3 ದಿನದ ಹಸುಗೂಸಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ: ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್
ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ 3 ದಿನದ ಹಸುಗೂಸನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ.
ಬೆಂಗಳೂರು: ತೆರೆದ ಹೃದಯ ಶಸ್ತ್ರಚಿಕಿತ್ಸೆ (Open Heart Surgery) ಹಿನ್ನೆಲೆ 3 ದಿನದ ಹಸುಗೂಸನ್ನು (Baby) ಶಿವಮೊಗ್ಗದ (Shivamogga) ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಶಿವಮೊಗ್ಗದಿಂದ ರಾತ್ರಿ 10.10ಕ್ಕೆ ಜೀರೋ ಟ್ರಾಫಿಕ್ನಲ್ಲಿ ಹೊರಟ ಆ್ಯಂಬುಲೆನ್ಸ್ ರಾತ್ರಿ 1.30ಕ್ಕೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಆಗಮಿಸಿದೆ. ನಾರಾಯಣ ಹೃದಯಾಲಯದಲ್ಲಿ ವೈದ್ಯರು ನವಜಾತ ಶಿಶುವಿಗೆ ಓಪನ್ ಹಾರ್ಟ್ ಸರ್ಜರಿ ನಡೆಸಲಿದ್ದಾರೆ. ಇನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಮಗುವನ್ನು ಕರೆತಂದ ಆ್ಯಂಬುಲೆನ್ಸ್ ಚಾಲಕ ಜಗದೀಶ್, ಸ್ಟಾಫ್ ನರ್ಸ್ಗಳಾದ ಹನುಮಂತ ಹಾಗೂ ವಿನಯ್ ಅವರಿಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮಗುವನ್ನು ಸರಿಯಾದ ಸಮಯಕ್ಕೆ ಕರೆತಂದಿದ್ದು ಹೆಮ್ಮೆ ಅನ್ನಿಸುತ್ತೆ. ನಾವು ಶಿವಮೊಗ್ಗ ಬಿಟ್ಟಾಗ ರಾತ್ರಿ 10 ಗಂಟೆ 8 ನಿಮಿಷ ಆಗಿತ್ತು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈಗ ಮಗುವನ್ನು ನಾರಾಯಣ ಹೃದಯಾಲಯಕ್ಕೆ ತಲುಪಿಸಿದ್ದೇವೆ. ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಪೊಲೀಸರು ಸಹಾಯ ಮಾಡಿದರು. ಸರ್ವಿಸ್ ರಸ್ತೆಯಲ್ಲಿ ದೊಡ್ಡವಾಹನಗಳನ್ನೆಲ್ಲಾ ಡೈವರ್ಟ್ ಮಾಡಿದರು ಎಂದು ನಾರಾಯಣ ಹೃದಯಾಲಯ ಬಳಿ ಌಂಬುಲೆನ್ಸ್ ಚಾಲಕ ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಟನಲ್ ಕಾಮಗಾರಿ 2025ರ ಮಾರ್ಚ್ ವೇಳೆಗೆ ಪೂರ್ಣ: ಡಿಕೆ ಶಿವಕುಮಾರ್
ಸರಿಯಾದ ಸಮಯಕ್ಕೆ ಮಗುವನ್ನು ತಲುಪಿಸುವುದು ಸವಾಲಾಗಿತ್ತು. ಪೊಲೀಸರು ಸಹಕಾರದಿಂದ ಮಗುವನ್ನು ಆಸ್ಪತ್ರೆಗೆ ತಲುಪಿಸಿದ್ದೇವೆ. ಮಗು ಗುಣಮುಖವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಸ್ಟಾಫ್ ನರ್ಸ್ಗಳಾದ ಹನುಮಂತ ಹಾಗೂ ವಿನಯ್ ಹೇಳಿದ್ದಾರೆ.
ನನಗೆ ಇದ್ದ ಕೆಲಸ ಮಗುವನ್ನು ಸೇಫ್ ಆಗಿ ನೋಡಿಕೊಳ್ಳಬೇಕು. ಸ್ಯಾಚುರೇಷನ್ ಮೇಂಟೆನ್ ಆಗುವ ತರ ನೋಡಿಕೊಳ್ಳಬೇಕು. ರಸ್ತೆ ಮೂಲಕ ಬಂದರೇ ಗೈಡೆನ್ಸ್ಗೆ ಡಾಕ್ಟರ್ ಕೂಡ ಇರಲ್ಲ. ಕೆಲವೊಮ್ಮೆ ಸ್ಯಾಚುರೇಶನ್ ಲೆವಲ್ ಕಡಿಮೆ ಆಗುತ್ತಿತ್ತು. 78, 79 ವರೆಗೂ ಬರ್ತಿತ್ತು. ಸಾಮಾನ್ಯವಾಗಿ 90 ಇರಬೇಕು. ಇದೀಗ ಮಗು ಸೇಫ್ ಆಗಿ ಆಸ್ಪತ್ರೆಗೆ ಬಂದಿದೆ ಎಂದು ಸ್ಟಾಫ್ ನರ್ಸ್ ವಿನಯ್ ಹೇಳಿದರು.
ಸ್ಯಾಚುರೇಶನ್ ತುಂಬಾನೆ ಕಡಿಮೆ ಇತ್ತು. ಮೊದಲ ದಿನದಿಂದಲೂ ಕಡಿಮೆ ಇತ್ತು. ಅಲ್ಲಿಂದ ಮಗುವನ್ನ ಕೈಯಲ್ಲೇ ಹಿಡಿದುಕೊಂಡು ಬಂದೆ ಎಂದು ಸ್ಟಾಫ್ ನರ್ಸ್ ಹನುಮಂತ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ