಡೆಡ್ ಆಗಿದೆ ಎಂದು ಹೇಳಿದ್ದರು. ಕಳೆದ ಆರು ದಿನಗಳದಿಂದ ವೆಂಟಿಲೇಟರ್ ಮೇಲಿದ್ದ ಮೋಹಿತಾ, ಚೇತರಿಸಿಕೊಳ್ಳದ ಕಾರಣ ವೈದ್ಯರು ಪೋಷಕರ ಅನುಮತಿ ಮೇರೆಗೆ ವೆಂಟಿಲೇಟರ್ ತೆಗೆದಿದ್ದಾರೆ. ಮೋಹಿತಾ ಕೊನೆಯುಸಿರೆಳೆದಿದ್ದಾಳೆ.
ತಂದೆ ಮಗಳಿಗೆ ಗುದ್ದಿದ ಕಾರು ಉದ್ಯಮಿ ಮನೋಹರ್ ಗುಪ್ತಾ ಅವರದ್ದಾಗಿದೆ. ಮನೋಹರ್ ಗುಪ್ತಾ ಕುಡಿದ ಅಮಲಿನಲ್ಲಿ ಗುದ್ದಿದ್ದಾರೆ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಪೊಲೀಸರು ಲಂಚ ತಿಂದು ಆರೋಪಿ ಬಿಟ್ಟು ಕಳುಹಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಮೈಸೂರು: ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿದ್ದಾನೆ. ಚಾಮರಾಜನಗರ ಜಿಲ್ಲೆ ರಾಮಸಮುದ್ರ ಗ್ರಾಮದ ದೊಡ್ಡಬೀದಿ ನಿವಾಸಿ ಗುಣಶೇಖರ್ (22) ಮೃತ ಯುವಕ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ