Bengaluru Rain: ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮೂರು ದಿನ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆ ಮತ್ತು ಪ್ರವಾಹದಿಂದ ಹಾನಿಯಾಗಿದ್ದರಿಂದ ಕಳೆದ 10 ದಿನಗಳಲ್ಲಿ 4.5 ಲಕ್ಷ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದಿಂದ ಒಟ್ಟು 330 ಕೋಟಿ ರೂ. ಜಮಾ ಮಾಡಲಾಗಿದೆ.
ದೇಶದಲ್ಲಿ ಜವಾದ್ ಚಂಡಮಾರುತವು ದುರ್ಬಲಗೊಂಡಿರುವುದರಿಂದ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೂ ಸೈಕ್ಲೋನಿಕ್ ಮಾರುತಗಳ ಪ್ರಭಾವದಿಂದ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನಲ್ಲಿ ಇನ್ನೆರಡು ದಿನ ಒಣಹವೆ ಇರಲಿದ್ದು, ಮಲೆನಾಡಿನಲ್ಲಿ ಮಳೆ ಮುಂದುವರೆಯಲಿದೆ. ಕರ್ನಾಟಕದ ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಕರ್ನಾಟಕದ ಬಹುತೇಕ ಕಡೆ ಇಂದು ಮೋಡ ಕವಿದ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಇಂದು ಮಳೆ ಮುಂದುವರೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇಂದು 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಜೊತೆಗೆ, ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದೆ. ಇಂದು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಅಲ್ಲಲ್ಲಿ ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಲಡಾಖ್ ಮೇಲೆ ಅಲ್ಲಲ್ಲಿ ಹಿಮ ಬೀಳುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶ, ಮಣಿಪುರ, ಒಡಿಶಾ, ತೆಲಂಗಾಣ ಮತ್ತು ಲಕ್ಷದ್ವೀಪಗಳಲ್ಲಿ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ. ದೇಶದ ಉಳಿದ ಭಾಗಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನದ ಮುನ್ಸೂಚನೆ ನೀಡಲಾಗಿದೆ. ಇಂದು ಅಸ್ಸಾಂ, ಮೇಘಾಲಯ, ಬಿಹಾರ, ಒಡಿಶಾ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ರಾಜಸ್ಥಾನದಲ್ಲಿ ಇಂದು ಶೀತಗಾಳಿ ಉಂಟಾಗಲಿದ್ದು, ಮುಂದಿನ 2 ದಿನ ಮಳೆ ಹೆಚ್ಚಾಗಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗಲಿದೆ. ಇನ್ನೆರಡು ದಿನ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ಇಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಹಾಗೂ ಹಿಮಪಾತವಾಗಲಿದೆ. ಇಂದು ಆಂಧ್ರಪ್ರದೇಶದ ಕರಾವಳಿ, ಕೇರಳ ಮತ್ತು ತಮಿಳುನಾಡಿನಲ್ಲಿ ಚದುರಿದ ಮಳೆಯಾಗಲಿದೆ.
ತಮಿಳುನಾಡಿನ ಪುದುಚೇರಿ ಜೊತೆಗೆ ಉತ್ತರ ಕರಾವಳಿ ಜಿಲ್ಲೆಗಳಾದ ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ, ಕಾರೈಕಲ್, ತಿರುವರೂರ್, ತಂಜಾವೂರು ಮತ್ತು ಪುದುಕ್ಕೋಟೈನಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಚೆನ್ನೈನಲ್ಲಿರುವ IMD ಮುನ್ಸೂಚನೆ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಂದು ತೂತುಕುಡಿ ಜೊತೆಗೆ ಉತ್ತರದ ಆಂತರಿಕ ಜಿಲ್ಲೆಗಳಾದ ಕಲ್ಲಕುರುಚಿ, ತಿರುವಣ್ಣಾಮಲೈ, ಅರಿಯಲೂರ್ ಮತ್ತು ಪೆರಂಬಲೂರ್‌ನಾದ್ಯಂತ ಮಳೆಯಾಗಲಿದೆ. ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಕಳೆದ ಕೆಲವು ದಿನಗಳಿಂದ ತಿರುಚಿರಾಪಳ್ಳಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರ ಜಲಾವೃತವಾಗಿದೆ.
ಚೆನ್ನೈನಲ್ಲಿ ಭಾರೀ ಮಳೆಯಿಂದ ಇಂದು ‘ಆರೆಂಜ್’ ಅಲರ್ಟ್ ನೀಡಲಾಗಿದೆ. ಇಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ.
ಇದನ್ನೂ ಓದಿ: Karnataka Weather Today: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇನ್ನೂ 4 ದಿನ ಮಳೆ; ಚೆನ್ನೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ