
ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಈ ವರ್ಷ ಮಳೆ ಸಂಬಂಧಿ ಅವಘಡಗಳಿಂದ 70 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆಯೇ ಶೇ 50ಕ್ಕಿಂತ ಹೆಚ್ಚಿದೆ ಎಂದು ವರದಿಯಾಗಿದೆ. ಮಳೆ ಕೊರತೆಯ ಕಾರಣ ಕಳೆದ ಐದು ವರ್ಷಗಳಲ್ಲೇ ಈ ಮುಂಗಾರಿನಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಕಡಿಮೆಯಾಗಿದೆ. 2025-26ರಲ್ಲಿ ಮಳೆ ಸಂಬಂಧಿ ಅವಘಡಗಳಿಂದ 147 ಮಂದಿ ಮೃತಪಟ್ಟಿದ್ದರು. ಈ ಪೈಕಿ 64 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದರು. ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಸಿಡಿಲು ಬಡಿದು 36 ಮಂದಿ ಮೃತಪಟ್ಟಿದ್ದಾರೆ. ಮನೆ ಅಥವಾ ಗೋಡೆ ಕುಸಿದು 17 ಮಂದಿ, ಭಾರಿ ಮಳೆ, ಪ್ರವಾಹ ಹಾಗೂ ಬಿರುಗಾಳಿಗೆ ಮರಗಳು ಉರುಳಿ 11 ಮಂದಿ ಮೃತಪಟ್ಟಿದ್ದಾರೆ. ಭೂಕುಸಿತದಿಂದ ಮೂವರು ಹಾಗೂ ಜಲಮೂಲಗಳಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.
2022-23ರಿಂದ ಈವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಿಂದ 779 ಮಂದಿ ಮೃತಪಟ್ಟಿದ್ದಾರೆ. ಇವರ ಪೈಕಿ 340 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಂಕಿ-ಅಂಶಗಳ ಪ್ರಕಾರ, 2011ರಿಂದ 2026ರವರೆಗೆ ರಾಜ್ಯದಲ್ಲಿ ಸಿಡಿಲು ಬಡಿದು 1,190 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಾಗಿದ್ದಾರೆ.
ಕಳೆದ 15 ವರ್ಷಗಳ ಅಂಕಿ-ಅಂಶದಲ್ಲಿ ಸಿಡಿಲು ಸಂಬಂಧಿ ಸಾವುಗಳಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ನಂತರ ಕಲಬುರಗಿ, ವಿಜಯಪುರ, ಬೀದರ್, ಹಾಸನ, ಕೊಪ್ಪಳ, ಹಾವೇರಿ, ಯಾದಗಿರಿ, ತುಮಕೂರು, ಗದಗ ಹಾಗೂ ರಾಯಚೂರು ಜಿಲ್ಲೆಗಳಿವೆ.
ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM), ಭೂ ವಿಜ್ಞಾನ ಸಚಿವಾಲಯ (MoES), ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (NRSC) ಹಾಗೂ ಇಸ್ರೋ ಅಧ್ಯಯನಗಳ ಪ್ರಕಾರ, 2019ರಿಂದ 2023ರವರೆಗೆ ಕ್ಲೌಡ್-ಟು-ಗ್ರೌಂಡ್ (CG) ಸಿಡಿಲಿನ ಘಟನೆಗಳಲ್ಲಿ ಶೇ 53ರಷ್ಟು ಏರಿಕೆಯಾಗಿದೆ. ಜಾಗತಿಕ ತಾಪಮಾನ ಏರಿಕೆ, ಜಲಮೂಲಗಳ ಕ್ಷೀಣತೆ, ಅರಣ್ಯ ನಾಶ, ಮಾಲಿನ್ಯ ಹಾಗೂ ಪರಿಸರದ ಹಾನಿ ಸಿಡಿಲಿನ ಘಟನೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದು ಅಧ್ಯಯನ ಹೇಳಿದೆ.
ಸಿಡಿಲಿನಿಂದ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 11 ಸಿಡಿಲು ಪತ್ತೆ ಸಂವೇದಕ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಿಡಿಲಿನ ಸಾಧ್ಯತೆಯನ್ನು ಪತ್ತೆಹಚ್ಚಿ ಸುಮಾರು 45 ನಿಮಿಷ ಮುಂಚಿತವಾಗಿ ಎಚ್ಚರಿಕೆ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಅಭಿವೃದ್ಧಿಪಡಿಸಿರುವ ‘ಸಿಡಿಲು’ ಆ್ಯಪ್ ಮೂಲಕವೂ ಸ್ಥಳ ನಿರ್ದಿಷ್ಟ ಸಿಡಿಲಿನ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತಿದೆ. ಈ ಎಚ್ಚರಿಕೆಗಳನ್ನು ಎಸ್‌ಎಂಎಸ್ ಮೂಲಕವೂ ಜನರಿಗೆ ಕಳುಹಿಸಲಾಗುತ್ತಿದೆ. ಮುನ್ನೆಚ್ಚರಿಕಾ ವ್ಯವಸ್ಥೆ ಅಳವಡಿಸಿದ ಬಳಿಕ ರಾಜ್ಯದಲ್ಲಿ ಸಿಡಿಲಿನಿಂದ ಸಂಭವಿಸುವ ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ಹೊನ್ನಾಂಬ ಎಸ್. ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಆದರೆ, ಸಿಡಿಲಿನಿಂದಾಗುವ ಬಹುತೇಕ ಸಾವುಗಳು ಕೃಷಿ ಜಮೀನುಗಳಲ್ಲೇ ಸಂಭವಿಸುತ್ತಿವೆ. ಜಮೀನುಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಅಥವಾ ರೈತರು ಮೊಬೈಲ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯದಿರುವುದರಿಂದ ಎಚ್ಚರಿಕೆ ತಲುಪದಿರುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.
ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಸಿಡಿಲು ಬಡಿದು ಆರು ಮಂದಿ ಮೃತಪಟ್ಟಿದ್ದು, ಈ ಎಲ್ಲ ಘಟನೆಗಳು ಹಠಾತ್ ಸುರಿದ ಮಳೆಯಿಂದ ಸಂಭವಿಸಿವೆ ಎಂದು ಹೊನ್ನಾಂಬ ಎಸ್. ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ