Karnataka Rain News Live: ತಡವಾಗಿಯಾದರೂ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಒಂದೆರಡು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ, ಭೀಮಾ ಸೇರಿ ಪ್ರಮುಖ ನದಿಗಳ ನೀರಿನಮಟ್ಟದಲ್ಲಿ ದಿಢೀರ್ ಏರಿಕೆಯಾಗಿ ಕರಾವಳಿ, ಮಲೆನಾಡು ಸೇರಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಈ ಹಿನ್ನಲೆ ನಾಳೆ(ಜು.26) ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾಪಂಚಾಯತಿ ಸಿಇಒಗಳ ಜೊತೆ ಸಭೆ ನಡೆಸಲಿದ್ದಾರೆ. ಇನ್ನು ಕೃಷ್ಣ, ಭೀಮಾ, ವರದಾ, ದೂದಗಂಗಾ, ಮಲಪ್ರಭಾ, ತುಂಗಾ, ಶರಾವತಿ, ನೇತ್ರಾವತಿ, ಕುಮಾರಧಾರಾ, ಕಾಳಿ, ಕಾವೇರಿ, ಲಕ್ಷ್ಮಣ ತೀರ್ಥ ಸೇರಿ ರಾಜ್ಯದಲ್ಲಿ ಹಲವು ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಆಸ್ತವ್ಯಸ್ತಗೊಂಡಿದೆ. ಇದರ ಜೊತೆ ಕರಾವಳಿ ಭಾಗದ 3 ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿದೆ. ಭಾರೀ ಮಳೆ ಕಾರಣ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಇಂದಿನ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಡಾ.ವೆಂಕಟೇಶ್.ಎಂ.ವಿ- ದಾವಣೆಗೆರೆ ಜಿಲ್ಲಾಧಿಕಾರಿ
ಗಂಗೂಬಾಯಿ ರಮೇಶ್ ಮಾನಕರ್- ಉತ್ತರ ಕನ್ನಡ ಜಿಲ್ಲಾಧಿಕಾರಿ
ಗಂಗಾಧರಸ್ವಾಮಿ.ಜಿ.ಎಂ- ಕೃಷಿ ಮಾರುಕಟ್ಟೆ ನಿರ್ದೇಶಕ
ನಾಗೇಂದ್ರಪ್ರಸಾದ್.ಕೆ- ನಿರ್ದೇಶಕ
ಅಶ್ವಿಜ.ಬಿ.ವಿ- ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ
ಈಚೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಗಾಕಿದ್ದ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಭೇಟಿಯಾಗಿದ್ದು, ಮಾತುಕತೆ ನಡೆಸುತ್ತಿದ್ದಾರೆ.
ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿಚಾರವಾಗಿ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿದ ಕಾಂಗ್ರೆಸ್, ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಹೊಸ ಟೂಲ್ ಕಿಟ್ ತಯಾರಿಸುತ್ತಿದೆ. ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರಿಸುತ್ತಿದೆ. ಇದರ ಭಾಗವಾಗಿ ‘ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ’ ಎಂಬ ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ. ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಹೆಚ್ಚಿನ ಕೆಲಸ ಕೊಟ್ಟಿವೆ. ಐದು ಗ್ಯಾರಂಟಿಗಳ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ನಕಲಿ ಸೃಷ್ಟಿಯ ಮೊರೆ ಹೋಗಿವೆ. ಶಾಸಕರ ಹಳೇ ಲೆಟರ್‌ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಿವೆ ಎಂದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಿಚಾರ ತಿಳಿದ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ವಾಹನ ತಡೆದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕನಕಪುರದ ಹೌಸಿಂಗ್ ಬೋರ್ಡ್ ಬಳಿ 4ಕ್ಕೂ ಹೆಚ್ಚು ಟನ್ ಅಕ್ಕಿ ಜಪ್ತಿ ಮಾಡಲಾಗಿದ್ದು, ಅಕ್ಕಿ ಸಾಗಿಸುತ್ತಿದ್ದ ವಾಹನ, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನ್ನಭಾಗ್ಯದ ಅಕ್ಕಿ ಪಾಲಿಶ್ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ದೇವನಹಳ್ಳಿ: ಜಿಟಿ ಜಿಟಿ ಮಳೆ ನಡುವೆ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ಸರ್ಕಲ್ನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐದು ವಾಹನಗಳಿಗೆ ಹಾನಿಯಾಗಿವೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ಇದಾಗಿದೆ. ಸಿಗ್ನಲ್ನಲ್ಲಿ ವಾಹನಗಳು ನಿಂತಿದ್ದ ವೇಳೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂರು ಕಾರುಗಳು, ಒಂದು ಆಟೋ ಜಖಂಗೊಂಡಿದೆ. ಆಟೋ ಚಾಲಕ ದೇವೆಂದ್ರಪ್ಪ ಎಂಬುವವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನೆಲಮಂಗಲ: ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ ನಡೆದಿದೆ. ಕುಣಿಗಲ್ ಮಾರ್ಗವಾಗಿ ಬರುತ್ತಿದ್ದ ಮಂಜುನಾಥ್ ಇದ್ದ ಬೈಕ್ಗೆ ಶಿವರುದ್ರಯ್ಯ ಎಂಬವರ ಬೈಕ್ ಡಿಕ್ಕಿ ಹೊಡೆದಿದೆ. ಶಿವರುದ್ರಯ್ಯ ಅವರು ನಿರ್ಲಕ್ಷ್ಯತನದಿಂದ ಬೈಕ್ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯ ದೃಶ್ಯ ಟೋಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಕುಮಾರಧಾರ ನದಿ ಬೋರ್ಗರೆದು ಹರಿಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಸ್ಥಳೀಯರನ್ನು ಸ್ಥಳಾಂತರಿಸುತ್ತಿದ್ದಾರೆ. ರಸ್ತೆ ಮೇಲೆ 6-7 ಅಡಿಯಷ್ಟು ನೀರು ತುಂಬಿದ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಸಂಪೂರ್ಣ ಬಂದ್ ಆಗಿದೆ.
ಕೊಪ್ಪಳ: ಕಾಂಗ್ರೆಸ್ ಹಿರಿಯ ಶಾಸಕರು ಸಚಿವರ ವಿರುದ್ದ ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಪತ್ರ ಬರೆದ ವಿಚಾರ ನನಗೆ ಮಾಹಿತಿ ಇಲ್ಲ. ಶಾಸಕರ ಕೆಲಸವನ್ನು ಸಚಿವರು ಮಾಡಲೇಬೇಕು. ಮುಖ್ಯಮಂತ್ರಿಗಳು ಏನು ಸೂಚನೆ ಕೊಡುತ್ತಾರೋ ಆ ಕೆಲಸ ಮಾಡಬೇಕು. ನನ್ನ ಇಲಾಖೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ. ನನ್ನ ಹತ್ತಿರ ಬಂದಿರುವ ಎಲ್ಲಾ ಶಾಸಕರ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಕೆಲಸ ಮಾಡಿಕೊಟ್ಟ ತೃಪ್ತಿ ನನಗಿದೆ ಎಂದರು. ಸರ್ಕಾರದ ವಿರುದ್ಧ ತಂತ್ರ ಹೂಡಕಾಗುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಅಂತಹ ಭೀತಿಯೂ ಇಲ್ಲ. ಅಂತಹ ಪರಿಸ್ಥಿತಿಯೂ ಬರುವುದಿಲ್ಲ. ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಇನ್ನೂ ಹತ್ತು ಹದಿನೈದು ವರ್ಷ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮುಂದೆ ಜೆಡಿಎಸ್ ನಲ್ಲಿ, ಬಿಜೆಪಿಯಲ್ಲಿ ಯಾವ ಶಾಸಕರು ಇರಲ್ಲ. ಜೆಡಿಎಸ್ , ಬಿಜೆಪಿ ಶಾಸಕರು ಕಾಂಗ್ರೆಸ್ ಬರ್ತಾರೆ ಎಂದು ಬಾಂಬ್ ಸಿಡಿಸಿದರು.
ಚಿಕ್ಕಬಳ್ಳಾಫುರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಯಾರು ಅಲ್ಲಾಡಿಸಲು ಸಾದ್ಯವಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಬಲೆ ತುಂಬಾ ತೂತು ಆಗಿದೆ. ತೂತು ಬಿದ್ದ ಬಲೆಯಲ್ಲಿ ಮೀನು ಸಿಗಲ್ಲ ಬಲೆಯೂ ಸಿಗಲ್ಲವೆಂದು ಎಂದರು.
ಚಿಕ್ಕಬಳ್ಲಾಫುರ: ಮಣಿಪುರದಲ್ಲಿ ದೊಂಬಿ ಗಲಾಟೆ ಮಹಿಳೆಯರ ಮೇಲೆ ಅತ್ಯಚಾರ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಣಿಪುರದಲ್ಲಿ ಎರಡು ಲಕ್ಷ ಜನ ನಿರಾಶ್ರಿತರ ಕೇಂದ್ರದಲ್ಲಿ ಇದ್ದಾರೆ. ಇದು ದೇಶಕ್ಕೆ ನಾಚಿಕೆ ತರುವ ವಿಚಾರ. ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ಮೋದಿ ಸಮರ್ಪಕ ಉತ್ತರ ಕೊಟ್ಟಿಲ್ಲ. ಸಮರ್ಪಕ ಚರ್ಚೆಗೂ ಅವಕಾಶ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಂಸತ್ತನ್ನು ಅಲಕ್ಷ್ಯ ಮಾಡಿದ್ದಾರೆ. ಮಣಿಪುರದ ವಿಚಾರದಲ್ಲಿ ಅಲ್ಲಿಯ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವೈಪಲ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಡೆಯಿಂದಲೆ ಮಣಿಪುರದಲ್ಲಿ ಬೆಂಕಿ ಉರಿಯುತ್ತಿದೆ ಎಂದರು.
ಹುಬ್ಬಳ್ಳಿ: ಗೃಹಲಕ್ಷ್ಮೀ ಅರ್ಜಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗೃಹಲಕ್ಷ್ಮೀ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಬೇಕು ಎಂದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ದಿನದಿಂದಲೂ ಎಲ್ಲವೂ ಸರಿಯಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮುಖ್ಯಮಂತ್ರಿ ಆಯ್ಕೆಗಾಗಿ ಸೀಕ್ರೆಟ್ ವೋಟಿಂಗ್ ಮಾಡಿದ್ದರು. ಈಗ ಸಚಿವರ ವಿರುದ್ಧ ಶಾಸಕರ ಅಸಮಾಧಾನವಿದೆ. ಭ್ರಷ್ಟಾಚಾರದಲ್ಲಿ ಪೈಪೋಟಿ ಇರುವುದರಿಂದ ಅಸಮಾಧಾನ ಸಹಜ ಇದನ್ನು ಯಾರೂ ಮರೆಮಾಚಲು ಆಗಲ್ಲ ಎಂದರು.
ಬಾಗಲಕೋಟೆ: ಸಿಂಗಾಪುರದಲ್ಲಿ ಆಪರೇಷನ್ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ‘ಬಿಜೆಪಿಯವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವವರಲ್ಲ, ಅಡ್ಡದಾರಿ ಹಿಡಿದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆಂದು ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನರು ತಿರಸ್ಕರಿಸಿದರೂ ಅವರ ಪ್ರಯತ್ನ ನಡೆದಿರಬೇಕು ಎಂದಿದ್ದಾರೆ.
ಶಿವಮೊಗ್ಗ: ಸಾಗರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನಲೆ ವಿಶ್ವವಿಖ್ಯಾತ ಜೋಗ ಜಲಪಾತ ಧುಮುಕುತ್ತಿದೆ. ಹೌದು ಮಳೆ ಹಿನ್ನಲೆ ಜೋಗ್ ಫಾಲ್ಸ್ ಸೌಂದರ್ಯ ಇಮ್ಮಡಿಯಾಗಿದೆ. ಇದರಿಮದ ಪ್ರವಾಸಿಗರು ಜೋಗ್ ಫಾಲ್ಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಮೈಸೂರು: ಮೈಸೂರು ಪಾಕ್ಗೆ ವಿಶ್ವದ ಸ್ಟ್ರೀಟ್ ಸ್ವೀಟ್ ಫುಡ್ಗಳ ಪೈಕಿ 14ನೇ ಸ್ಥಾನ ಲಭಿಸಿರುವ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಮೈಸೂರು ಪಾಕ್ ವಿತರಣೆ ಮಾಡಲಾಗುತ್ತಿದೆ. ಹೌದು ಮೈಸೂರಿನ ಅಪೂರ್ವ ಸ್ನೇಹ ಬಳಗದಿಂದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಪ್ರವಾಸಿಗರು ಹಾಗು ಭಕ್ತರಿಗೆ ಮೈಸೂರು ಪಾಕ್ ಹಂಚುತ್ತಿದ್ದಾರೆ.
ಧಾರಾವಾಡ: ಜಿಲ್ಲೆಯಲ್ಲಿ ಮಳೆಗೆ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಧಾರಾವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಅಧಿಕಾರಿಗಳ ಮಾಹಿತಿ ಪ್ರಕಾರ100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಇನ್ನು ಜಿಲ್ಲೆಯ ಬೆಳೆ ಹಾನಿ ಬಗ್ಗೆ ಅಂದಾಜು ನಮಗೆ ಸಿಕ್ಕಿಲ್ಲ. ಮಳೆ ಇನ್ನೂ ಹೆಚ್ಚಾದರೆ ರೈತರಗೆ ಅನಾನುಕೂಲ ಆಗಲಿದೆ ಎಂದರು.
ಬೆಂಗಳೂರು: ಸಚಿವರ ಕಾರ್ಯ ವೈಖರಿಗೆ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಾಗಿ ಕಾಯುತ್ತಿದ್ದಾರೆ. ಜುಲೈ 27ರಂದು ಬೆಂಗಳೂರಿನ ಅರಮನೆ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಹಿನ್ನಲೆ ಇತ್ತ ಹರಿಪ್ರಸಾದ್ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ 30ಕ್ಕೂ ಹೆಚ್ಚು ಹಿರಿಯ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ : ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದ್ದು, ಜಿಲ್ಲೆಯ ಗೋಕಾಕ್-ಶಿಂಗಳಾಪುರ ಸಂಪರ್ಕಿಸುವ ಸೇತುವೆ ಒಂದು ವಾರದಿಂದ ಜಲಾವೃತವಾಗಿದೆ. ಸಂಪರ್ಕ ಕಡಿತಗೊಂಡು ಜನರು ಕಂಗಾಲಾಗಿದ್ದು, ಹದಿನೈದು ಕಿ.ಮೀ ಸುತ್ತಿ ಗ್ರಾಮಕ್ಕೆ ಹೋಗುತ್ತಿದ್ದಾರೆ.
ಬೆಂಗಳೂರು: ಕೆಇಆರ್ಸಿ ಅಧಿಕಾರಿಗಳ ಜೊತೆ ಇಂಧನ ಸಚಿವ ಕೆಜೆ ಜಾರ್ಜ್ ಅವರು ಇಂದು(ಜು.25) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಕೆಇಆರ್ಸಿ ಅಧ್ಯಕ್ಷರು ಹಾಗೂ ಸದ್ಯಸರುಗಳ ಜೊತೆ ವಿದ್ಯುತ್ ದರ ಪರಿಷ್ಕರಣೆ ದರ ಸಂಬಂಧ ಚರ್ಚೆ ನಡೆಸಲಿದ್ದಾರೆ. ಹೌದು ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆದಿತ್ತು. ಇದೀಗ ವಿದ್ಯುತ್ ದರ ಏರಿಕೆ ಸಂಬಂಧ ಇಂದು ಸಚಿವ ಕೆಜೆ ಜಾರ್ಜ್ ಚರ್ಚೆ ನಡೆಸಲಿದ್ದಾರೆ.
ಹಾವೇರಿ: ತಾಲೂಕಿನ ಮಾಳಪುರ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಕುಸಿದು ಗಾಯಗೊಂಡಿದ್ದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಮನೆಕುಸಿದು ಗಾಯಗೊಂಡಿದ್ದ ಭಾಗ್ಯಮೂರು ವರ್ಷದ ಮಗುವನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಖಾಸಗಿ ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಗ್ರಾಹಕರಿಂದ 100, 200 ರೂಪಾಯಿ ಹಣ ಪಡೆದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಹಿನ್ನಲೆ ಮೂರು ಸೈಬರ್ ಕೇಂದ್ರಗಳ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಜಿಲ್ಲೆಯ ಮಾನ್ವಿಯ 3 ಸೈಬರ್ ಕೇಂದ್ರಗಳ ವಿರುದ್ಧ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ವಿಪಕ್ಷ ನಾಯಕನಿಲ್ಲದಿದ್ದರೂ ಬಿಜೆಪಿ ರಾಜ್ಯ ಪ್ರವಾಸಕ್ಕೆ ಮುಂದಾಗಿದೆ. ಬರ, ನೆರೆ ಬಗ್ಗೆ ವರದಿ ಸಲ್ಲಿಸಲು ಪ್ರತ್ಯೇಕ ತಂಡಗಳಾಗಿ ಪ್ರವಾಸಕ್ಕೆ ಬಿಜೆಪಿ ನಿರ್ಧಾರ ಮಾಡಿದೆ. ಸಿಎಂ, ಸಚಿವರು ಪ್ರವಾಸಕ್ಕೂ ಮುನ್ನ ರಾಜ್ಯಮಟ್ಟದ ಪದಾಧಿಕಾರಿಗಳ ತಂಡದಿಂದ ನೆರೆ ಕುರಿತು ಪ್ರವಾಸ ಮಾಡಲಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಧ್ಯಯನದ ವರದಿ ಸಲ್ಲಿಸಲಿದೆ.
ಬೆಂಗಳೂರು: ಮಹಾನಗರದಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ ಶುರುವಾಗಿದ್ದು, ರಾಜ್ಯದ ಈ ಕೆಳಗಿನ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಕಲಬುರಗಿಯಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆಯಿಂದ ಸೂಚನೆ ನೀಡಿದೆ.
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ. ಇಂದು(ಜು.25) ನಡೆಯಬೇಕಿದ್ದ ಎಲ್ಲಾ ಪದವಿ ಪರೀಕ್ಷೆ ಮುಂದೂಡಿಕೆಗೆ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಪರಿಷ್ಕೃತ ದಿನಾಂಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ: ಇಂದು(ಜು.25) ಹಾವೇರಿ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯನವರು ಆಗಮಿಸಲಿದ್ದು, ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಬಳಿಕ ಹುಬ್ಬಳ್ಳಿಯಿಂದ ನೇರವಾಗಿ ಹಾವೇರಿಗೆ ಆಗಮಿಸಲಿದ್ದಾರೆ. ನಂತರ ಮದ್ಯಾಹ್ನ 12.30 ಕ್ಕೆ ಸಿಎಂ ಸಿದ್ದರಾಮಯ್ಯನವರು ಹಾವೇರಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಸಿಎಂ ಮೊದಲ ಕೆಡಿಪಿ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯನವರ ಇವತ್ತಿನ ಸಭೆ ಭಾರಿ ಕುತೂಹಲ ಮೂಡಿಸಿದೆ.
Published On - 7:59 am, Tue, 25 July 23