ಬೆಂಗಳೂರು, ಏಪ್ರಿಲ್ 23: ಕಳೆದ ವರ್ಷ ನವೆಂಬರ್ ಮತ್ತು ಈ ಫೆಬ್ರವರಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ ಸಾರಿಗೆ ಇಲಾಖೆ (Transport Department), ಇನ್ನು ಮುಂದೆ ಅದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ವರದಿಯಾಗಿದೆ. ಮೇ 31ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಲು ಇಲಾಖೆ ಆದೇಶ ನೀಡಿದ್ದು, ನಂತರವೂ ಅಳವಡಿಸದವರಿಗೆ ದಂಡ ವಿಧಿಸಲಿದೆ. 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು.
ಸಾರಿಗೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ಎರಡು ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಪಡೆಯಬೇಕಾಗಿದೆ.
ಈವರೆಗೆ ರಾಜ್ಯದಲ್ಲಿ ಕೇವಲ 34 ಲಕ್ಷ ಎಚ್‌ಎಸ್‌ಆರ್‌ಪಿ ನೋಂದಾಯಿಸಲಾಗಿದೆ. ಗಡುವನ್ನು ಎರಡು ಬಾರಿ ವಿಸ್ತರಿಸಿದ್ದರೂ ಸಹ ಕಡಿಮೆ ಪ್ರಮಾಣದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಫೆಬ್ರವರಿ ವೇಳೆಗೆ ಸುಮಾರು 18 ಲಕ್ಷ ನೊಂದಣಿಯಾಗಿದ್ದರೆ ಏಪ್ರಿಲ್ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಸಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ನಾವು ಮೇ 31 ರವರೆಗೆ ಕಾಯುತ್ತೇವೆ. ಎಚ್‌ಎಸ್‌ಆರ್‌ಪಿ ನೋಂದಣಿ 75 ಲಕ್ಷ ದಾಟುವ ನಿರೀಕ್ಷೆಯಿದೆ. ಅದರ ನಂತರ ಗಡುವು ವಿಸ್ತರಿಸಬೇಕೇ ಎಂಬುದನ್ನು ನಾವು ಆಮೇಲೆ ಪರಿಗಣಿಸುತ್ತೇವೆ. ಸದ್ಯ ಜನರು ನಂಬರ್ ಪ್ಲೇಟ್ ಅಳವಡಿಕೆಗೆ ಮುಗಿಬೀಳುತ್ತಿದ್ದಾರೆ ಎಂಬುದು ಈಗಿನ ಅಂಕಿಸಂಖ್ಯೆಗಳಿಂದ ತಿಳಿದುಬಂದಿದೆ. ಹೀಗಾಗಿ ಇನ್ನೂ ಸ್ವಲ್ಪ ಸಮಯ ನೀಡಿದರೆ ಎಲ್ಲರೂ ಅದನ್ನು ಪೂರ್ಣಗೊಳಿಸಬಹುದು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಗಡುವಿನ ಮೊದಲು ನಂಬರ್ ಪ್ಲೇಟ್ ಅಳವಡಿಸದವರಿಗೆ, ಅವಧಿ ವಿಸ್ತರಿಸದಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಾಹನ ಮಾಲಿಕರಿಗೆ ಗುಡ್ ನ್ಯೂಸ್: ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವ ಅವಧಿ ವಿಸ್ತರಣೆ
ಎಚ್‌ಎಸ್‌ಆರ್‌ಪಿ ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ನಂತರವೂ ಅವರು ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ, ಅಳವಡಿಸುವವರೆಗೆ 1,000 ರೂ. ದಂಡ ವಿಧಿಸಲಾಗುವುದು. ಚುನಾವಣಾ ಮಾದರಿ ನೀತಿ ಸಂಹಿತೆ ಮುಗಿಯುವವರೆಗೆ ನಾವು ಕಾಯುತ್ತೇವೆ ಮತ್ತು ಸರ್ಕಾರದ ಅಭಿಪ್ರಾಯವನ್ನು ಪಡೆಯುತ್ತೇವೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ತೃಪ್ತಿಕರವಾಗಿಲ್ಲದಿದ್ದರೆ ಕಟ್ಟುನಿಟ್ಟಾದ ಜಾರಿಗಾಗಿ ನಾವು ಸರ್ಕಾರವನ್ನು ವಿನಂತಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Tue, 23 April 24