2024 ರಲ್ಲಿ ಲೋಕಸಭಾ ಚುನಾವಣೆ ಇದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟ್ಟಿಹಾಕಬೇಕು ಮತ್ತು ಬಿಜೆಪಿ ಶತಾಯಗತಾಯ ಅಧಿಕಾರದಿಂದ ದೂರವಿಡಲು ವಿಪಕ್ಷಗಳು ಒಂದಾಗಿವೆ. ಈ ಸಂಬಂಧ ಈಗಾಗಲೆ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿದ್ದವು. ಆದರೆ ಇಲ್ಲಿ ಒಮ್ಮತ ಮೂಡದ ಕಾರಣ ಇಂದು ಬೆಂಗಳೂರಲ್ಲಿ ಸಭೆ ನಡೆಸಲಿವೆ. ಇದೊಂದಡೆಯಾದರೆ ರಾಜ್ಯ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಜೆಪಿ ಜೊತೆ ಸಖ್ಯ ಬೆಳೆಸಲು ಮುಂದಾಗಿದೆ. ಇನ್ನು ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಬರಗಾಲದ ಛಾಯೆ ಆವರಿಸುತ್ತಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್
ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆ ವಿಚಾರವಾಗಿ ಇಂದು ಕೇವಲ ಪ್ರಾಸ್ತಾವಿಕವಾಗಿ ಚರ್ಚಿಸಿದ್ದಾರೆ. ನಾಳೆಯ ಅಜೆಂಡಾ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂದಿನ ಸಭೆಯಲ್ಲಿ ನಾಳೆಯ 6 ಅಂಶಗಳ ನಿರ್ಣಯದ ಕುರಿತು ಪ್ರಸ್ತಾಪ ಮಾಡಲಾಗಿದೆ.
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ನಾರಾಯಣ ಹೆಲ್ತ್ ಸಿಟಿಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇತ್ತೀಚೆಗೆ ಲಘು ಹೃದಯಾಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆಯ ಔತಣಕೂಟ ಮುಕ್ತಾಯವಾಗಿದೆ. ಸಭೆ, ಔತಣಕೂಟ ಮುಗಿಸಿ ಹೋಟೆಲ್‌ನಿಂದ ಎಐಸಿಸಿ ಅಧ್ಯಕ್ಷ ಖರ್ಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವರು ಕೂಡ ತೆರಳಿದ್ದಾರೆ.
ವಿಪಕ್ಷಗಳ ಸಭೆ ಹಿನ್ನೆಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಿ ತೆರಳಲಿರುವ ಸ್ಪೀಕರ್ ಯುಟಿ ಖಾದರ್ ತೆರಳಿದ್ದಾರೆ. ಡೆಪ್ಯುಟಿ ಸ್ಪೀಕರ್ ರಾಮಪ್ಪ ಲಮಾಣಿ ಕೂಡ ಆಗಮಿಸಿದ್ದಾರೆ.
ಸಭೆಯಲ್ಲಿ ಭಾಗಿಯಾಗಿ ಇದೀಗ ಔತಣಕೂಟಕ್ಕೆ ವಿಪಕ್ಷ ನಾಯಕರು ತೆರಳಿದ್ದಾರೆ. ಸಭೆ ಮುಗಿಸಿ ನೇರವಾಗಿ ಐಟಿಸಿ ಹೊಟೇಲ್ಗೆ ವಾಸ್ತವ್ಯಕ್ಕೆ ಎಂಕೆ ಸ್ಟಾಲಿನ್ ತೆರಳಿದ್ದಾರೆ. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಸೇರಿ ಉಳಿದೆಲ್ಲ ರಾಷ್ಟ್ರೀಯ ನಾಯಕರು ಔತಣಕೂಟ ಪ್ರಾರಂಭಿಸಿದ್ದಾರೆ.
ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯೂ ಜಾಸ್ತಿ ಆಗಿದ್ದು, ಶೇಕಡಾ 80ರಷ್ಟು ಬಿತ್ತನೆ ಕಾರ್ಯ ಆಗಿದೆ. ರಸಗೊಬ್ಬರ, ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ, ಅಲ್ಲಿ ಗಲಾಟೆ ಆಗಿಲ್ಲ. ಒಬ್ಬ ರೈತನ ಸಾವಿಗೂ ಬೆಲೆ ಇದೆ, ಎಲ್ಲರ ಜೀವಕ್ಕೂ ಬೆಲೆ ಇದೆ. ರೈತರ ಆತ್ಮಹತ್ಯೆ ಕೇಸ್ನಲ್ಲೂ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ.
ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದು, ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 6 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು ಎಂದರು.
ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ.
ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಬ್ಬೊಬ್ಬರನ್ನಾಗಿ ಸ್ವಾಗತಿಸುತ್ತಿದರು. ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸಹ ಉಪಸ್ಥಿತಿ.
ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಂಜೆ 7 ಗಂಟೆಗೆ ಸಂಪುಟ ಸಭೆ ಕರೆಯಲಾಗಿದೆ.
ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯನ್ನು ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು, ಸಭೆಯಲ್ಲಿ 23 ಪಕ್ಷದ 49 ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ.
ವಿಪಕ್ಷಗಳ ಸಭೆ ಹಿನ್ನೆಲೆ ಜಾರ್ಖಂಡ್ ಸಿಎಂ ಜೆಎಂಎಂನ ಹೇಮಂತ್ ಸೊರೇನ್, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ನ ಓಮರ್ ಅಬ್ದುಲ್ಲಾ ತಾಜ್ ಹೊಟೇಲ್ಗೆ ಆಗಮಿಸಿದ್ದಾರೆ. ಎಚ್ಎಎಲ್ಗೆ ಆಗಮಿಸಿರುವ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಶಿವಸೇನೆಯ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ
ತಾಜ್ ಹೊಟೇಲ್ಗೆ ಆಗಮಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 2007ರಿಂದ ಡಾ.ಮಂಜುನಾಥ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷವೇ ಡಾ.ಮಂಜುನಾಥ್ ಅಧಿಕಾರ ಅವಧಿ ಮುಕ್ತಾಯವಾಗಿತ್ತು. ರೋಗಿಗಳು, ಸಿಬ್ಬಂದಿ ಒತ್ತಾಯದ ಮೇರೆಗೆ 1 ವರ್ಷ ಮುಂದುವರಿಸಲಾಗಿತ್ತು.
ಜುಲೈ 19ರಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.C.N.ಮಂಜುನಾಥ್ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಡಾ.ಸಿ.ಎನ್ಮಂಜುನಾಥ್ ಸೇವಾವಧಿ ಮುಂದುವರಿಸಬೇಕಾ? ಅಥವಾ ಹೊಸ ನಿರ್ದೇಶಕರ ಆಯ್ಕೆ ಮಾಡಬೇಕಾ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ.
ಜಯದೇವ ಸಂಸ್ಥೆಯ ಆಡಳಿತ ಮಂಡಳಿ ಜತೆ ಸಿಎಂ ಸಿದ್ಧರಾಮಯ್ಯ ಮಹತ್ವದ ಸಭೆ ನಡೆಸುತ್ತಿದ್ದಾರೆ. ಜಯದೇವ ಆಸ್ಪತ್ರೆಯ ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ, ಜಯದೇವ ಆಸ್ಪತ್ರೆ ನಿರ್ದೇಶಕರ ಆಯ್ಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುತ್ತಿದೆ.
ರೈತ ಮುಖಂಡರ ನಿಯೋಗದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು, ಭೂಸ್ವಾಧೀನ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಬಗ್ಗೆ ಚರ್ಚೆ ಮಾಡಲಾಗಿದೆ. ಕಬ್ಬಿಗೆ ದರ ನಿಗದಿ ಮಾಡಿ ಪ್ರೋತ್ಸಾಹ ಧನ ನೀಡುವಂತೆ ರೈತರ ಮನವಿ ಮಾಡಲಾಗಿದೆ.
ಬಿಜೆಪಿ ಮುಗಿಸಲು ವಿಪಕ್ಷಗಳು ಒಂದಾಗಿವೆ ಅನ್ನೋ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಿಲ್ವಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 28 ಕಡೆ ಪ್ರಧಾನಮಂತ್ರಿ ಮೋದಿ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ನಾವು ಗೆದ್ದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಮಿತ್ರಪಕ್ಷಗಳು ಸೋಲಲಿವೆ ಎಂದರು.
ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೇ ಬಿಜೆಪಿಯವರು ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಮೋದಿ ಪ್ರಧಾನಿಯಾದ ಮೇಲೆ ಬೆಲೆ ಏರಿಕೆ, ಆರ್ಥಿಕತೆ ಹಾಳಾಗಿದೆ. ಜನರು ಬದುಕಲು ಸಾಧ್ಯವಾಗದ ರೀತಿಯಾಗಿದೆ ಎಂದರು.
ಬೆಂಗಳೂರು-ಮೈಸೂರು ಹೈವೇಯಲ್ಲಿ ಅಪಘಾತ ಹೆಚ್ಚಳ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಸಮಿತಿ ರಚನೆ ಮಾಡಿದೆ. ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲು ಮೂವರು ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಿದೆ.
ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ್ದು, ವರ್ಗಾವಣೆಯಲ್ಲೇ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೇವಲ 2 ತಿಂಗಳಲ್ಲೇ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ವರ್ಗಾವಣೆ ದಂಧೆ ಬಗ್ಗೆ ಓರ್ವ ಅಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ ಎಂದರು.
ಮಹಾಘಟಬಂಧನ್ ಸಭೆಗೆ ಕಾಂಗ್ರೆಸ್ ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. 123 ಸ್ಥಾನ ಬರದಿದ್ದರೆ ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಪಂಚರತ್ನ ಯೋಜನೆ ಜಾರಿಗೆ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡ್ತೇನೆ ಎಂದಿದ್ದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ನಿಂದ ಅವಕಾಶವಾದಿ ರಾಜಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು, ಇವರನ್ನ ಕೇಳಿ ನನ್ನ ಪಕ್ಷವನ್ನು ಮುನ್ನಡೆಸುವ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಗುಲಾಮನಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಸದನದಲ್ಲಿ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದರೆ ನನ್ನ ಕಾಲದಲ್ಲಿ ವರ್ಗಾವಣೆಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಅಂತ ನನ್ನ ಮೇಲೆ ದಾಖಲೆ ಬಿಡುಗಡೆ ಮಾಡುತ್ತಿರಾ. ನನ್ನ ಕಾಲದಲ್ಲಿ ವರ್ಗಾವಣೆಗೆ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ಅನುಭವಿ ಸಿಎಂ, ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಸದನವನ್ನು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗೆ ಬಳಕೆ ಆಗಿದೆ. ದೇಶದ ಜನರನ್ನು ಪ್ರತಿನಿಧಿಸುವ ಪ್ರಧಾನಿ ಮೋದಿಯನ್ನು ಗೌರವಿಸಬೇಕು. ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದಿದೆ. ಗ್ಯಾರಂಟಿಗಳಿಗೆ ಎಲ್ಲಿಂದ ಹಣ ಸಂಗ್ರಹ ಮಾಡ್ತೀರಾ ಎಂದು ಹೇಳಿಲ್ಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಂಗಳೂರು: ಮಹಾಘಟಬಂಧನ್ ಸಭೆಗೆ ಹಲವು ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್ ನಾಯಕರು ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. 123 ಸ್ಥಾನ ಬರದಿದ್ದರೆ ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಿದರು. ಪಂಚರತ್ನ ಯೋಜನೆ ಜಾರಿಗೆ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದೆ. ಸಿದ್ದರಾಮಯ್ಯರನ್ನು ಕನ್ನಡ ಪಂಡಿತರು ಅಂತ ಅಂದುಕೊಂಡಿದ್ದೆ. ಅದರೆ ಸಿದ್ದರಾಮಯ್ಯ ಅವರಿಗೆ ಕನ್ನಡ ಅರ್ಥ ಆಗಲ್ಲ ಅಂತ ಅನ್ನಿಸುತ್ತದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರುಶಾಸಕರ ಸಭೆ ಕರೆದಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಧಾನಸೌಧದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಲಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಂಗಳೂರು: ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು” ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು: ನಾಡಿನ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬೇಕು. ಸುಮ್ಮನೆ ಈ ರೀತಿ ಕಿರುಚಾಡಿ ಸಮಯ ಹಾಳುಮಾಡಬೇಡಿ. ಮಾಧ್ಯಮಗಳಲ್ಲಿ ನೋಡಿದ ಜನ ತಪ್ಪು ತಿಳಿದುಕೊಳ್ಳುತ್ತಾರೆ. ಇವರು ಕಿರುಚಾಡುವುದಲ್ಲಿ ಕಾಲ ಕಳೆಯುತ್ತಾರೆಂಬ ಭಾವನೆ ಮೂಡುತ್ತದೆ. ಬಜೆಟ್ ಮೇಲೆ ಚರ್ಚೆ ವೇಳೆ ಪದೇಪದೆ ಎದ್ದು ನಿಲ್ಲಬೇಡಿ ಎಂದು ವಿಧಾನಸಭೆಯಲ್ಲಿ ಸದಸ್ಯರಿಗೆ ಸ್ಪೀಕರ್ ಯು.ಟಿ ಖಾದರ್ ಸೂಚನೆ ನೀಡಿದರು.
ಬೆಂಗಳೂರು: ವಿಧಾನಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಮಂಡನೆ ಮಾಡಲಾಯಿತು. ಕೊರೊನಾ ನಿಯಂತ್ರಿಸುವಲ್ಲಿ ಅಂದಿನ ಸರ್ಕಾರ ವಿಫಲವಾಗಿದೆ. ವೈದ್ಯಕೀಯ ಉಪಕರಣಗಳು, ಔಷಧ ಸಾಮಗ್ರಿ ಖರೀದಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆ, ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿದ್ದ ಮೊತ್ತ, ವಿವಿಧ ಇಲಾಖೆಗಳಿಂದ ಭರಿಸಲಾಗಿದ್ದ ವೆಚ್ಚದ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಪೂರಕ ದಾಖಲೆಗಳನ್ನು ಆರೋಗ್ಯ ಇಲಾಖೆ ಸಲ್ಲಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದು, ಚರ್ಚೆ ವೇಳೆ ದ್ವೇಷದ ಬಜೆಟ್ ಮಂಡನೆ ಮಾಡಿದ್ದಾರೆ ಎಂದ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇದರಿಂದ ಸದನದಲ್ಲಿ ಕೆಲವು ನಿಮಿಷಗಳ ಕಾಲ ಗದ್ದಲ ಏರ್ಪಟ್ಟಿತು.
ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಆಡಳಿತ ಪಕ್ಷದ ಸದಸ್ಯರ ಗೈರಾಗಿದ್ದಾರೆ. ಸದನದಲ್ಲಿ ಯಾರೂ ಇಲ್ಲ, ಕಲಾಪ ಮುಂದೂಡಿಕೆ ಮಾಡಿ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್ ಯುಟಿ ಖಾದರ್ ಮಾತನಾಡಿ ಮೀಟಿಂಗ್ ಇದೆ ಹಾಗಾಗಿ ಬಂದಿಲ್ಲ. ಸದನಕ್ಕೆ ಬರುತ್ತಾರೆ. ಮುಂದೂಡಿಕೆ ಮಾಡುವುದೇ ಪರಿಹಾರ ಅಲ್ಲ ಎಂದರು.
ಬೆಂಗಳೂರು: ವಿರೋಧ ಪಕ್ಷಗಳಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಏನೇ ನಾಟಕ ಮಾಡಿದರೂ ಜನ ವಿಪಕ್ಷಗಳಿಗೆ ಬುದ್ಧಿ ಕಲಿಸುತ್ತಾರೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ. ಇದನ್ನು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು: ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ ಅವರು. ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನುವ ಭ್ರಮೆಯಲ್ಲಿದ್ದಾರೆ. ಆಹ್ವಾನ ಕೊಟ್ಟರು, ಇಲ್ಲವೋ ಅನ್ನೊದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ. ಎನ್ಡಿಎ ಸಭೆಯಲ್ಲಿ ಭಾಗಿ ವಿಚಾರವಾಗಿ ಮಾತನಾಡಿದ ಅವರು ಇನ್ನೂ ದಿನಗಳಿವೆ ನೋಡೊಣ. ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಚಾಮರಾಜನಗರ: ಅಕ್ರಮವಾಗಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿ ತಗುಲಿ ಒಂಟಿ ಸಲಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ. ಬೆಳೆ ರಕ್ಷಣೆಗೆಂದು ಜಮೀನಿನ ತಂತಿ ಬೇಲಿಗೆ ಮಾಲಿಕ ಶಿವಾರಾಜು ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದನು. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿ ಜಮೀನು ಮಾಲೀಕ ಶಿವರಾಜು ಪರಾರಿಯಾಗಿದ್ದಾನೆ. ಆರೋಪಿಗಾಗಿ ಅರಣ್ಯಾಧಿಕಾರಿಗಳ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯುವ ಹಿನ್ನೆಲೆ ಇಂದು ಬೆಂಗಳೂರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಸೋನಿಯಾ ಗಾಂಧಿ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಆಗಮಿಸಲಿದ್ದಾರೆ. ಸಭೆಯಲ್ಲಿ 24 ವಿಪಕ್ಷಗಳ 49 ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೇ ವಿಶೇಷ ವಿಮಾನದ ಮೂಲಕ ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಲಾಲೂ ಪ್ರಸಾದ್, ನಿತೀಶ್, ಶರದ್ ಪವಾರ್ ಕೂಡ ಆಗಮಿಸಲಿದ್ದಾರೆ.
ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ಇಂದು ಸಂಜೆ ಅಥವಾ ನಾಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಜುಲೈ 18 ರಂದು ದೆಹಲಿಯಲ್ಲಿ ಎನ್ಡಿಎ ಸಭೆ ನಡೆಯಲಿದ್ದು, ಎನ್ಡಿಎ ಸಭೆಗೂ ಮುನ್ನ ಬಿಜೆಪಿ ಜೊತೆ ಹೆಚ್ ಡಿ ಕುಮಾರಸ್ವಾಮಿ ಮಾತುಕತೆ ನಡೆಸುತ್ತಾರಾ ಕಾದುನೋಡಬೇಕಿದೆ.
Published On - 8:04 am, Mon, 17 July 23